ಸಿಎಂ ಹೆಚ್‍ಡಿಕೆ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ, ನನ್ನೆಲ್ಲಾ ಆಸ್ತಿ ಕೊಡಗು ಸಂತ್ರಸ್ತರಿಗೆ: ನಾರ್ವೆ ಸೋಮಶೇಖರ್
ಹಾಸನ

ಸಿಎಂ ಹೆಚ್‍ಡಿಕೆ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ, ನನ್ನೆಲ್ಲಾ ಆಸ್ತಿ ಕೊಡಗು ಸಂತ್ರಸ್ತರಿಗೆ: ನಾರ್ವೆ ಸೋಮಶೇಖರ್

September 17, 2018

ಅರಸೀಕೆರೆ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಹಾಗೇನಾದರೂ ಅವರು ಸಾಕ್ಷಿ ಸಮೇತ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆದು, ತನ್ನೆಲ್ಲಾ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಸಕಲೇಶಪುರ ವಿಧಾನಸಭೆ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ @ ಜಿಮ್ ಸೋಮ ಸವಾಲು ಹಾಕಿದರು.

ಪಟ್ಟಣದಲ್ಲಿ ನಡೆದ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದ ನಾರ್ವೆ ಸೋಮಶೇಖರ್, ಸಿಎಂ ಮಾಡಿರುವ ಅಕ್ರಮ ಆಸ್ತಿ ಗಳಿಕೆ, ಶಾಸಕರ ಖರೀದಿ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಸಿಎಂ ಕುಮಾರಸ್ವಾಮಿ ಅವರು ನನ್ನ ಬಗ್ಗೆ ಆರೋಪ ಮಾಡಿದರೆ ನೀವು ಅವರನ್ನೇ ಕೇಳಬೇಕು ಎಂದು ಸುದ್ದಿಗಾರರಿಗೆ ಹೇಳಿದರಲ್ಲದೆ, ಅವರ ಬಳಿ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಇವೆ. ಬೇಕಿದ್ದರೆ ತನಿಖೆ ನಡೆಸಲಿ. 48 ಗಂಟೆಗಳ ಕಾಲಾವಕಾಶ ನೀಡುತ್ತೇನೆ. ಅಕ್ರಮ ಆಸ್ತಿ ಗಳಿಕೆ, ಶಾಸಕರ ಖರೀದಿ ವಿಚಾರ ನನ್ನ ಮೇಲೆ ಮಾಡಿರುವ ಗಂಭೀರ ಆರೋಪವನ್ನು ಸಾಕ್ಷಿ ಸಮೇತ ಸಾಬೀತು ಪಡಿಸಲಿ. ಆರೋಪ ಸಾಬೀತು ಪಡಿಸಿದರೆ ಕೂಡಲೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಸಿಎಂ ಕುಮಾರಸ್ವಾಮಿ ಆರೋಪಕ್ಕೆ ನಾನು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ನನ್ನ ಮೇಲಿನ ಆರೋಪಕ್ಕೆ ಇದುವರೆಗೂ ಯಾವುದೇ ಸಾಕ್ಷಿ ಒದಗಿಸಿಲ್ಲ. ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನವನ್ನು ನಾನು ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಕೂಡ ನನಗೆ 47 ಸಾವಿರಕ್ಕೂ ಅಧಿಕ ಮತದಾರರು ಮತ ನೀಡಿದ್ದಾರೆ. ಕೆಲವೇ ಮತಗಳ ಅಂತರದಲ್ಲಿ ನಾನು ಸೋತಿದ್ದು, ನಿಮಗೂ ಗೊತ್ತಿದೆ. ನಾನು ಅಕ್ರಮವಾಗಿ ಹಣ ಸಂಪಾದಿಸಿದ್ದರೆ ಮುಂದಿನ ದಿನಗಳಲ್ಲಿ ಮತದಾರರೇ ನನ್ನ ಭವಿಷ್ಯ ನಿರ್ಧಾರ ಮಾಡಲಿದ್ದಾರೆ ಎಂದು ನುಡಿದರು.

Translate »