ಆಟೋ ಪಲ್ಟಿ: ಶಿಕ್ಷಕಿ ಸಾವು, 8 ಮಂದಿಗೆ ಗಾಯ
ಮಂಡ್ಯ

ಆಟೋ ಪಲ್ಟಿ: ಶಿಕ್ಷಕಿ ಸಾವು, 8 ಮಂದಿಗೆ ಗಾಯ

July 11, 2018

ಮಂಡ್ಯ:  ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಪ್ಯಾಸೆಂಜರ್ ಆಟೋ ಪಲ್ಟಿಯಾಗಿ ಶಿಕ್ಷಕಿಯೊಬ್ಬರು ಮೃತಪಟ್ಟು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಜಲಸೂರ್ -ಹುಲಿಯೂರು ದುರ್ಗ ರಾಜ್ಯ ಹೆದ್ದಾರಿಯ ಧರ್ಮಸ್ಥಳ ಗೇಟ್ ಬಳಿ ಇಂದು ಸಂಜೆ ನಡೆದಿದೆ.

ಕೆ.ವಿ.ಇಂದ್ರಮ್ಮ (42) ಸಾವಿಗೀಡಾದ ಶಿಕ್ಷಕಿ.

ಘಟನೆ ವಿವರ: ಇಂದ್ರಮ್ಮ ಅವರು ಮಂಗಳವಾರ ಸಂಜೆ ತಾನು ಕೆಲಸ ಮಾಡು ತ್ತಿದ್ದ ತಟ್ಟೇಕೆರೆಯ ಸರ್ಕಾರಿ ಶಾಲೆಯಿಂದ ಸ್ವಗ್ರಾಮ ಕೆ.ಮಲ್ಲೇನಹಳ್ಳಿ ಗ್ರಾಮಕ್ಕೆ ತೆರಳಲು ಪ್ಯಾಸೆಂಜರ್ ಆಪೆ ಆಟೋ(ಕೆ.ಎ.54, 2095)ದಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಧರ್ಮಸ್ಥಳ ಗೇಟ್ ಬಳಿ ಆಟೋಗೆ ನಾಯಿಯೊಂದು ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋದ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋದಲ್ಲಿದ್ದ ಶಿಕ್ಷಕಿಯರಾದ ಇಂದ್ರಮ್ಮ, ಫರಿದಾ ಬೇಗಂ, ಆಯಿಷಾ ಕರಿಕ್ಯಾತನಹಳ್ಳಿ ಮತ್ತು ಬಸವರಾಜು ರಾಯಚೂರು, ಪ್ರೇಮಮ್ಮ ಕದಬಹಳ್ಳಿ ಸೇರಿದಂತೆ 9ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನೆಲ್ಲಾ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತು. ಆದರೆ ತೀವ್ರ ಗಾಯ ಗೊಂಡಿದ್ದ ಶಿಕ್ಷಕಿ ಇಂದ್ರಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಇನ್ನುಳಿದ ತೀವ್ರ ಗಾಯಗಳಾ ಗಿರುವ 8 ಜನರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಆಟೋ ಚಾಲಕ ಪರಾರಿ ಯಾಗಿದ್ದಾನೆ. ಆಟೋದಲ್ಲಿ ಹೆಚ್ಚಿನ ಜನರನ್ನು ಕೂರಿಸಿಕೊಂಡು ಪ್ರಯಾಣಿಸುತ್ತಿದ್ದರಿಂದ ಹಾಗೂ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »