ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ಮಂಡ್ಯ

ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

July 11, 2018

ಮಂಡ್ಯ: ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರ ದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಮತ್ತು ಸಿಐಟಿಯು ನೇತೃತ್ವದಲ್ಲಿಂದು ಬೆಳಿಗ್ಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸಮಾವೇಶಗೊಂಡ ಬೃಹತ್ ಸಂಖ್ಯೆ ಯಲ್ಲಿದ್ದ ಪ್ರತಿಭಟನಾಕಾರರು ಬೆಂಗಳೂರು -ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ನಡೆಸಿದರು. ಬಳಿಕ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು.

ಅಂಗನವಾಡಿ ನೌಕರರ ಬೇಡಿಕೆ ಈಡೇ ರಿಸದೆ ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಮಿಕರ ಸಂವಿಧಾನಾತ್ಮಕ ಹಕ್ಕಾದ ಆಹಾರ, ಆರೋಗ್ಯ, ಶಿಕ್ಷಣದ ಹಕ್ಕನ್ನು ಸಮರ್ಪಕವಾಗಿ ಜಾರಿ ಮಾಡದೇ ಐಸಿ ಡಿಎಸ್‍ಗೆ ನೇರ ನಗದು ವರ್ಗಾವಣೆ ಮೂಲಕ ತನ್ನ ಹಿಡಿತ ಸಾಧಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಗೌರವಧನ ವನ್ನು ಕೇಂದ್ರವೂ ನೀಡಬೇಕು. ಅಂಗನ ವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ, ಯುಕೆಜಿ ಶಿಕ್ಷಣ ಜಾರಿ ಮಾಡಬೇಕು. ಇಲಾಖೆಗೆ ನೀಡುವ ಅನುದಾನವನ್ನು ಕೇಂದ್ರ ಕಡಿತ ಗೊಳಿಸಬಾರದು. ಐಸಿಡಿಎಸ್ ಆಹಾರದ ಕುರಿತು ನೇರ ನಗದು ವರ್ಗಾವಣೆ ತರಬಾರದು ಎಂದು ತೀವ್ರವಾಗಿ ವಿರೋಧಿಸಿದರು.
ಹೊಸ ಅಂಗನವಾಡಿ ಕೇಂದ್ರಗಳು ಬಂದಾಗ ಮಿನಿ ಅಂಗನವಾಡಿ ಕಾರ್ಯ ಕರ್ತೆಯರಿಗೆ ಆದ್ಯತೆ ಕೊಡಬೇಕು. ಮಿನಿ ಅಂಗನವಾಡಿಗಳನ್ನು ಸಂಪೂರ್ಣ ಅಂಗನ ವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆ, ರಜೆ, ಖಾಯಿಲೆಗಳು ಬಂದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೂ ವರ್ಗಾವಣೆ, ಮುಂಬಡ್ತಿ ನೀಡುವಂತೆ ಒತ್ತಾಯಿಸಿದರು.

ಕನಿಷ್ಠ ಕೂಲಿ ವ್ಯಾಪ್ತಿಗೆ ತರದೆ ಕಾರ್ಮಿಕರನ್ನು ದುಡಿಸುತ್ತಿದೆ. ಸೇವಾ ಜೇಷ್ಠತೆ ಆಧಾರ ದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. 45 ಎಲ್‍ಐಸಿ ಶಿಫಾರಸಿನ ಪ್ರಕಾರ 18 ಸಾವಿರ ರೂ. ಕನಿಷ್ಠ ವೇತನ ಜಾರಿಗೊಳಿಸಬೇಕು. ಮಾತೃಪೂರ್ಣ ಸೇರಿದಂತೆ ಕೆಲಸದ ಮೇಲಿನ ಹೊರೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮತ್ತೊಂದೆಡೆ ಬೆಲೆ ಏರಿಕೆ ಯಾಗುತ್ತಿವೆ. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಇನ್ನಿತರೆ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 11 ರಿಂದ 12 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗಿದೆ. ಅದರಂತೆ ರಾಜ್ಯದಲ್ಲೂ ವೇತನ ಹೆಚ್ಚಳ ಮಾಡುವಂತೆ ಅವರು ಆಗ್ರಹಪಡಿಸಿದರು.

ಮಾತೃ ವಂದನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಂಗನ ವಾಡಿ ನೌಕರರ ಮುಖಾಂತರ ಜಾರಿ ಮಾಡಿಸುತ್ತಿದೆ. 2010ರಿಂದ ಕೇಂದ್ರ ಸರ್ಕಾರ ಗೌರವಧನದಲ್ಲಿ ಒಂದು ಪೈಸೆಯನ್ನೂ ಹೆಚ್ಚಳ ಮಾಡಿಲ್ಲ. ಈ ಕಾರ್ಯಕ್ರಮಕ್ಕೆ 300 ರೂ. ನಿಗದಿಪಡಿಸಬೇಕು. ಅಲ್ಲಿಯ ವರೆಗೆ ಮಾತೃವಂದನಾ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ಅನುಕಂಪದ ಆಧಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯ ಕಿಯರ ಮದುವೆಯಾಗದ ಹೆಣ್ಣು ಮಕ್ಕಳಿಗೆ ಎಂಬ ಷರತ್ತು ತೆಗೆದು ಕುಟುಂಬದವರಿಗೆ ಎಂದು ತಿದ್ದುಪಡಿಯಾಗಬೇಕು. ಹೊಸ ನಿವೃತ್ತಿ ಯೋಜನೆಯಲ್ಲಿ ಸದಸ್ಯರಿಗೆ ಇದುವರೆಗೂ ಪಾನ್ ಕಾರ್ಡ್ ಕೊಟ್ಟಿಲ್ಲ. ನಿವೃತ್ತಿ ಹೊಂದಿ 5-6 ತಿಂಗಳಾದರೂ ನಿವೃತ್ತಿ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಂಜುಳಾ ರಾಜ್, ಅಧ್ಯಕ್ಷೆ ಜಯಲಕ್ಷ್ಮಮ್ಮ, ಖಜಾಂಚಿ ಪ್ರಮೀಳಾಕುಮಾರಿ, ಲತಾ, ಕಮಲಾ, ಶಿವಮ್ಮ, ರೋಹಿಣಿ , ಜಯಶೀಲಾ, ಎಂ.ಗೀತಾ, ಎಂ.ಬಿ. ಸವಿತಾ, ಪುಷ್ಪಾವತಿ, ಮೀನಾಕ್ಷಿ, ಚಂಪಾ ಕುಮಾರಿ, ಶೋಭಾ, ಗಾಯಿತ್ರಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Translate »