ಮಾನವ ಕಳ್ಳ ಸಾಗಾಣಿಕೆ ತಡೆ ಸಂಬಂಧ ತರಬೇತಿ ಕಾರ್ಯಾಗಾರ
ಮೈಸೂರು

ಮಾನವ ಕಳ್ಳ ಸಾಗಾಣಿಕೆ ತಡೆ ಸಂಬಂಧ ತರಬೇತಿ ಕಾರ್ಯಾಗಾರ

December 23, 2020

ಮೈಸೂರು,ಡಿ.22(ಎಸ್‍ಬಿಡಿ)-ಮೈಸೂರು ನಗರ ಪೊಲೀಸ್ ದೇವರಾಜ ವಿಭಾಗದ ವತಿಯಿಂದ `ಅಪರಾಧ ತಡೆ ಮಾಸಾ ಚರಣೆ’ ಅಂಗವಾಗಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ನಗರದ ಜೆ.ಕೆ.ಮೈದಾನದಲ್ಲಿರುವ ವೈದ್ಯಕೀಯ ಕಾಲೇಜಿನ ಅಮೃತೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉದ್ಘಾಟಿಸಿ, ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವಿಕೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು, ಅವರ ಸಬಲೀಕರಣ ಹಾಗೂ ಸಂಬಂಧಿತ ಕಾಯ್ದೆ, ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ಜೆಎಸ್‍ಎಸ್ ಕಾನೂನು ಕಾಲೇಜಿನ ಪ್ರೊಫೆಸರ್ ಸಾವಂತ್ ಅವರು, `ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ಸಂಬಂಧ ಇರುವ ಘಟಕದ ಸಂರಚನೆ, ಅದರ ಉದ್ದೇಶ, ಕಳ್ಳ ಸಾಗಾಣಿಕೆಗೆ ಕಾರಣಗಳು ಮತ್ತು ತಡೆಗಟ್ಟಲು ವಹಿಸಬೇಕಾದ ಕ್ರಮಗಳು, ಕಾನೂನು ಮತ್ತು ಕಾಯ್ದೆಗಳು’ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿವಾಕರ್ ಶೆಟ್ಟಿ ಅವರು `ಮಾನವ ಕಳ್ಳ ಸಾಗಾಣಿಕೆಯಿಂದ ಸಂರಕ್ಷಿಸಲ್ಪಟ್ಟ ನಂತರ ಅವರ ಪುನರ್ ವಸತಿ ಮತ್ತು ಸಬಲೀಕರಣ, ಈ ಸಂಬಂಧ ಇರುವ ಸರ್ಕಾರದ ಯೋಜನೆಗಳು ಮತ್ತು ಎನ್‍ಜಿಓಗಳ ಪಾತ್ರ’ ಕುರಿತು ವಿಸ್ತøತವಾಗಿ ಮಾತನಾಡಿದರು. ಉಪನ್ಯಾಸದ ಬಳಿಕ ಸಂಪನ್ಮೂಲ ವ್ಯಕ್ತಿ ಗಳಿಬ್ಬರೂ ನೆರೆದಿದ್ದವರ ಪ್ರಶ್ನೆಗಳಿಗೆ ಉತ್ತರಿಸಿದರು.

ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್, ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್‍ಸ್ಪೆಕ್ಟರ್‍ಗಳಾದ ದೇವರಾಜ ಠಾಣೆಗೆ ದಿವಾಕರ್, ಲಷ್ಕರ್ ಠಾಣೆಯ ಎಸ್.ಡಿ. ಸುರೇಶ್ ಕುಮಾರ್, ನಜರ್‍ಬಾದ್ ಠಾಣೆಯ ಶ್ರೀಕಾಂತ್, ಉದಯಗಿರಿ ಠಾಣೆಯ ಪೂಣಚ್ಚ, ಆಲನಹಳ್ಳಿ ಠಾಣೆಯ ಹರಿಯಪ್ಪ, ಮಹಿಳಾ ಠಾಣೆಯ ಲೋಲಾಕ್ಷಿ, ವಿವಿಧ ಠಾಣೆಗಳ ಎಎಸ್‍ಐಗಳು, ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಸೇರಿದಂತೆ ನೂರಾರು ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

 

 

Translate »