ಜನಪರ ಕಾಳಜಿ ಇರುವ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 
ಮೈಸೂರು

ಜನಪರ ಕಾಳಜಿ ಇರುವ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 

August 13, 2020

ಮೈಸೂರು, ಆ.12 (ಪಿಎಂ)-ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು ಮೊದಲು ತಮ್ಮಲ್ಲಿ ಜನಪರ ಕಾಳಜಿ, ಸೇವಾಪರತೆ ಮನೋಭಾವ ಇರುವುದನ್ನು ಸ್ಪಷ್ಟ ಪಡಿಸಿಕೊಳ್ಳಬೇಕು ಎಂದು ಹಿರಿಯ ಐಎಎಸ್ ಅಧಿ ಕಾರಿಗಳೂ ಆದ ಪಶುಪಾಲನೆ ಹಾಗೂ ಮೀನು ಗಾರಿಕೆ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಸಲಹೆ ನೀಡಿದರು.

ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆಯೋ ಜಿಸಿದ್ದ ಕೆಎಎಸ್, ಎಫ್‍ಡಿಎ ಹಾಗೂ ಇತರೆ ಸ್ಪರ್ಧಾ ತ್ಮಕ ಪರೀಕ್ಷೆಗಳ ಎರಡು ತಿಂಗಳ ಆನ್‍ಲೈನ್ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಬೆಂಗಳೂರಿನಿಂದಲೇ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸರ್ಕಾರ ಜನರ ಪರವಾಗಿ ಕೆಲಸ ಮಾಡುವ ದೊಡ್ಡ ಸಂಸ್ಥೆ. ಜನರ ಹಿತಕಾಯುವ ಜೊತೆಗೆ ಅವರ ರಕ್ಷಣೆ ಮಾಡುವ ದೊಡ್ಡ ಹೊಣೆಗಾರಿಕೆ ಸರ್ಕಾರದ ಮೇಲಿ ರುತ್ತದೆ. ಅಂತಹ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ಜವಾಬ್ದಾರಿ ವಿಚಾರದಲ್ಲಿ ಬದ್ಧತೆ ಮುಖ್ಯ. ಈ ಬಗ್ಗೆ ಸ್ಪಷ್ಟತೆ ಇಲ್ಲ ವಾದರೆ ಇಂತಹ ಪರೀಕ್ಷೆಗಳಿಂದ ದೂರವಿರುವುದೇ ಒಳ್ಳೆಯದು. ಏಕೆಂದರೆ ಇದಕ್ಕೆ ಕನಸು, ಆಸೆಗಿಂತ ಬದ್ಧತೆ ಮುಖ್ಯ. ಸಾಮಾಜಿಕ ಜವಾಬ್ದಾರಿ ನಿಮ್ಮ ಮೊದಲ ಆದ್ಯತೆಯಾಗಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಿಗೆ ಧೈರ್ಯ, ಬುದ್ಧಿವಂತಿಕೆ, ಪರಿಸ್ಥಿತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತ ಪರಿಹಾರ ಹುಡುಕಬಲ್ಲ ಸೂಕ್ಷ್ಮಮತಿ ಇರಬೇಕು. ಇವೆಲ್ಲವೂ ನಿಮ್ಮಿಂದ ಸಾಧ್ಯ ಎಂದಾದರೆ ಪರೀಕ್ಷೆ ಎದು ರಿಸಬಹುದು. ಇದರಲ್ಲಿ ಯಶಸ್ವಿಯಾದರೆ ಒಳ್ಳೆಯದು. ಇಲ್ಲವಾದರೆ ಅನುಭವದೊಂದಿಗೆ ಇತರೆ ಪರೀಕ್ಷೆಯಲ್ಲಿ ಸಫಲತೆ ಕಾಣಲು ಅನುಕೂಲವಾಗುತ್ತದೆ ಎಂದು ಮಣಿವಣ್ಣನ್ ಸಲಹೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಉನ್ನತ ಸ್ಥಾನ. ನಂತರದಲ್ಲಿ ಸರ್ಕಾರಿ ಅಧಿಕಾರಿಗಳು ಪ್ರಾಮುಖ್ಯತೆ ಪಡೆಯುತ್ತಾರೆ. ಅವರು ನೀತಿ ರೂಪಿ ಸುವಾಗ ಸಲಹೆ ನೀಡಲಷ್ಟೇ ಅಧಿಕಾರಿಗಳಿಗೆ ಅವ ಕಾಶವಿದೆ. ಸಲಹೆ ನೀಡುವಾಗ ಅಧಿಕಾರಿಗಳಲ್ಲಿ ಹೆಚ್ಚಿನ ಜ್ಞಾನದ ಜೊತೆಗೆ ಅನುಭವವೂ ಬೇಕಾ ಗುತ್ತದೆ. ಜ್ಞಾನವನ್ನು ವಿದ್ಯಾರ್ಥಿದಿಸೆಯಿಂದಲೇ ವೃದ್ಧಿಸಿಕೊಳ್ಳುವುದು ಮುಖ್ಯ ಎಂದರು.

ಮೈಸೂರು ಮೂಲದ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಬಸವರಾಜು ಮತ್ತು ಮಂಡ್ಯ ಮೂಲದ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮದ ಮುಖ್ಯ ಆಡಳಿತಾಧಿಕಾರಿ ಎ.ಎಂ.ಯೋಗೀಶ್ ಆನ್‍ಲೈನ್‍ನಲ್ಲಿ ಮೂಲಕ ಅಭ್ಯರ್ಥಿಗಳಿಗೆ ಅಧ್ಯ ಯನದ ಸಲಹೆ-ಮಾರ್ಗದರ್ಶನ ನೀಡಿದರು.

ಮೈಸೂರಿನ ಮುಕ್ತ ಗಂಗೋತ್ರಿಯ ವಿವಿಯ ಸಭಾಂಗಣದ ಮುಖ್ಯ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿ, ಮುಕ್ತ ಭಂಡಾರ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿದರು. ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಮಾತನಾಡಿದರು.  ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾ ಯಣಗೌಡ ಹಾಜರಿದ್ದರು.

Translate »