ಕುವೆಂಪುನಗರದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಸ್ನೇಕ್ ಶ್ಯಾಮ್‍ರಿಂದ ರಕ್ಷಣೆ
ಮೈಸೂರು

ಕುವೆಂಪುನಗರದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಸ್ನೇಕ್ ಶ್ಯಾಮ್‍ರಿಂದ ರಕ್ಷಣೆ

September 14, 2020

ಮೈಸೂರು, ಸೆ.13(ಎಂಟಿವೈ)- ಮೈಸೂರಿನ ಕುವೆಂಪುನರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿ ಶನಿವಾರ ರಾತ್ರಿ ಬಾರಿ ಗಾತ್ರ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆಶ್ಚರ್ಯದೊಂದಿಗೆ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಮ್ ಖಾಲಿ ನಿವೇಶನದ ಪೊದೆಯಲ್ಲಿ ಅಡಗಿದ್ದ ಹೆಬ್ಬಾವನ್ನು ರಕ್ಷಿಸಿ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ನಿವಾರಿಸಿದರು.

ಕುವೆಂಪುನಗರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿ ಅಕ್ಷಯ್ ಬಂಡಾರದಿಂದ ಶಾಂತಿಸಾಗರ್‍ಗೆ ಹೋಗುವ ರಸ್ತೆಯಲ್ಲಿ ಕಳೆದ ರಾತ್ರಿ 9.45ರಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಬಿಜೆಪಿ ಮುಖಂಡ ರಮೇಶ್(ಬಣ್ಣ) ಸ್ನೇಹಿತ ಜಗದೀಶ ಎಂಬುವರೊಂದಿಗೆ ಹೋಗು ತ್ತಿದ್ದಾಗ ಹೆಬ್ಬಾವು ರಸ್ತೆ ದಾಟುತ್ತಿರುವುದು ಕಂಡ ಬಂದಿದೆ. ಕೂಡಲೇ ರಮೇಶ್ ಸುತ್ತಮುತ್ತ ಇದ್ದ ಜನರನ್ನು ಎಚ್ಚರಿಸಿದ್ದಾರೆ. ಹೆಬ್ಬಾವು ಸಮೀಪದ ಖಾಲಿ ನಿವೇಶನಕ್ಕೆ ನುಗ್ಗಿದೆ. ಹೆಬ್ಬಾವು ಇರುವ ಬಗ್ಗೆ ಸ್ನೇಕ್ ಶ್ಯಾಮ್ ಅವರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಮಂಡಲ ಹಾವಿರಬೇಕೆಂದು ಸ್ನೇಕ್ ಶ್ಯಾಮ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಸ್ಥಳೀಯರು ಹೆಬ್ಬಾವೆಂದು ಖಚಿತವಾಗಿ ಹೇಳಿದ ಹಿನ್ನೆಲೆಯಲ್ಲಿ ಪುತ್ರ ಸೂರ್ಯ ಕೀರ್ತಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

ಮೊಬೈಲ್ ಟಾರ್ಚ್ ಆನ್ ಮಾಡಿ ಪೊದೆ ಬೆಳೆದಿದ್ದ ಖಾಲಿ ನಿವೇಶನದಲ್ಲಿ ಹುಡುಕಾಡಿದಾಗ ಎಕ್ಕದ ಗಿಡದ ಬುಡದಲ್ಲಿ ಹೆಬ್ಬಾವು ಅಡಗಿರುವುದು ಕಂಡುಬಂದಿದೆ. ಕೂಡಲೇ ಆ ಹಾವನ್ನು ರಕ್ಷಿಸಿ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕವನ್ನು ನಿವಾರಿಸಿದ್ದಾರೆ. ರಕ್ಷಿಸಲ್ಪಟ್ಟ ಹೆಬ್ಬಾವು 6ರಿಂದ 7 ವರ್ಷದ್ದಾಗಿದ್ದು, ಸುಮಾರು 8 ಅಡಿ ಉದ್ದವಿದೆ. ಹಾವನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಸ್ನೇಕ್ ಶ್ಯಾಮ್ ಪತ್ರಕರ್ತ ರೊಂದಿಗೆ ಮಾತನಾಡಿ, ಮೈಸೂರಿನ ಪ್ರತಿಷ್ಠಿತ ಬಟಾವಣೆ ಕುವೆಂಪು ನಗರದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸ್ಥಳೀಯ ಮುಖಂಡರಾದ ಬಣ್ಣ ರಮೇಶ್ ಅವರು ಕರೆ ಮಾಡಿದಾಗ ಮೊದಲ ನಂಬಿರಲಿಲ್ಲ. ಖಚಿತವಾಗಿ ಹೇಳಿದ್ದರಿಂದ ಕೆಆರ್‍ಎಸ್ ರಸ್ತೆಯಲ್ಲಿರುವ ನಮ್ಮ ದೇವಾಲಯದ ಹಸುಗಳ ಕೊಟ್ಟಿಗೆ ಸ್ವಚ್ಛ ಮಾಡುತ್ತಿದ್ದ ನಾನು ಪುತ್ರ ಸೂರ್ಯಕೀರ್ತಿಯೊಂದಿಗೆ ಸ್ಥಳಕ್ಕೆ ಬಂದು ಹುಡುಕಾಡಿದಾಗ ಪೊದೆಯಲ್ಲಿ ಹೆಬ್ಬಾವು ಇರುವುದು ಗೋಚರಿಸಿತು. ಅದನ್ನು ಸಂರಕ್ಷಿಸಲಾಗಿದೆ. ಕಳೆದ ವರ್ಷ ರಕ್ಷಿಸಿದ ಹೆಬ್ಬಾವು ಮೈಸೂರಲ್ಲಿ ರಕ್ಷಿಸಿದ 15ನೇ ಹೆಬ್ಬಾವಾಗಿದೆ. 1978ರಲ್ಲಿ ಹಾವನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದೇನೆ. ಇದುವರೆಗೆ 75 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದೇನೆ. ಆದರೆ 36,100 ಹಾವುಗಳ ಸಂರಕ್ಷಿಸಿರುವ ದಾಖಲೆ ಹೊಂದಿದ್ದೇನೆ ಎಂದರು.

Translate »