ಡೋಲಾಯಮಾನ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು
ಮೈಸೂರು

ಡೋಲಾಯಮಾನ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು

May 24, 2020

ಮೈಸೂರು, ಮೇ 23 (ಆರ್‍ಕೆ)- ಸರ್ಕಾರ ಒಂದು ಖಚಿತ ನಿಲುವು ತಾಳದೇ ದಿನ ದೂಡುತ್ತಿರುವುದರಿಂದ ಮೈಸೂರಿನ ಹೋಟೆಲ್ ಮಾಲೀಕರ ಸ್ಥಿತಿ ಡೋಲಾಯ ಮಾನವಾಗಿದೆ. ಕೋವಿಡ್ ಲಾಕ್‍ಡೌನ್ ನಿರ್ಬಂಧ ದಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್ ಆಗಿರುವ ಹೋಟೆಲ್‍ಗಳ ಮಾಲೀಕರು, ಲಾಕ್‍ಡೌನ್ ಸಡಿಲಗೊಂಡು ಇನ್ನಿತರ ಎಲ್ಲಾ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಿ ದ್ದರೂ ಹೋಟೆಲ್‍ಗಳನ್ನು ಕೇವಲ ಪಾರ್ಸೆಲ್ ಸೇವೆಗೆ ಸೀಮಿತಗೊಳಿಸಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಮಂಗಳವಾರ ಬೆಂಗಳೂರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿ ಮಾಡಿ, ಮನವಿ ಸಲ್ಲಿಸಿದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿ ಗಳಿಗೆ 3 ದಿನದೊಳಗಾಗಿ ಹೋಟೆಲ್‍ಗಳ ತೆರೆಯುವ ಸಂಬಂಧ ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಇಂದೂ ಪದಾಧಿಕಾರಿಗಳು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿದ್ದರಾದರೂ, ಅತೀ ಶೀಘ್ರ ತೀರ್ಮಾನ ಕೈಗೊಂಡು ತಿಳಿಸುತ್ತೇವೆ ಎಂದೇ ಮತ್ತೆ ಹೇಳಿ ಕಳುಹಿಸಿದ್ದಾರೆ ಎಂದು ಮೈಸೂರು ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಉದ್ಯಮ ಅಧೋಗತಿಗಿಳಿದಿದೆ. ಭಾರೀ ನಷ್ಟವೂ ಆಗಿದೆ. ಅಂತಾರಾಜ್ಯ ಮತ್ತು ವಿದೇಶಿ ಗ್ರಾಹಕ ರನ್ನೇ ಅವಲಂಬಿಸಿರುವ ಮೈಸೂರಿನ ಸ್ಟಾರ್ ಹೋಟೆಲ್ ಗಳೂ ಲಾಕ್‍ಡೌನ್ ತೆರವಾದರೂ ಚೇತರಿಸಿಕೊಳ್ಳಲು ಕನಿಷ್ಠ ವರ್ಷ ಬೇಕಾಗುತ್ತದೆ. ಈಗಾಗಲೇ ಸದರನ್ ಸ್ಟಾರ್ ಹೋಟೆಲ್ ಅನ್ನು ಬಂದ್ ಮಾಡಲು ಅದರ ಮಾಲೀಕರು ನಿರ್ಧರಿ ಸಿರುವುದೇ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ತಿಳಿಸಿದರು.

ಸುಮಾರು 8500 ಕೊಠಡಿ ಹೊಂದಿರುವ ಮೈಸೂರಿನ 350 ಹೋಟೆಲ್‍ಗಳು, ದರ್ಶಿನಿಗಳ ಪೈಕಿ ಕನಿಷ್ಠ 20 ಹೋಟೆಲ್‍ಗಳು ಮುಚ್ಚುವ ಸ್ಥಿತಿ ತಲುಪಿವೆ. ಕೈಗಾರಿಕೆಗಳು, ವಾಣಿಜ್ಯೋದ್ಯಮ, ಸಾರಿಗೆ ವ್ಯವಸ್ಥೆಗೆ ಅವಕಾಶ ನೀಡಲಾ ಗಿದೆ. ಹಾಗಾದರೆ ಜನರು ಎಲ್ಲಿ ಊಟ, ತಿಂಡಿ ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಯೋಚನೆಯನ್ನೇ ಮಾಡಿಲ್ಲ ಎಂದು ನಾರಾಯಣಗೌಡರು ತಿಳಿಸಿದ್ದಾರೆ.

ಸಿದ್ದಾರ್ಥ ಗ್ರೂಪ್‍ನ ತರುಣ್ ಗಿರಿ, ‘ಮೈಸೂರು ಮಿತ್ರ’ನಲ್ಲಿ ಪ್ರತಿಕ್ರಿಯಿಸಿ, ಹೋಟೆಲ್‍ಗಳನ್ನು ತೆರೆಯುವ ಬಗ್ಗೆ ಸರ್ಕಾರ ದಿಂದ ಯಾವುದೇ ಸ್ಪಷ್ಟತೆ ಸಿಗುತಿಲ್ಲವಾದ್ದರಿಂದ ನಾವು ಗೊಂದಲದಲ್ಲಿದ್ದೇವೆ ಎಂದರು. ಮತ್ತೊಂದೆಡೆ ಬಾರ್ ಲೈಸೆನ್ಸ್, ರಿನೀವಲ್ ಶುಲ್ಕ ಪಾವತಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಲಾಕ್‍ಡೌನ್ ನಿಂದಾಗಿ 2 ತಿಂಗಳು ವ್ಯಾಪಾರವಿಲ್ಲದೆ ತೊಂದರೆಯಾಗಿರು ವುದರಿಂದ ಲೈಸೆನ್ಸ್ ರಿನೀವಲ್ ಫೀ ಪಾವತಿಸಲು ಕನಿಷ್ಠ 3 ತಿಂಗಳು ಅವಕಾಶ ನೀಡಿ ಮದ್ಯ ಮಾರಾಟಕ್ಕೆ ಅನು ಮತಿ ನೀಡಿದರೆ ಮಾತ್ರ ಉದ್ದಿಮೆದಾರರಿಗೆ ಅನುಕೂಲ ವಾಗುತ್ತದೆ ಎಂದು ತರುಣ್ ಗಿರಿ ನುಡಿದರು.

Translate »