ಹೋಟೆಲ್ ಉದ್ಯಮದಲ್ಲಿ ವಹಿವಾಟು ಭಾರೀ ಇಳಿಮುಖ ವಿದ್ಯುತ್ ಶುಲ್ಕ ಪಾವತಿಗೆ ಕಾಲಾವಕಾಶ ನೀಡಿ
ಮೈಸೂರು

ಹೋಟೆಲ್ ಉದ್ಯಮದಲ್ಲಿ ವಹಿವಾಟು ಭಾರೀ ಇಳಿಮುಖ ವಿದ್ಯುತ್ ಶುಲ್ಕ ಪಾವತಿಗೆ ಕಾಲಾವಕಾಶ ನೀಡಿ

November 13, 2020

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ
ಮೈಸೂರು, ನ.12(ಪಿಎಂ)- ಕೊರೊನಾ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದ್ದು, ಉದ್ಯಮ ಯಥಾಸ್ಥಿತಿಗೆ ಮರಳಿದ ನಂತರದಲ್ಲಿ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶ ನೀಡಬೇಕು ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದಂತೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ಸೆಸ್ಕ್ ಕಾರ್ಯಾಲಯದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕೊರೊನಾ ಅಪ್ಪಳಿಸಿದ ಪರಿಣಾಮ ಕಳೆದ 8 ತಿಂಗಳುಗಳಿಂದ ಹೋಟೆಲ್‍ಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ಭಾರೀ ಪ್ರಮಾಣದ ಇಳಿಮುಖವಾಗಿದೆ. ಪರಿಣಾಮ ವಹಿವಾಟಿಗೆ ಸಂಬಂಧಿಸಿದ ಚಟುವಟಿಕೆ ನಿರ್ವಹಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ. ಹಲವು ಸಿಬ್ಬಂದಿಯೂ ಕೆಲಸ ಕಳೆದುಕೊಂಡಿದ್ದಾರೆ. ದಸರಾ ವೇಳೆ ಪ್ರವಾಸಿ ತಾಣಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಿ, ಬಳಿಕ ಹಿಂತೆದುಕೊಳ್ಳಲಾಯಿತು. ಆದರೂ ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಉದ್ಯಮ ಯಥಾಸ್ಥಿತಿಗೆ ಮರಳಿದ ನಂತರ ಬಾಕಿ ಇರುವ 8 ತಿಂಗಳ ವಿದ್ಯುತ್ ಶುಲ್ಕವನ್ನು ಕಂತಿನ ರೂಪದಲ್ಲಿ ಭರಿಸಲು ಅವಕಾಶ ನೀಡುವ ಜೊತೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದಂತೆ ಮನವಿ ಸಲ್ಲಿಸಲಾಯಿತು. ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿಯ ಅಧ್ಯಕ್ಷ ರವಿಶಾಸ್ತ್ರಿ, ಪದಾಧಿಕಾರಿ ಗಳಾದ ರಾಘವೇಂದ್ರತಂತ್ರಿ, ಅಯೂಬ್ ಖಾನ್ ಮತ್ತಿತರರು ಹಾಜರಿದ್ದರು.

Translate »