ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ
ಬೆಂಗಳೂರು, ನ.12(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತದಲ್ಲಿ ನಾನೇ ಕೇಂದ್ರ ಬಿಂದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯಲ್ಲಿ ಪಕ್ಷದ ವತಿಯಿಂದ ಆಯ್ಕೆಗೊಂಡ ಮುನಿರತ್ನ ನಾಯ್ಡು, ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ನಂತರ ಅವರ ಕಾರ್ಯಾ ಲಯ ನೀಡಿರುವ ಪತ್ರಿಕಾ ಹೇಳಿಕೆಯಲ್ಲೇ ಇಂತಹ ಪದ ಪ್ರಯೋಗ ವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಪತನಗೊಂಡು ಯಡಿ ಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್-ಜೆಡಿಎಸ್‍ನ 15ಕ್ಕೂ ಹೆಚ್ಚು ಶಾಸಕರನ್ನು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಿಸಿ, ಬಿಜೆಪಿಗೆ ಸೇರ್ಪಡೆ ಮಾಡಿಸುವಲ್ಲಿ ಇವರ ಪಾತ್ರ ದೊಡ್ಡದು. ಇದೀಗ ಮುಖ್ಯಮಂತ್ರಿಯವರು ತಮ್ಮ ಮಂತ್ರಿಮಂಡಲವನ್ನು ಪುನರಚನೆ ಮಾಡುವುದಾಗಿ ಹೇಳಿದ್ದಾರೆ. ಮಂತ್ರಿ ಮಂಡಲ ಸೇರುವ ಆಕಾಂಕ್ಷಿಗಳು ರಮೇಶ್ ಜಾರಕಿಹೊಳಿಯ ಬೆನ್ನತ್ತಿದ್ದಾರೆ. ಸದಾಶಿವನಗರದ ಅವರ ಮನೆಯಲ್ಲಿ 20ಕ್ಕೂ ಹೆಚ್ಚು ಶಾಸಕರು ಸಭೆ ಸೇರಿ ಪುನರಚನೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು. ಅಷ್ಟೇ ಅಲ್ಲ ಕೆಲವರು ಯಡಿಯೂರಪ್ಪ ಸಂಪುಟದಲ್ಲಿ ತಮಗೂ ಮಂತ್ರಿ ಸ್ಥಾನ ಕೊಡಿಸುವಂತೆ ಜಾರಕಿಹೊಳಿ ಮೇಲೆ ಒತ್ತಡ ಹೇರಿದ್ದರು. ಇದಾದ ನಂತರ ಇಂದು ಮುನಿರತ್ನ ನಾಯ್ಡು, ಜಾರಕಿಹೊಳಿಯನ್ನು ಭೇಟಿ ಮಾಡಿ, ಮುಖಾಮುಖಿ ಚರ್ಚೆ ನಡೆಸಿದರು. ಈ ಬೆಳವಣಿಗೆ ನಂತರ ಅವರ ಕಾರ್ಯಾಲಯ ಇಂತಹ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.