ಮಡಿಕೇರಿ,ಮಾ.9-ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 79 ಸಿವಿಲ್ ಮತ್ತು 54 ಜಿಲ್ಲಾ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗಾಗಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಒಟ್ಟು ಮೂರು ದಿನಗಳ ಕಾಲ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 2019ರ ನವೆಂಬರ್‍ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳು ನೇಮ ಕಾತಿಯಲ್ಲಿ ಪಾಲ್ಗೊಂಡಿದ್ದಾರೆ.
79 ಸಿವಿಲ್ ಪೊಲೀಸ್ ಹುದ್ದೆಗೆ ನಡೆಸ ಲಾದ ಪರೀಕ್ಷೆಯಲ್ಲಿ ಒಟ್ಟು 395 ಅಭ್ಯರ್ಥಿ ಗಳು ಮತ್ತು 54 ಸಶಸ್ತ್ರ ಪೊಲೀಸ್ ಹುದ್ದೆಗೆ ಆಯ್ಕೆ ಬಯಸಿ 270 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿ ದ್ದಾರೆ. 79 ಸಿವಿಲ್ ಪೊಲೀಸ್ ಹುದ್ದೆ ಯಲ್ಲಿ ಮಹಿಳಾ ಸಿಬ್ಬಂದಿಗಳಿಗೆ 16 ಹುದ್ದೆ ಗಳು ಮೀಸಲಿದ್ದು, 80 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿ ಪಾಸಾಗಿದ್ದಾರೆ.
ಇಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿದ್ದ ಪುರುಷ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಭಾಗಗಳ ಅಭ್ಯರ್ಥಿಗಳು ಪಾಲ್ಗೊಂಡಿ ದ್ದರು. ದೈಹಿಕ ಕ್ಷಮತೆಯನ್ನು ಪರೀಕ್ಷಿಸಲು 6 ಕಿ.ಮೀ ಓಟ, ದೇಹ ದಾಢ್ರ್ಯತೆಗಾಗಿ ಎತ್ತರ, ಎದೆಯ ಸುತ್ತಳತೆ, ಉದ್ದ ಜಿಗಿತ, ಎತ್ತರ ಜಿಗಿತ ಪರೀಕ್ಷೆಗಳನ್ನು ನಡೆಸ ಲಾಯಿತು. ಮಾ.10ರಂದು ಮಹಿಳಾ ಸಿವಿಲ್ ಪೊಲೀಸ್ ನೇಮಕಾತಿ ಮತ್ತು ಮಾ.11ರಂದು ಜಿಲ್ಲಾ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ನೇಮಕಾತಿ ಪ್ರಕ್ರಿಯೆಯ ಮೇಲೆ ಪೊಲೀಸ್ ನೇಮಕಾತಿ ಮಾನದಂಡದ ಪ್ರಕಾರ ಹದ್ದಿನ ಕಣ್ಣಿಡಲಾಗಿದ್ದು, ಎಲ್ಲೆಡೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾ ಗಿದೆ. ಪ್ರತಿಯೊಂದು ಆಯ್ಕೆ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದೆ.
ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಮೈದಾನದಲ್ಲಿ ಹಾಜರಿದ್ದು, ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ.
3 ದಿನಗಳ ಕಾಲ ನೇಮಕಾತಿ ಪ್ರಕ್ರಿಯೆ ನಡೆಯುವ ಹಿನ್ನಲೆಯಲ್ಲಿ ಮೈದಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.