ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ
ಕೊಡಗು

ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ

March 10, 2020

ಮಡಿಕೇರಿ,ಮಾ.9-ಯಾವುದೇ ಅಧಿಕೃತ ರಹದಾರಿ ಪಡೆಯದೇ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕಡೆಯಿಂದ ಸೋಮವಾರ ಪೇಟೆ ಪಟ್ಟಣದ ಕಡೆಗೆ ಅಕ್ರಮ ವಾಗಿ ಮರಳು ಸಾಗಿಸು ತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ, ಮರಳು ತುಂಬಿದ್ದ ಲಾರಿ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ವಿವರ: ಕೂತಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಮಾ.7ರಂದು ಡಿಸಿಐಬಿ ಪೊಲೀಸರು ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಿಗಾ ವಹಿಸಿದ್ದರು. ಈ ಸಂದರ್ಭ ರಾತ್ರಿ 10 ಗಂಟೆಯ ಸಮಯದಲ್ಲಿ ಕೂತಿ ಗ್ರಾಮದಿಂದ ಸೋಮವಾರಪೇಟೆ ಪಟ್ಟಣಕ್ಕೆ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತರಲಾಗುತ್ತಿತ್ತು. ಲಾರಿಯನ್ನು ನಿಲ್ಲಿಸಿ ದಾಖಲೆಯನ್ನು ಪರಿಶೀಲಿಸಿದ ಸಂದರ್ಭ ಮರಳು ಸಾಗಿಸಲು ಯಾವುದೇ ರಹದಾರಿ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಿ.ಟಿ. ದರ್ಶನ್ ಮತ್ತು ಕೆ.ಎಸ್. ಪ್ರೀತಮ್ ಅವರುಗಳನ್ನು ಬಂಧಿಸಿ, ಲಾರಿ(ಕೆಎ.12-ಬಿ.3497) ಮತ್ತು ಮರಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪ್ರಭಾರ ವೃತ್ತ ನಿರೀಕ್ಷಕ ಹೆಚ್.ಬಿ. ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ. ಹಮೀದ್, ಕೆ.ಎಸ್. ಅನೀಲ್ ಕುಮಾರ್, ವಿ.ಜಿ.ವೆಂಕಟೇಶ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್ ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »