ಪಾರಂಪರಿಕ ಕಟ್ಟಡಗಳ ಕಾಪಾಡದೇ ಇದ್ದ ಮೇಲೆ ಕುಸಿಯದೇ ಇರುತ್ತವೆಯೇ…!
ಮೈಸೂರು

ಪಾರಂಪರಿಕ ಕಟ್ಟಡಗಳ ಕಾಪಾಡದೇ ಇದ್ದ ಮೇಲೆ ಕುಸಿಯದೇ ಇರುತ್ತವೆಯೇ…!

October 22, 2022

ಮೈಸೂರು, ಅ.21(ಎಸ್‍ಬಿಡಿ)- ಮೈಸೂರಿನ ಪಾರಂಪರಿಕ ಕಟ್ಟಡಗಳು ಒಂದರ ಹಿಂದೊಂದರಂತೆ ಕುಸಿಯುತ್ತಿದ್ದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಟ್ಟಡ ಸೇರಿ ಮೈಸೂರಿನಲ್ಲಿ 130ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ 25 ಕಟ್ಟಡಗಳಿಗೆ ತುರ್ತು ದುರಸ್ತಿ ಅಗತ್ಯವಿದೆ ಎಂದು ಪಾರಂಪರಿಕ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿ ಕಚೇರಿ, ನಗರಪಾಲಿಕೆ, ಕಾಡಾ, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ದುಃಸ್ಥಿತಿ ಬಗ್ಗೆಯೂ ತಿಳಿಸಲಾಗಿದೆ. ಆದರೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸೂಕ್ತ ಕ್ರಮ ಕೈಗೊಂಡಿಲ್ಲ. ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು, ಅಲ್ಲಿ ಕಾರ್ಯನಿರ್ವ ಹಿಸುವವರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ.

ಪಾರಂಪರಿಕ ತಜ್ಞರ ಸಮಿತಿ, ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡವನ್ನು 2 ವರ್ಷದ ಹಿಂದೆಯೇ ಪರಿಶೀಲನೆ ನಡೆಸಿ, ಶಿಥಿಲಾವಸ್ಥೆ ತಲುಪಿರುವುದಾಗಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲಾಗಿತ್ತು. ನಂತರದಲ್ಲಿ ಹೊಸ ಕಟ್ಟಡ ನಿರ್ಮಾಣವಾಯಿತೇ ಹೊರತು ಹಳೇ ಕಟ್ಟಡದ ದುರಸ್ತಿಗೆ ಮುಂದಾಗಲಿಲ್ಲ. ಇಂತಹ 25 ಕಟ್ಟಡಗಳಿಗೆ ತುರ್ತು ದುರಸ್ತಿ ಅಗತ್ಯವಿದೆ ಎಂದು ವರದಿ ಸಲ್ಲಿಸಲಾಗಿದೆ. ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆಂದೇ ಪಾಲಿಕೆ ಬಜೆಟ್‍ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಡಬೇಕೆಂದು ಸಲಹೆ ನೀಡಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿ ಕೊಂಡಿಲ್ಲ ಎಂದು ಪಾರಂಪರಿಕ ತಜ್ಞ ಪ್ರೊ.ರಂಗರಾಜು ತಿಳಿಸಿದರು.

ಕಳಚುತ್ತಿವೆ ಕೊಂಡಿಗಳು: ಪಾರಂಪರಿಕ ನಗರ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳಿಗೇ ಅಪಾಯ ಬಂದೊದಗಿದೆ. ದಶಕದಿಂದ ಹಲವು ಕಟ್ಟಡಗಳು ಕುಸಿದು ಬಿದ್ದು, ಹಾಳು ಕೊಂಪೆಯಂತಾಗಿವೆ. 2012ರಲ್ಲಿ ನಗರದ ಹೃದಯಭಾಗದಲ್ಲಿರುವ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಕುಸಿದು, ಪ್ರಾಣಹಾನಿಯಾಗಿತ್ತು. ನವೀಕರಣ ಅಥವಾ ಪುನರ್ ನಿರ್ಮಾಣದ ಗೊಂದಲದಲ್ಲಿ ಆ ಕಟ್ಟಡ ಪಾಳು ಬಿದ್ದಿದೆ. 2016ರಲ್ಲಿ ಧನ್ವಂತ್ರಿ ರಸ್ತೆಯ ಭಾಗದಲ್ಲಿ ದೇವರಾಜ ಮಾರುಕಟ್ಟೆಯ ಕಮಾನು ಮಾದರಿ ದ್ವಾರ ಕುಸಿಯಿತು. ನವೀಕರಣ ಸಂದರ್ಭದಲ್ಲೇ ಆ ಘಟನೆ ನಡೆಯಿತು. ಕಟ್ಟಡ ತ್ಯಾಜ್ಯ ತೆರವು ಮಾಡಿದ್ದನ್ನು ಬಿಟ್ಟರೆ ಮತ್ತೇನು ಬದಲಾವಣೆಯಾಗಿಲ್ಲ. 2019ರಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಕಟ್ಟಡದ ಸ್ವಾಗತ ಕಮಾನು ಕುಸಿತ ಕಮಾನು ನೆಲಕ್ಕುರುಳಿತು. 2020ರಲ್ಲಿ ಜೆಎಲ್‍ಬಿ ರಸ್ತೆಯ ಮೆಡಿಕಲ್ ಹಾಸ್ಟೆಲ್ ಛಾವಣಿ ಕಳಚಿ ಬಿದ್ದಿತು. 2021ರಲ್ಲಿ ಮಾನಸಗಂಗೋತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆ ಛಾವಣಿ ಕುಸಿಯಿತು. 2022ರಲ್ಲಿ ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಕಟ್ಟಡದ ಸಜ್ಜಾ ಅರಮನೆ ತಡೆಗೋಡೆ ಕುಸಿದಿವೆ. ಇದೀಗ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿದಿದ್ದು ಇದು ಪ್ರಸಕ್ತ ವರ್ಷದ ಮೂರನೇ ದುರ್ಘಟನೆಯಾಗಿದೆ.

ನಿರ್ವಹಣೆ ಗೊಂದಲ: ಲ್ಯಾನ್ಸ್‍ಡೌನ್ ಕಟ್ಟಡದಿಂದ ಹಿಡಿದು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿದಿರುವ ಪ್ರತಿಯೊಂದು ಪ್ರಕರಣಕ್ಕೂ ನಿರ್ವಹಣೆ ವೈಫಲ್ಯವನ್ನೇ ಹೊಣೆ ಮಾಡಲಾಗಿದೆ. ಲ್ಯಾನ್ಸ್‍ಡೌನ್ ಕಟ್ಟಡ ಕುಸಿದಾಗಲೇ ಎಚ್ಚೆತ್ತುಕೊಂಡು ಪಾರಂಪರಿಕ ಕಟ್ಟಡಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಿದ್ದರೆ ಅವಘಡಗಳಿಗೆ ಬ್ರೇಕ್ ಹಾಕಬಹುದಿತ್ತು. ಆದರೆ ಕಟ್ಟಡ ಕುಸಿದಾಗಲೆಲ್ಲಾ ನಿರ್ವಹಣೆ ಕೊರತೆ ಕಾರಣವೆಂದು ಹೇಳಿ ಮತ್ತೆ ಅದೇ ತಪ್ಪು ಮುಂದುವರೆದಿದೆ. ಸರ್ಕಾರಿ ಕಟ್ಟಡಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆಯ ಹೊಣೆ ಎಂದು ಹೇಳುತ್ತಾರೆ. ಆದರೆ ಇತ್ತೀಚೆಗೆ ಆಯಾಯ ಇಲಾಖೆಯವರೇ ಕಟ್ಟಡ ನಿರ್ವಹಣೆ ನೋಡಿಕೊಳ್ಳಲಾಗುತ್ತದೆ. ಯಾವುದಾದರೂ ನಿರ್ಮಾಣ ಕಾರ್ಯಗಳಿದ್ದು ಪ್ರಸ್ತಾವನೆ ಸಲ್ಲಿಸಿದರೆ ಲೋಕೋಪಯೋಗಿ ಇಲಾಖೆ ಅದನ್ನು ನಿರ್ವಹಿಸಲಿದೆ ಎಂಬುದು ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ. ಒಟ್ಟಾರೆ ಸರ್ಕಾರಿ ಕಟ್ಟಡಗಳ ನಿರ್ವಹಣೆ ಹೊಣೆ ಸಂಬಂಧ ಗೊಂದಲವಿರುವುದರಿಂದ ಪಾರಂಪರಿಕ ಕಟ್ಟಡಗಳ ಮೇಲ್ಛಾವಣಿ ಸೋರುತ್ತಿದ್ದರೂ ತುರ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆ ಕಟ್ಟಡಗಳ ಸ್ಥಿತಿ ಶೋಚನೀಯ ಹಂತ ತಲುಪುತ್ತಿವೆ.

Translate »