ರಾಜ್ಯದಲ್ಲಿ ಮೇಲ್ವರ್ಗಕ್ಕೂ ಶೇ.10ರಷ್ಟು ಮೀಸಲಾತಿ ಅನುಷ್ಠಾನ
ಮೈಸೂರು

ರಾಜ್ಯದಲ್ಲಿ ಮೇಲ್ವರ್ಗಕ್ಕೂ ಶೇ.10ರಷ್ಟು ಮೀಸಲಾತಿ ಅನುಷ್ಠಾನ

December 13, 2020

ಮೈಸೂರು,ಡಿ.12(ಪಿಎಂ)-ಆರ್ಥಿಕವಾಗಿ ಹಿಂದುಳಿದ ಮೇಲ್ವ ರ್ಗದ ಸಮುದಾಯಗಳಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿ ರುವ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಈಗಾಗಲೇ ಹಲವು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದ್ದು, ನಮ್ಮ ರಾಜ್ಯದಲ್ಲೂ ಮುಂದಿನ ಅಧಿವೇಶನದ ವೇಳೆಗೆ ಅನು ಷ್ಠಾನಕ್ಕೆ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನ ಸಿದ್ಧಾರ್ಥನಗರದ ಗೀತಾ ಶಿಶು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕಾಂಕ್ಷೆಯಂತೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ಶೇ.10ರಷ್ಟು ಮೀಸಲಾತಿ ಯನ್ನು ದೇಶದಲ್ಲಿ ಜಾರಿಗೊಳಿಸಲಾಗಿದೆ. ಮುಂದಿನ ಅಧಿವೇಶನದ ವೇಳೆಗೆ ರಾಜ್ಯದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಬಹುತೇಕ 2021ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳೂ ಇದರ ಪ್ರಯೋಜನ ಪಡೆಯಬಹುದು ಎಂದು ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು.

ಮಂಡಳಿಗೆ 200 ಕೋಟಿ: ಎಲ್ಲಾ ಬ್ರಾಹ್ಮಣ ಉಪ ಜಾತಿಗಳನ್ನು ಒಂದೇ ಶೀರ್ಷಿಕೆಯಡಿ ತರುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಬಹುತೇಕ ಇನ್ನೊಂದು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಆ ಬಳಿಕ ಸಮು ದಾಯದ ಜನಸಂಖ್ಯೆ ಸ್ಪಷ್ಟವಾಗಿ ತಿಳಿದುಬರಲಿದೆ. ಮುಂದಿನ ರಾಜ್ಯ ಬಜೆಟ್‍ನಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 200 ಕೋಟಿ ರೂ. ಅನುದಾನ ಕಲ್ಪಿಸಿ ಕೊಡುವಂತೆ ಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ. ಸಮುದಾಯದ ಎಲ್ಲಾ ಶಾಸಕರು ಈ ಸಂಬಂಧ ಸಂಘ ಟಿತರಾಗಿ ಸರ್ಕಾರದ ಗಮನ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಮುನ್ನಡೆಯಲಾಗುವುದು ಎಂದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಎ.ರಾಮ ದಾಸ್, ಅನುಕೂಲ ಪಡೆದುಕೊಂಡ ಬಳಿಕ ಅದನ್ನು ಸಮಾಜಕ್ಕೆ ಹಿಂತಿರುಗಿಸುವ ಪ್ರಾಮಾಣಿಕ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆಗೆ ಸೀಮಿತವಾಗದೇ ಬದುಕಿನಲ್ಲಿ ಮಾದರಿಯಾಗ ಬೇಕು. ಜೀವನದಲ್ಲಿ ಅವಕಾಶ ಸಿಕ್ಕಾಗಬಳಸಿಕೊಳ್ಳಬೇಕು. ಅವಕಾಶ ಇಲ್ಲದಿದ್ದಾಗ ಅದನ್ನು ಪಡೆದು ಕೊಳ್ಳುವ ಜಾಣ್ಮೆ ಇರಬೇಕು ಎಂದು ಸಲಹೆ ನೀಡಿದರು.

ವಿಪ್ರ ಮಕ್ಕಳು ಕೊರೊನಾ ಸಂದರ್ಭದಲ್ಲಿ ಯಾವ ರೀತಿ ಕಾಲ ಕಳೆದರು ಎಂಬ ಅಧ್ಯಯನ ನಡೆಸಿದ್ದೆ. ಒಂದು ಮನೆಗೆ ಹೋಗಿ ಮಗುವೊಂದನ್ನು ಮಾತನಾಡಿಸಿದೆ. 2ನೇ ತರಗತಿಯ ಆ ಮಗು ಕೊರೊನಾ ರಜೆಯ 6 ತಿಂಗಳಲ್ಲಿ ತಬಲ ಬಾರಿಸುವುದನ್ನುಕಲಿತಿದ್ದಾನೆ. ತಾತಾ ತಬಲ ಕಲಾವಿದರಾದರೂ ಆತ ಅದರತ್ತ ಇಲ್ಲಿವರೆಗೆ ಗಮನಿಸಿರಲಿಲ್ಲ. ಆದರೆ ಕೊರೊನಾ ರಜೆಯಲ್ಲಿ ಕಾಲ ವ್ಯರ್ಥ ಮಾಡದೇ ತಬಲ ಬಾರಿಸುವುದನ್ನು ಕಲಿತ್ತಿದ್ದಾನೆ. ಅದೇ ರೀತಿ ಇಂದಿನ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿ.ಆದಿತ್ಯ ಕೂಡ ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾನೆ. ಹೀಗೆ ಸಾರ್ಥಕ ರೀತಿಯಲ್ಲಿ ನಮ್ಮ ಮಕ್ಕಳು ಕೊರೊನಾ ಸಂದರ್ಭ ಸದ್ಬಳಕೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಪ್ರ ಮಕ್ಕಳ ವೇದಿಕೆ : 10ನೇ ತರಗತಿ ಮೇಲ್ಪಟ್ಟ ವಿಪ್ರ ಮಕ್ಕಳ ವೇದಿಕೆ ಸ್ಥಾಪಿಸಿ ರಾಜಕೀಯ ವಲಯದಲ್ಲಿ ಇಲ್ಲದವರ ನೇತೃತ್ವದಲ್ಲಿ ಈ ವೇದಿಕೆ ಮುನ್ನಡೆಸಬೇಕೆಂಬ ಉದ್ದೇಶ ಹೊಂದಿ ರುವುದಾಗಿ ತಿಳಿಸಿದರಲ್ಲದೆ, ಪ್ರತಿಭಾ ಪುರಸ್ಕಾರಕ್ಕೆ ಆಗಮಿಸಿದ್ದ ಮಕ್ಕಳು ತಮ್ಮ ಧ್ಯೇಯೋ ದ್ದೇಶಗಳನ್ನು ಸಭೆಯಲ್ಲಿ ಹೇಳುವ ರೀತಿಯಲ್ಲಿ ರಾಮದಾಸ್ ಉರಿದುಂಬಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಶೇ.10ರಷ್ಟು ಮೀಸಲಾತಿಯನ್ನು ಶೀಘ್ರದಲ್ಲಿ ರಾಜ್ಯ ಸರ್ಕಾರ ಜಾರಿಗೆ ತರುತ್ತದೆಂದು ರಾಮದಾಸ್ ಹೇಳಿದ್ದಾರೆ. ಸ್ವಂತ ಮಗುವಾದರೂ ಅದು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ ಎನ್ನುವ ಮಾತಿನಂತೆ ನಮ್ಮದೇ ಸರ್ಕಾರ ಇದ್ದರೂ ಮೀಸಲಾತಿ ಶೀಘ್ರ ಅನುಷ್ಠಾನಗೊಳ್ಳಬೇಕಾದರೆ ಬ್ರಾಹ್ಮಣ ಸಮುದಾಯದ ಎಲ್ಲಾ ಪಕ್ಷಗಳ ಮುಖಂಡರು ಒಕ್ಕೊರಲಿನಿಂದ ಸರ್ಕಾರದ ಗಮನ ಸೆಳೆಯಬೇಕಿದೆ. ಎಲ್ಲಾ ಜಿಲ್ಲೆಗಳ ಮುಖಂಡರು ಸೇರಿ ಮುಖ್ಯಮಂತ್ರಿಗಳ ಬಳಿ ಹೋಗಿ ಮನವಿ ಸಲ್ಲಿಸಲು ಮುಂದಾಗಬೇಕಿದೆ. ಜೊತೆಗೆ ಓದಿನಲ್ಲಿ ಹಿಂದುಳಿಯುವ ಮಕ್ಕಳ ಭವಿಷ್ಯ ಕಟ್ಟಿಕೊಡುವ ಜವಾಬ್ದಾರಿಯನ್ನೂ ಮಂಡಳಿ ಮತ್ತು ಸಮುದಾಯ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್ ಮಾತನಾಡಿ, ಮಂಡಳಿ ಸಮುದಾಯದಲ್ಲಿನ ಅವಕಾಶ ವಂಚಿತ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬೇರೆ ಸಮುದಾಯಗಳಿಗೆ ಪರಸ್ಪರ ಸಹಕಾರ ಮನೋಭಾವವಿದೆ. ಇದು ತಪ್ಪೇನಿಲ್ಲ. ಆದರೆ ನಮ್ಮಲ್ಲಿ ಆ ರೀತಿ ಸಹಕಾರ ಮನೋಭಾವ ಕಡಿಮೆ. ಈ ನಿಟ್ಟಿನಲ್ಲಿ ಸಮುದಾಯದ ಶ್ರೇಯೋಭಿವೃದ್ಧಿ ಬಗ್ಗೆ ನಾವು ಆಲೋಚನೆ ಮಾಡಬೇಕಿದೆ ಎಂದರು.

ಪ್ರತಿಭಾ ಪುರಸ್ಕಾರ: ಮಂಡಳಿ ವತಿಯಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರತಿ ಜಿಲ್ಲೆಗೆ ಕ್ರಮವಾಗಿ 3 ಸ್ಥಾನಗಳಿಗೆ ಆಯ್ಕೆ ಮಾಡಿ, ಪ್ರಥಮ ಸ್ಥಾನಕ್ಕೆ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ನಗದು, 14 ಗ್ರಾಂ ಬೆಳ್ಳಿ ಪದಕ, ಕನ್ನಡ-ಇಂಗ್ಲಿಷ್ ನಿಘಂಟು ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಮೈಸೂರು ಜಿಲ್ಲೆಯ ಸ್ಫೂರ್ತಿ ವೈ.ಅಗ್ನಿಹೋತ್ರಿ (ಪ್ರ), ಗೌರವ ಚಂದನ್ (ಗೈರು ಹಿನ್ನೆಲೆ ಶಿಕ್ಷಕ ನವೀನ್‍ಕುಮಾರ್ ಸ್ವೀಕರಿಸಿದರು), ಎಸ್.ವಿವೇಕ್ (ದ್ವಿ), ವಿ.ಆದಿತ್ಯಾ (ತೃ), ಚಾಮರಾಜನಗರ ಜಿಲ್ಲೆಯ ರಂಜಿತ್‍ಪ್ರಸಾದ್ (ಪ್ರ), ಎಸ್.ಕೀರ್ತಿಶ್ರೀ (ದ್ವಿ), ಎಸ್. ಅಂಜಲಿ (ತೃ), ಹಾಸನದ ಎನ್.ಶ್ರೀತೇಜ್‍ಭಟ್ ಹಾಗೂ ಹರ್ಷ ಎನ್.ಕೌಂಡಿನ್ಯಾ (ಪ್ರ), ಎಲ್.ಸುಮುಖ್ (ದ್ವಿ), ಕೆ.ಸಿ.ಪ್ರೀಯಂವದ (ತೃ), ಕೊಡಗು ಜಿಲ್ಲೆಯ ಎಂ.ಕೆ. ಶ್ರೀವತ್ಸ (ಪ್ರ), ಆದಿತ್ಯಾ ಬಿ.ವಿ.ರಾವ್ (ದ್ವಿ), ಪಿ.ಎಸ್.ಪಂಚಮಿ (ತೃ), ಮಂಡ್ಯ ಜಿಲ್ಲೆಯ ಪಿ.ಸಿಂಚನಾ ಭಟ್ (ಪ್ರ), ಸುಶ್ರುತ ಮೈಯಾ (ದ್ವಿ), ಎನ್.ಎನ್.ಕಾತ್ಯಾಯಿನಿ (ತೃ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ವೇಳೆ ಕನ್ನಡ ರಾಜ್ಯೋತ್ಸವ ಪುರಸ್ಕøತ ಡಾ.ಕೆ.ಎಸ್.ಚಂದ್ರಶೇಖರ್ ಹಾಗೂ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಎಂ.ಆರ್.ಬಾಲಕೃಷ್ಣ, ಡಾ.ವಿ.ಭಾನುಪ್ರಕಾಶ್ ಶರ್ಮ, ಸಿ.ವಿ.ಗೋಪಿನಾಥ್, ಕೆ.ಎಸ್.ಛಾಯಾಪತಿ, ವತ್ಸಲ ನಾಗೇಶ್, ಪವನ್‍ಕುಮಾರ್, ಜಗದೀಶ್ ಹನಗುಂದ, ವಿನೀತ್‍ಶ್ಯಾಮ್‍ಭಟ್, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕರ್ನಾಟಕ ಕಾರ್ಯಾಧ್ಯಕ್ಷ ಜಿ.ಆರ್.ಪ್ರದೀಪ್, ಮಹಾ ಪೋಷಕ ಡಿ.ಶ್ರೀಹರಿ, ಮೈಸೂರು ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್ ಪದಕಿ, ಹಾಸನ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕೊಡಗು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಮಹಾಬಲೇಶ್ವರ ಭಟ್ಟ, ಸಮಾಜ ಸೇವಕ ಡಾ.ರಘುರಾಮ ವಾಜಪೇಯಿ, ಜಿಎಸ್‍ಎಸ್ ಯೋಗ ಫೌಂಡೇ ಷನ್‍ನ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ಪಾಲಿಕೆ ಸದಸ್ಯ ಮ.ವಿ.ರಾಮ್‍ಪ್ರಸಾದ್, ಸಮುದಾಯ ಮುಖಂಡ ವಿಕ್ರಂ ಅಯ್ಯಂಗಾರ್ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಮೈಸೂರು, ಡಿ.12(ಪಿಎಂ)-ಕರ್ನಾ ಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡ ಳಿಯ ಸಾಂದೀಪನಿ ಶಿಷ್ಯವೇತನ ಯೋಜನೆ ಯಡಿ (ವಿದ್ಯಾರ್ಥಿ ವೇತನ) ಪಿಯುಸಿ ಯಿಂದ ಸ್ನಾತಕೋತ್ತರ ಪದವಿವರೆಗಿನ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಡಿ.14ರಿಂದ ಅರ್ಜಿ ಸಲ್ಲಿಸ ಬಹುದು ಎಂದು ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ತಿಳಿಸಿ ದರು. ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತ ನಾಡಿದ ಅವರು, ಈ ಯೋಜನೆಯಡಿ ಪಿಯುಸಿಯಿಂದ ಸ್ನಾತಕೋತ್ತರ ಪದವಿ ವರೆಗೆ ಬೋಧನಾ ಶುಲ್ಕ ಭರಿಸುವ ಜೊತೆಗೆ ಇತರೆ ಶುಲ್ಕ ಎಂದು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ತಲಾ 15 ಸಾವಿರ ರೂ. ಜಮಾ ಮಾಡಲಾಗುವುದು. ಈ ಸೌಲಭ್ಯ ಪಡೆಯಲು ಆರ್ಥಿಕ ಹಿಂದುಳಿದ ಕುಟುಂಬ ಎಂಬ ಪ್ರಮಾಣ ಪತ್ರ ಹೊಂದಿ ರಬೇಕು ಎಂದರು. 2021ರ ಜ.15ರವ ರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು.

ಬಳಿಕ ಜ.21ರವರೆಗೆ ಪರಿಶೀಲನೆ ನಡೆಯಲಿದೆ. ಅನಂತರ ಈ ಸೌಲಭ್ಯವನ್ನು ಅರ್ಹರಿಗೆ ದೊರಕಿಸಿಕೊಡಲಾಗುವುದು. ಈ ಕುರಿತಂತೆ ನಾಳೆ ಮಂಡಳಿ ವೆಬ್‍ಸೈಟ್‍ನಲ್ಲಿ ಇನ್ನು ಹೆಚ್ಚಿನ ಮಾಹಿತಿ ಒಳಗೊಂಡ ಪ್ರಕಟಣೆ ನೀಡಲಾಗು ವುದು ಎಂದರು. `ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಯೋಜನೆಯಡಿ ಜಿಲ್ಲೆಯೊಂದಕ್ಕೆ ಕ್ರಮವಾಗಿ 3 ಬಹುಮಾನ ನೀಡಲಾಗು ತ್ತಿದ್ದು, ಇಡೀ ರಾಜ್ಯದಲ್ಲಿ ಒಟ್ಟು 168 ಎಸ್‍ಎಸ್ ಎಲ್‍ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಈ ಪೈಕಿ ಇಂದು 5 ಜಿಲ್ಲೆಗಳಿಂದ 17 ಮಂದಿಗೆ ಪುರಸ್ಕಾರ ನೀಡಲಾಗಿದೆ ಎಂದರು. ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬ್ರಾಹ್ಮಣರಿದ್ದಾರೆ. ಜನಗಣತಿ ವೇಳೆ ಬ್ರಾಹ್ಮಣ ಎಂದು ಬರೆಸದೇ ಕೇವಲ ಉಪಜಾತಿ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ 17 ಲಕ್ಷದ 80 ಸಾವಿರ ಜನಸಂಖ್ಯೆ ಎಂದು ಸದ್ಯ ಗುರುತಿಸಲಾಗಿದೆ. ಉಪಜಾತಿ ಗಳನ್ನು ಮರೆತು ಎಲ್ಲರೂ ಬ್ರಾಹ್ಮಣರು ಸಂಘಟಿರಾಗಬೇಕಿದೆ ಎಂದರು.

Translate »