ಮೈಸೂರು `ಬಾಲಭವನ’ಕ್ಕೆ ಸಿಗಲಿದೆ ಕಾಯಕಲ್ಪ!
ಮೈಸೂರು

ಮೈಸೂರು `ಬಾಲಭವನ’ಕ್ಕೆ ಸಿಗಲಿದೆ ಕಾಯಕಲ್ಪ!

September 15, 2020

ಮೈಸೂರು, ಸೆ.14(ಆರ್‍ಕೆಬಿ)- ಕಳೆದ 13 ವರ್ಷಗಳಿಂದ ಶಿಥಿಲಗೊಂಡು ಪಾಳು ಬಿದ್ದಿದ್ದ ಮೈಸೂರಿನ ಬನ್ನಿಮಂಟಪದಲ್ಲಿ ರುವ `ಬಾಲಭವನಕ್ಕೆ’ ಕಾಯಕಲ್ಪ ಸಿಗುವ ಕಾಲ ಸನ್ನಿಹಿತವಾಗಿದೆ.

ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮಾ ಬಸವರಾಜು ಅವರ ಕೋರಿಕೆ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಸೋಮವಾರ ಬಾಲಭವನಕ್ಕೆ ಭೇಟಿ ನೀಡಿ ಶಿಥಿಲಗೊಂಡಿದ್ದ ಮಕ್ಕಳಾಟದ ರೈಲು, ದೋಣಿ ವಿಹಾರ, ರೈಲು ಬೋಗಿಗಳ ಸ್ಥಳ ಪರಿಶೀಲಿಸಿದರು.

ಮುಡಾದಿಂದ 1977ರಲ್ಲಿ 30 ವರ್ಷ ಗಳ ಅವಧಿಗೆ ಬಾಲಭವನಕ್ಕೆ 10 ಎಕರೆ ಯನ್ನು ಗುತ್ತಿಗೆಯಾಗಿ ನೀಡಲಾಗಿತ್ತು. ಈ ಅವಧಿಯಲ್ಲಿ ಬಾಲಭವನದ ಮಕ್ಕಳ ಟಾಯ್‍ಟ್ರೈನ್ ಮನರಂಜನಾ ತಾಣವಾಗಿ ಆಕರ್ಷಿಸಿತ್ತು. 2007ರಲ್ಲಿ ಗುತ್ತಿಗೆ ಅವಧಿ ಮುಗಿದಿತ್ತು. ನಂತರ ಗುತ್ತಿಗೆ ಅವಧಿ ವಿಸ್ತರಣೆಯಾಗಲೀ, ನವೀಕರಣವಾಗಲೀ ಮುಡಾದಿಂದ ಆಗಿರಲಿಲ್ಲ. 13 ವರ್ಷ ಗಳಿಂದ ಬಾಲಭವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಮಕ್ಕಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಟಾಯ್‍ಟ್ರೈನ್ 2016ರ ನಂತರ ಕೆಟ್ಟು ಸ್ಥಗಿತಗೊಂಡಿತ್ತು. ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದಿ ದ್ದರೂ ಪ್ರಯೋಜನವಾಗಿರಲಿಲ್ಲ. ಬಾಲ ಭವನದ ನೂತನ ಅಧ್ಯಕ್ಷೆಯಾಗಿ ಬಂದ ಚಿಕ್ಕಮ್ಮಾ ಬಸವರಾಜು ಬಾಲಭವನಕ್ಕೆ ಕಾಯಕಲ್ಪ ನೀಡಬೇಕೆಂದು ಮನಸ್ಸು ಮಾಡಿ, ಮುಡಾ ಅಧ್ಯಕ್ಷರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು.

ಬಾಲಭವನವನ್ನು ಯಾವ ರೀತಿ ಅಭಿ ವೃದ್ಧಿಪಡಿಸಬಹುದು? ಮಕ್ಕಳನ್ನು ಆಕರ್ಷಿ ಸಲು ಟಾಯ್‍ಟ್ರೈನ್ ಜೊತೆಗೆ ಬೇರೆನೇನು ಇರಬೇಕು ಎಂಬ ಕ್ರಿಯಾ ಯೋಜನೆ ಸಿದ್ಧ ಪಡಿಸಿ ಸಲ್ಲಿಸುವಂತೆ ಅಧ್ಯಕ್ಷೆ ಚಿಕ್ಕಮ್ಮಾ ಅವರಿಗೆ ರಾಜೀವ್ ಸೂಚಿಸಿದರು. ಕ್ರಿಯಾ ಯೋಜನೆ ಕೈಸೇರಿದ ಬಳಿಕ ಮುಡಾ ಏನೇನು ಮಾಡಬಹುದು ಎಂಬ ಬಗ್ಗೆ ಅಧಿಕಾರಿ ಗಳೊಂದಿಗೆ ಪರಿಶೀಲಿಸಿ ಬಾಲಭವನ ಅಭಿ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬಳಿಕ ಅದು ಸದುಪಯೋಗ ಆಗುವಂತೆ ಪ್ರಯ ತ್ನಿಸಲಾಗುವುದು. ಅಮ್ಯೂಸ್‍ಮೆಂಟ್ ಪಾರ್ಕ್‍ಗೆ ಅವಕಾಶವಿದ್ದು, ಈ ಬಗ್ಗೆ ಮುಂದಿನ ಹೆಜ್ಜೆ ಇಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮಾ ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಬಾಲಭವನ ವ್ಯವಸ್ಥಾಪಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.