ಕಸ ವಿಂಗಡಣೆ ಮಾಡದಿದ್ದರೆ, ಪಾದಚಾರಿ ಮಾರ್ಗದಲ್ಲಿ ಕಸ ಹಾಕಿದರೆ ದಂಡ
ಮೈಸೂರು

ಕಸ ವಿಂಗಡಣೆ ಮಾಡದಿದ್ದರೆ, ಪಾದಚಾರಿ ಮಾರ್ಗದಲ್ಲಿ ಕಸ ಹಾಕಿದರೆ ದಂಡ

September 25, 2021

ಹಸಿರು ನ್ಯಾಯಾಧೀಕರಣದ ಅಧ್ಯP್ಷÀರೂ ಆದ ನ್ಯಾಯಮೂರ್ತಿ ಸುಭಾಷ್ ಆಡಿ ಎಚ್ಚರಿಕೆ ಮೈಸೂರಲ್ಲಿ ಕಸ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡಲು ಪ್ರಯತ್ನಿಸಿ: ಬಳಸಿದರೆ ದಂಡ

ಮೈಸೂರು, ಸೆ.೨೪(ವೈಡಿಎಸ್)- ಮನೆಯಲ್ಲಿ ಕಸ ವಿಂಗಡಣೆ ಮಾಡದ ಮತ್ತು ಪಾದಚಾರಿ ಮಾರ್ಗದಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು ಎಂದು ಹಸಿರು ನ್ಯಾಯಾಧೀಕರಣದ ಅಧ್ಯP್ಷÀರು ಮತ್ತು ನ್ಯಾಯಮೂರ್ತಿ ಸುಭಾಷ್ ಬಿ.ಆಡಿ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮೈಸೂರಿನ ಕಸ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲೇ ಹಸಿ, ಒಣ ಮತ್ತು ಹಾನಿಕಾರಕ ಕಸ ಎಂದು ವಿಂಗಡಿಸ ಬೇಕು. ಹಾನಿಕಾರಕ ಕಸದಲ್ಲಿ ಔಷಧಿಗಳ ತ್ಯಾಜ್ಯ, ಸಿರಿಂಜ್ ಮತ್ತಿತರೆ ವಸ್ತುಗಳನ್ನು ಹಾಕಬೇಕು. ಹಸಿ ಕಸದೊಂದಿಗೆ ಹಾನಿಕಾರಕ ಕಸವನ್ನು ಹಾಕಿದರೆ ಭೂಮಿಗೆ ಸೇರಿ ನೀರು ಕಲುಷಿತವಾಗುತ್ತದೆ. ಅದಕ್ಕಾಗಿ ಮನೆಯ ಕಸವನ್ನು ೩ ಭಾಗವಾಗಿ ವಿಂಗಡಿಸಬೇಕು. ಈ ಕುರಿತು ೧೫ ದಿನಗಳ ಕಾಲ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಬಳಿಕ ೧೫ ದಿನ ಕಸ ನಿರ್ವಹಣೆಯ ಕುರಿತು ಕ್ರಿಯಾಯೋಜನೆ ರೂಪಿಸಬೇಕು. ತದನಂತರವೂ ಕಸವನ್ನು ಎಲ್ಲೆಂದರಲ್ಲಿ ಬಿಸಾಕುವವರಿಗೆ ದಂಡ ವಿಧಿಸಲೇಬೇಕು. ಈ ಕುರಿತು ಪಾಲಿಕೆಯ ಅಜೆಂಡಾದಲ್ಲಿ ತಿದ್ದುಪಡಿ ಮಾಡಿಕೊಂಡು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಪಾಲಿಕೆಯ ೬೫ ವಾರ್ಡ್ಗಳಿಂದ ಸಂಗ್ರಹ ವಾಗುವ ಕಸದಲ್ಲಿ ಶೇ.೫೦-೬೦ರಷ್ಟು ವಿಲೇವಾರಿಯಾಗುತ್ತಿದೆ. ಉಳಿದದ್ದು ರಾಶಿ ಬೀಳುತ್ತಿದೆ. ಇದಕ್ಕೆ ಅವಕಾಶ ನೀಡದೆ ೧೦೦ರಷ್ಟು ವಿಲೇವಾರಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ಲಾಸ್ಟಿಕ್ ಮುಕ್ತ: ಮೈಸೂರು ನಗರವನ್ನು ಮತ್ತೊಮ್ಮೆ ಸ್ವಚ್ಛನಗರಿ ಮತ್ತು ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕಿದೆ. ಅದಕ್ಕಾಗಿ ಕಸ ವಿಂಗಡಣೆ, ವಿಲೇವಾರಿ, ಕಾಂಪೋಸ್ಟ್ ಗೊಬ್ಬರ ಮತ್ತು ಮರುಬಳಕೆ ಪ್ರಕ್ರಿಯೆ ಯನ್ನು ವೈಜ್ಞಾನಿಕ ರೀತಿಯಲ್ಲಿ ನಗರ ಪಾಲಿಕೆ ಮಾಡಬೇಕು ಎಂದು ಹೇಳಿದರು.
ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕವನ್ನು ಜಿಲ್ಲಾಧಿಕಾರಿ, ಎಸ್‌ಪಿ ಮತ್ತಿತರೆ ಅಧಿಕಾರಿಗಳ ಸರ್ಕಾರಿ ಮನೆಗಳಲ್ಲೇ ನಿರ್ಮಾಣ ಮಾಡಬೇಕು. ಹಾಗೆಯೇ ಸರ್ಕಾರಿ, ಅರೆ ಸರ್ಕಾರಿ, ಆಸ್ಪತ್ರೆ, ವಿಶ್ವವಿದ್ಯಾನಿಲಯಗಳು, ಅಪಾರ್ಟ್ ಮೆಂಟ್‌ಗಳು, ಕಲ್ಯಾಣಮಂಟಪದಲ್ಲೂ ಈ ಘಟಕವನ್ನು ನಿರ್ಮಿಸಬೇಕು. ಇದ ರಿಂದ ಕಸ ಪ್ರಮಾಣ ಕಡಿಮೆಯಾಗಿ ನಿರ್ವಹಣೆ ಮೇಲಿನ ಒತ್ತಡವೂ ಕಡಿಮೆ ಯಾಗುತ್ತದೆ ಎಂದು ತಿಳಿಸಿದರು.

ಕಸ ವಿಲೇವಾರಿಗೆ ಕ್ರಿಯಾ ಯೋಜನೆ: ಇನ್ನು ಮುಂದೆ ನಗರದಲ್ಲಿ ಕಸದ ಲ್ಯಾಂಡ್ ಫಿಲ್ಲಿಂಗ್ ಅವಕಾಶವಿಲ್ಲ. ಸೀವೇಜ್ ಫಾರಂ ನಲ್ಲಿರುವ ಕಸದ ರಾಶಿಗಳನ್ನು ವಿಲೇವಾರಿ ಮಾಡಲು ೧೫ ಕೋಟಿ ರೂ.ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ೬ ತಿಂಗಳಿನಲ್ಲಿ ಈ ಕಸವನ್ನು ಕರಗಿಸಲಾಗುತ್ತದೆ ಎಂದರು.
ಪ್ಲಾಸ್ಟಿಕ್ ಬಳಸಿದರೆ ದಂಡ: ಕಸ ನಿರ್ವಹಣೆಯನ್ನು ಪಾಲಿಕೆ ಮತ್ತು ಸಾರ್ವಜನಿಕರು ಗಂಭೀರವಾಗಿ ತೆಗೆದು ಕೊಳ್ಳಬೇಕು. ಇದು ಯಾವುದೇ ಕಾರಣಕ್ಕೂ ಭೂಮಿಗೆ ಸೇರದಂತೆ ಕ್ರಮವಹಿಸಬೇಕು. ಹಾಗಾಗಿ ಕಸ ವಿಂಗಡಣೆ, ವಿಲೇವಾರಿ, ಮರುಬಳಕೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಬಳಕೆಗೂ ದಂಡ ವಿಧಿಸಬೇಕು. ಈ ವಸ್ತು ವಿನ ಉತ್ಪಾದನೆ, ಸಾಗಾಟ, ಮಾರಾಟ ಮತ್ತು ಬಳಕೆ ನಿರ್ಬಂಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಪಾಲಿಕೆ ಕಠಿಣ ಕ್ರಮ ವಹಿಸಲಿದೆ ಎಂದರು.

ಕಸ ನಿರ್ವಹಣೆ ಕುರಿತು ವಿವಿಧ ಸೂಚನೆ ನೀಡಿದ್ದು, ಇವುಗಳನ್ನು ಕಾರ್ಯರೂಪಕ್ಕೆ ತರುವುದು ಪಾಲಿಕೆ ಜವಾಬ್ದಾರಿ. ಈ ಕುರಿತು ತಿಂಗಳ ಬಳಿಕ ಮೈಸೂರಿಗೆ ಮತ್ತೊಮ್ಮೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

Translate »