ಮೈಸೂರು: ಟಕ್.. ಟಕ್..ಟಕ್ ಕುದುರೆ ಹೆಜ್ಜೆ ಸದ್ದಿನೊಂದಿಗೆ ಟಾಂಗಾದಲ್ಲಿ ಕುಳಿತು ಸಂಚರಿಸುವುದು ಒಂದು ವಿಶಿಷ್ಟ ಅನುಭವ. ಮೈಸೂರು ಪರಂಪರೆಯೊಂದಿಗೆ ನಂಟು ಬೆಸೆದುಕೊಂಡಿರುವ ಟಾಂಗಾ, ಆಧುನಿಕ ಪ್ರಪಂಚದ ಆಕರ್ಷಕ ಸಾರಿಗೆ ಎಂದರೆ ತಪ್ಪಾಗಲಾರದು.
1897ರ ವೇಳೆಗೆ ಮೈಸೂರು ಪ್ರವೇಶಿಸಿದ ಟಾಂಗಾ ಗಾಡಿ, ಮೈಸೂರು ಸಂಸ್ಥಾನದಲ್ಲಿ ಪ್ರಮುಖ ಸಾರಿಗೆ ಸೌಲಭ್ಯವಾಗಿತ್ತು. ರಾಜ-ಮಹಾರಾಜರಿಗೂ ಟಾಂಗಾ ಗಾಡಿ ಎಂದರೆ ಅಚ್ಚುಮೆಚ್ಚು. ಸಾಮಾನ್ಯರೂ ಸಂಚಾರಕ್ಕೆ ಟಾಂಗಾ ಗಾಡಿಯನ್ನೇ ಅವಲಂಬಿಸಿದ್ದರು. ಎರಡು ದಶಕಗಳ ಹಿಂದೆಯೂ ಟಾಂಗಾ ಗಾಡಿಗಳ ಸದ್ದು ಜೋರಾಗಿಯೇ ಇತ್ತು. ಆದರೆ ಆಧುನಿಕತೆ ನಡುವೆ ಇದು ಮನೋಲ್ಲಾಸದ ಸವಾರಿಗೆ ಮೀಸಲಾಗಿವೆ. ಸದ್ಯ ಸಾಂಸ್ಕøತಿಕ, ಪಾರಂಪರಿಕ ನಗರಿ ಮೈಸೂರಿನಲ್ಲಿ ಟಾಂಗಾ ಗಾಡಿಗಳ ಸಂಚಾರವಿದೆ. ಪ್ರವಾಸಿಗರು ಸಾಮಾನ್ಯವಾಗಿ ಟಾಂಗಾದಲ್ಲಿ ಒಂದು ಸುತ್ತು ಹಾಕಿ ಸಂಭ್ರಮಿಸುತ್ತಾರೆ. ಬಲರಾಮ ದ್ವಾರ ಸೇರಿದಂತೆ ಅರಮನೆ ಸುತ್ತಮುತ್ತ, ಅಗ್ರಹಾರ ವೃತ್ತ, ಮೃಗಾಲಯ, ಸೆಂಟ್ ಫಿಲೋಮಿನಾ ಚರ್ಚ್ ಹೀಗೆ ಪ್ರವಾಸಿ ತಾಣಗಳಲ್ಲಿ ವಿಭಿನ್ನ ಮಾದರಿ ಟಾಂಗಾ ಗಾಡಿಗಳ ದರ್ಶನವಾಗುತ್ತದೆ.
ಟಾಂಗಾ ಓಡಿಸುವ ವೃತ್ತಿಯನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿರುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಅವರ ಬದುಕು ಇಂದಿಗೂ ಹಸ ನಾಗಿಲ್ಲ. ಟಾಂಗಾ ಗಾಡಿಗಳ ನಿರ್ವಹಣೆಗೆ ಬೇಕಾದ ಅಗತ್ಯ ಸೌಲಭ್ಯಗಳಿಲ್ಲ. ಆಗ ನಗರಪಾಲಿಕೆ ವತಿಯಿಂದ ಟಾಂಗಾ ಓಡಿ ಸಲು ಪರವಾನಗಿ ವ್ಯವಸ್ಥೆ ಇತ್ತು. ಟಾಂಗಾ ಗಾಡಿಗೆ ನಂಬರ್ ಸಹ ನೀಡುತ್ತಿದ್ದರು. ಟಾಂಗಾ ಓಡಿಸುವವರಿಗೆ ಬ್ಯಾಡ್ಜ್ ನೀಡಲಾಗುತ್ತಿತ್ತು. ಗಾಡಿಗೆ ಲೈಟ್ ಹಾಗೂ ಬೆಲ್ ವ್ಯವಸ್ಥೆ ಇಲ್ಲವಾಗಿದ್ದರೆ, ಪೊಲೀಸರು ದಂಡ ವಿಧಿಸುತ್ತಿದ್ದರು. ಕುದುರೆಯ ಆರೋಗ್ಯ ಸ್ಥಿತಿಯನ್ನು ಹಾಗಾಗ ಪೊಲೀಸರು ಗಮನಿಸುತ್ತಿದ್ದರು ಎನ್ನುತ್ತಾ ಅಂದಿನ ಟಾಂಗಾ ವೈಭವವನ್ನು ಸ್ಮರಿಸಿಕೊಳ್ಳುತ್ತಾರೆ ಮೈಸೂರು ಅರಮನೆ ಬಳಿ ಟಾಂಗಾ ಓಡಿಸುವ 79 ವರ್ಷದ ಮಹಮ್ಮದ್ ಗೌಸ್. ಹಿರಿಯರಾದ ಇವರು ತಮ್ಮ 17ನೇ ವಯಸ್ಸಿನಲ್ಲೇ ಟಾಂಗಾ ಓಡಿಸಲು ಶುರು ಮಾಡಿದ್ದರಂತೆ.
ಹುಟ್ಟಿ ಬೆಳೆದಿದ್ದು ಮೈಸೂರಿನ ಸುಣ್ಣದ ಕೇರಿ. ಈಗ ಶಾಂತಿನಗರದಲ್ಲಿ ವಾಸವಾಗಿ ದ್ದೇನೆ ಎನ್ನುವ ಮಹಮ್ಮದ್ ಗೌಸ್, ನಮ್ಮ ತಂದೆ ಇಮಾಮ್‍ಸಾಬ್ ಸಹ ಟಾಂಗಾ ಓಡಿಸುತ್ತಿದ್ದರು. ಆಗಲೇ ನಾನು ಕೂಡ ಟಾಂಗಾ ಓಡಿಸಲು ಶುರು ಮಾಡಿದೆ. ಇದೀಗ ಮಾಲೀಕರ ಗಾಡಿ ಓಡಿಸುತ್ತಿದ್ದು, ದಿನದ ಸಂಪಾದನೆಯಲ್ಲಿ ಶೇ.25ರಷ್ಟು ನನಗೆ ಕೂಲಿಯಾಗಿ ಸಿಗುತ್ತದೆ ಎನ್ನುತ್ತಾರೆ.
ನಾಲ್ವಡಿ ಮೆಚ್ಚುಗೆ ವ್ಯಕ್ತಪಡಿಸಿದ ಟಾಂಗಾ ಮಾದರಿಗೆ `ಶಾ ಪಸಂದ್’ ಹೆಸರು ಬಂತು…
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆ ಕಾಲಕ್ಕೆ ಹೊಸದಾಗಿ ವಿನ್ಯಾಸಗೊಂಡ ಟಾಂಗಾ ಗಾಡಿಯನ್ನು ನೋಡಿ ಅದರ ಮೇಲೆ ಕುಳಿತು ‘ತುಂಬ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆ ನೂತನ ವಿನ್ಯಾಸದ ಗಾಡಿಗೆ ‘ಶಾ ಪಸಂದ್’ ಹೆಸರು ಬಂದಿತಂತೆ.
ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ಶಾ ಪಸಂದ್ ಟಾಂಗಾ ಸಂಘದ ಅಧ್ಯಕ್ಷ ಫಯಾಜ್ ಅಹಮ್ಮದ್, ಮಹಾರಾಜರು ಗಾಡಿಯಲ್ಲಿ ಕುಳಿತು ಚೆನ್ನಾಗಿದೆಯೆಂದು ಇಷ್ಟಪಟ್ಟರು. ಹೀಗಾಗಿ ಚೆನ್ನಾಗಿದೆ ಎಂಬುದಕ್ಕೆ ಉರ್ದು ಮತ್ತು ಹಿಂದಿಯಲ್ಲಿ ಶಾ ಪಸಂದ್ ಎನ್ನುವ ಕಾರಣಕ್ಕೆ ಈ ಹೆಸರು ಬಂದಿತು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎನ್ನುವ ಅವರು, ಶಾ ಪಂಸದ್ ಟಾಂಗಾಗೆ ಎರಡು ಚಕ್ರಗಳು ಇದ್ದು, ಒಂದು ಕುದುರೆಯಿಂದ ಸಾಗುವಂತದ್ದು. ಅದೇ ರೀತಿ ಸಾರೋಟು ಟಾಂಗಾಗಳು ಇದ್ದು, ಕುದುರೆಯೊಂದು ಈ ಸಾರೋಟು ಮಾದರಿ ಟಾಂಗಾ ಓಡಲು ನೆರವಾಗಲಿದೆ. ಇದಕ್ಕೆ ಉರ್ದು ಮತ್ತು ಹಿಂದಿಯಲ್ಲಿ `ಬಗ್ಗಿ’ ಎಂದು ಕರೆಯುತ್ತಾರೆ.
ಪ್ರವಾಸಿಗರೊಂದಿಗೆ ಸ್ಥಳೀಯರು ಟಾಂಗಾದವರ ಕೈ ಹಿಡಿದಿದ್ದಾರೆ…
ಪ್ರವಾಸಿಗರೊಂದಿಗೆ ಮೈಸೂರಿಗರು ನಮ್ಮ ಕೈ ಹಿಡಿದಿದ್ದಾರೆ. ನಮ್ಮ ಮೈಸೂರಿನ ಹಲವು ಮಂದಿ ಕಾರಿನಲ್ಲಿ ಬಂದು ಟಾಂಗಾದಲ್ಲಿ ಸುತ್ತಾಡುತ್ತಾರೆ. ಹೀಗಾಗಿ ಟಾಂಗಾ ನಂಬಿದವರ ಜೀವನ ಮುನ್ನಡೆಯುತ್ತಿದೆ ಎಂಬುದು ‘ಶಾ ಪಸಂದ್’ ಟಾಂಗಾ ಸಂಘದ ಅಧ್ಯಕ್ಷ ಫಯಾಜ್ ಅಹಮ್ಮದ್ ಸಮಾಧಾನದ ಮಾತು. ಮೈಸೂರು ಅರಮನೆ ಸುತ್ತ ಒಂದು ಸುತ್ತು ಸುತ್ತಲು 6ರಿಂದ 7 ಮಂದಿ ಕೂರಲು ವ್ಯವಸ್ಥೆ ಇರುವ ಸಾರೋಟಿಗೆ 50 ರೂ. ನಿಗದಿ ಮಾಡಲಾಗಿದೆ. ಅದೇ ರೀತಿ ‘ಶಾ ಪಂಸದ್’ ಟಾಂಗಾದಲ್ಲಿ 4ರಿಂದ 5 ಮಂದಿ ಕೂರ ಬಹುದಿದ್ದು, ಇದರಲ್ಲೂ ಅರಮನೆಯ ಒಂದು ಸುತ್ತಿಗೆ 50 ರೂ. ದರ ನಿಗದಿ ಮಾಡಲಾಗಿದೆ ಎನ್ನುತ್ತಾರೆ ಫಯಾಜ್ ಅಹಮ್ಮದ್.
ಮೈಸೂರಿನಲ್ಲಿ ಸುಮಾರು 150 ಟಾಂಗಾಗಳಿದ್ದು, ಇದರ ಎರಡರಷ್ಟು ಮಂದಿ ಟಾಂಗಾ ಓಡಿಸುವವರಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ನರ್ಮ್ ಯೋಜನೆಯಡಿ ಸಾಲ ಸೌಲಭ್ಯದ ಮೂಲಕ ಸಾರೋಟು ಮಾದರಿ ಟಾಂಗಾ ಗಳನ್ನು ನೀಡಲಾಯಿತು. ಈ ಯೋಜನೆಯಡಿ ಇನ್ನು ಕೆಲವರಿಗೆ ಟಾಂಗಾಗಳನ್ನು ನೀಡಲಾಗಿಲ್ಲ. ಈ ಸಂಬಂಧ ಪಾಲಿಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಟಾಂಗಾಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು. – ಫಯಾಜ್ ಅಹಮ್ಮದ್
ಅರಮನೆಗೆ ಈ ದಸರಾದಲ್ಲಾದರೂ ಪ್ರವೇಶ ಕೊಡಿ…
ಪ್ರತಿ ಮೈಸೂರು ದಸರಾ ಮಹೋತ್ಸವದಲ್ಲಿ ಟಾಂಗಾ ಗಾಡಿಗಳನ್ನು ಅರಮನೆ ಆವರಣಕ್ಕೆ ಕರೆಸಿಕೊಳ್ಳಲಾಗುತ್ತಿತ್ತು. ರಾಜ ಪರಂಪರೆಯನ್ನು ಬಿಂಬಿಸುವ ಉಡುಪು ಹಾಗೂ ಪೇಟವನ್ನು ಟಾಂಗಾವಾಲಾಗಳು ಧರಿಸುತ್ತಿದ್ದರು. ಈ ವೇಳೆ ರಾಜ ವೈಭವ ಅನಾವರಣವಾಗುತ್ತಿತ್ತು. ಇದಕ್ಕಾಗಿ ಟಾಂಗಾದವರಿಗೆ ದಿನಕ್ಕೆ ತಲಾ 100 ರೂ. ಗೌರವ ಧನ ನೀಡಲಾಗುತ್ತಿತ್ತು. ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆಯಲ್ಲಿ ನಡೆದ ದಸರಾ ಮಹೋತ್ಸವಗಳಲ್ಲಿ ಟಾಂಗಾಗಳಿಗೆ ಬಣ್ಣ ಮಾಡಿಸಿಕೊಟ್ಟಿದ್ದಲ್ಲದೆ, ತಲಾ 2 ಸಾವಿರ ರೂ. ಗೌರವಧನ ಕೊಡಿಸಿದ್ದರು. ಆದರೆ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ದಸರಾ ವೇಳೆ ಟಾಂಗಾದವರನ್ನು ಅರಮನೆ ಒಳಕ್ಕೂ ಬಿಡಲಿಲ್ಲ. ಹೀಗಾಗಿ ಈ ದಸರಾ ವೇಳೆಗಾದರೂ ಇದಕ್ಕೆ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತಾರೆ ಫಯಾಜ್ ಅಹಮ್ಮದ್.
ನಾನು ಆಯುಕ್ತನಾಗಿ ಬಂದಾಗಿನಿಂದ ಸಾರೋಟು ಟಾಂಗಾ ನೀಡಬೇಕಿರುವ ಬಗ್ಗೆ ಯಾರು ಗಮನ ಸೆಳೆದಿಲ್ಲ. ಈಗಷ್ಟೇ ಈ ಬಗ್ಗೆ ವಿಚಾರ ಮಾಡಲಾಗಿ 2014ರ ಸಂದರ್ಭದಲ್ಲಿ ನರ್ಮ್ ಯೋಜನೆಯಡಿಯಲ್ಲಿ 11 ಸಾರೋಟು ಕೊಡಲಾಗಿದೆ. ಆ ಸಂದರ್ಭದಲ್ಲಿ ಪೂರೈಕೆ ಇದ್ದಷ್ಟನ್ನು ಪಂಜಾಬಿನಿಂದ ತರಿಸಿಕೊಡಲಾಗಿದೆ. ಉಳಿದಂತೆ ಕೊಡಬೇಕಿದ್ದ 9 ಸಾರೋಟು ಕೊಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ. ಈಗ ನರ್ಮ್ ಯೋಜನೆ ಇಲ್ಲವಾದ ಕಾರಣ ಬೇರೆ ಯಾವ ಯೋಜನೆ, ಕಾರ್ಯಕ್ರಮದಡಿ ಅವರ ಬೇಡಿಕೆ ಈಡೇರಿಸಲು ಹಾಗೂ ಮೂಲಸೌಲಭ್ಯ ಕಲ್ಪಿಸಲು ಸಾಧ್ಯ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. -ಕೆ.ಹೆಚ್.ಜಗದೀಶ್, ಪಾಲಿಕೆ ಆಯುಕ್ತರು.