ನೂತನ ಕೈಗಾರಿಕಾ ನೀತಿ ಘೋಷಿಸಿ ಭಾರೀ ಉದ್ಯೋಗ ಸೃಷ್ಟಿ: ಸಿಎಂ
ಮೈಸೂರು

ನೂತನ ಕೈಗಾರಿಕಾ ನೀತಿ ಘೋಷಿಸಿ ಭಾರೀ ಉದ್ಯೋಗ ಸೃಷ್ಟಿ: ಸಿಎಂ

June 23, 2020

ಬೆಂಗಳೂರು,ಜೂ.22(ಕೆಎಂಶಿ)-ನೂತನ ಕೈಗಾರಿಕಾ ನೀತಿ 2019-24 ಅನ್ನು ಜಾರಿಗೆ ತಂದು ದೊಡ್ಡ ಮಟ್ಟದ ಉದ್ಯೋಗ ಸೃಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸಿ.ಐ.ಐ ಆಯೋಜಿಸಿದ್ದ 12ನೇ ಹೋರಾಸಿಸ್ ಇಂಡಿಯಾ ಸಭೆಯಲ್ಲಿ ಪಾಲ್ಗೊಂಡು `ಕೋವಿಡ್ ನಂತರ ಆರ್ಥಿಕ ಅಭಿವೃದ್ಧಿ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಕೈಗಾರಿಕಾ ವಲಯದ ಸದಸ್ಯರನ್ನೊಳಗೊಂಡ ವಿಶೇಷ ಟಾಸ್ಕ್‍ಫೋರ್ಸ್‍ನ್ನು ರಚಿಸಲಾಗಿದ್ದು, ರಾಜ್ಯಕ್ಕೆ ಹೊಸದಾಗಿ ಹೂಡಿಕೆಗಳನ್ನು ಗುರುತಿಸಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸ್ಯಾಂಡ್ ಬಾಕ್ಸ್ ನಿಯಂತ್ರಣಕ್ಕಾಗಿ ಸರ್ಕಾರವು ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪಿಸಲು ಕಾಯ್ದೆಯನ್ನು ಅನುಮೋದಿಸಿದೆ ಎಂದರು.

ರಾಜ್ಯವು ಕೋವಿಡ್-19 ಸೋಂಕನ್ನು ನಿಯಂತ್ರಿಸಲು 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿದ್ದು, ಈ ಸವಾಲನ್ನು ಎದುರಿಸಲು ಸಹಕರಿಸುತ್ತಿರುವ ವೈದ್ಯರು, ನಾಗರಿಕ ಸಂಸ್ಥೆಗಳು, ಪೊಲೀಸ್ ಮತ್ತು ಸಾರ್ವಜನಿಕರಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು. ಲಾಕ್‍ಡೌನ್ ಅನ್ನು ಸಡಿಲಗೊಳಿಸಿ ಕ್ರಮೇಣವಾಗಿ ಆರ್ಥಿಕತೆ ಯನ್ನು ಪ್ರಾರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಶಾಲೆಗಳು, ಮನರಂಜನಾ ಸೌಲಭ್ಯಗಳು, ಮೆಟ್ರೋ ರೈಲು ಮತ್ತು ಅಂತರರಾಷ್ಟ್ರೀಯ ವಿಮಾನ ಯಾನವನ್ನು ಹೊರತುಪಡಿಸಿ ಇನ್ನೆಲ್ಲ ಚಟುವಟಿಕೆಗಳು ಪುನರಾರಂಭವಾಗಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಶೇ.80ರಷ್ಟು ಕೈಗಾರಿಕೆಗಳು ಶೇ.60ರ ಸಾಮಥ್ರ್ಯದೊಂದಿಗೆ ಕಾರ್ಯನಿರ್ವಹಿಸು ತ್ತಿದ್ದು, ಇದು ನಿಧಾನವಾಗಿ ಸುಧಾರಿಸುತ್ತಿದೆ. ಎಫ್.ಡಿ.ಐ ಹೂಡಿಕೆಗಳನ್ನು ಆಕರ್ಷಿಸು ವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಸರಳೀಕೃತ ಗೊಳಿಸಲಾಗಿದ್ದು, ಹೂಡಿಕೆಗಳನ್ನು ಆಕರ್ಷಿಸಲು ಈ ಉಪಕ್ರಮ ಸಹಕಾರಿ ಯಾಗಲಿದೆ ಎಂದರು. ಆರ್ಥಿಕತೆಯ ಎಲ್ಲಾ ವಲಯಗಳನ್ನು ಜಾಗರೂಕತೆಯಿಂದ ತೆರೆಯಲು ಸರ್ಕಾರ ಆದ್ಯತೆ ನೀಡಿದ್ದು, ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಉತ್ತೇಜನಾ ಚಟುವಟಿಕೆಗಳನ್ನು ಕೈಗೊಳ್ಳಲಿದೆ ಎಂದರು. ಕೋವಿಡ್-19 ಸೋಂಕಿನ ಆಘಾತದಿಂದ ನಾವು ಹೊರಬರುತ್ತಿದ್ದು, ಕೈಗಾರಿಕಾ ವಲಯದ ಸನ್ನಿ ವೇಶವು ಶೀಘ್ರದಲ್ಲಿಯೇ ಸಹಜತೆಯತ್ತ ಮರಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

Translate »