ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ತಡೆಗೆ ಡಬಲ್ ಟೆಂಟಕಲ್ಸ್ ಅಳವಡಿಕೆ
ಮೈಸೂರು

ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ತಡೆಗೆ ಡಬಲ್ ಟೆಂಟಕಲ್ಸ್ ಅಳವಡಿಕೆ

July 11, 2021

ಹನಗೋಡು, ಜು.10 (ಮಹೇಶ್)- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ದಾಳಿ ನಿಯಂತ್ರಿಸಲು ಡಬಲ್ ಟೆಂಟಕಲ್ಸ್ (ಗ್ರಹಣಾಂಶವುಳ್ಳ) ಸೋಲಾರ್ ತಂತಿಬೇಲಿ ಅಳವಡಿಸಲಾಗುತ್ತಿದ್ದು, ಆನೆ ಇನ್ನಿತರ ವನ್ಯಜೀವಿಗಳ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ.

843 ಚದರ ಕಿಮೀ ವಿಸ್ತಾರವಾಗಿರುವ ನಾಗರಹೊಳೆ ರಕ್ಷಿತಾರಣ್ಯದ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆ, ಚಿರತೆ, ಹುಲಿ, ಮುಂತಾದ ಪ್ರಾಣಿಗಳು ಆಹಾರವನ್ನರಸಿ ನಾಡಿನೊಳಗೆ ದಾಳಿ ಮಾಡುತ್ತಿವೆÉ. ಅರಣ್ಯ ಇಲಾಖೆ ಹಲವಾರು ಪ್ರಯೋಗಗಳು, ಯೋಜನೆ ಗಳನ್ನು ಜಾರಿಗೊಳಿಸಿ ವನ್ಯಜೀವಿ ದಾಳಿ ನಿಯಂತ್ರಿಸಲು ಯತ್ನಿಸುತ್ತಿದ್ದು, ಆನೆ ಕಂದಕ ನಿರ್ಮಾಣ, ಸೋಲಾರ್ ತಂತಿಬೇಲಿ ನಿರ್ಮಾಣ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಾತ್ರಿ ಪಹರೆ ಯೋಜನೆ, ಪಟಾಕಿ ಸಿಡಿತ, ಆನೆ ಬರುವ ಸ್ಥಳಗಳನ್ನು ಗುರುತಿಸಿ ಗೋಣಿ ಚೀಲಗಳಿಗೆ ವೇಸ್ಟ್ ಆಯಿಲ್‍ನೊಂದಿಗೆ ಮೆಣಸಿನಪುಡಿ ಮಿಶ್ರಣ ಮಾಡಿ ನೇತು ಹಾಕುವುದು ಹಾಗೂ ಅಲ್ಲಲ್ಲಿ ಬೆಂಕಿ ಹಾಕಿ ಅಟ್ಟಣೆ ಮೂಲಕ ರಾತ್ರಿ ಕಾವಲು ಕಾಯುವ ಪ್ರಯೋಗಗಳನ್ನು ಜಾರಿಗೆ ತರಲಾಗಿತ್ತು.

ಕಂದಕ ನಿರ್ಮಾಣ ಸಾಕಷ್ಟು ಫಲ ನೀಡು ತ್ತಿದ್ದರೂ ಕಂದಕಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ಅವುಗಳೂ ವಿಫಲವಾಗಿವೆ. ರೈತರು ವರ್ಷ ವಿಡೀ ಕಷ್ಟಪಟ್ಟು ಬೆಳೆದ ಬೆಳೆಗಳನ್ನೆಲ್ಲಾ ಕಾಡಾನೆಗಳ ಹಿಂಡು ಒಂದೇ ರಾತ್ರಿ ದಾಳಿಯಿಟ್ಟು ಸಂಪೂರ್ಣ ನಾಶ ಮಾಡುತ್ತಿವೆ. ಇದೀಗ ರೈಲ್ವೆ ಕಂಬಿಗಳ ಅಳವಡಿಕೆಯೊಂದಿಗೆ ಸೋಲಾರ್ ತಂತಿ ಬೇಲಿಗಳ ಅಳವಡಿಕೆ ಕಾರ್ಯ ನಡೆದಿದ್ದು, ಸೋಲಾರ್ ತಂತಿಬೇಲಿಗಳನ್ನು ಅಳವಡಿಸಿರುವ ಕಡೆ ಸಾಕಷ್ಟು ಪ್ರಮಾಣದಲ್ಲಿ ಆನೆದಾಳಿ ನಿಯಂತ್ರಣಕ್ಕೆ ಬಂದಿವೆಯೆಂದು ಇಲಾಖೆ ಆದಿಕಾರಿಗಳು ತಿಳಿಸುತ್ತಾರೆ.

74 ಕಿ.ಮೀ.ಉದ್ದದ ರೈಲ್ವೆ ಕಂಬಿ: 7 ವರ್ಷಗಳ ಹಿಂದೆ ಆನೆ ದಾಳಿಯನ್ನು ತಡೆಯಲು ಕೇಂದ್ರ ಸರ್ಕಾರ ರೈಲ್ವೆಕಂಬಿ ಅಳವಡಿಕೆಗೆ ಮುಂದಾಯಿತು. ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 102 ಕಿ.ಮೀ.ಉದ್ದದ ರೈಲ್ವೆ ಮತ್ತು ಸೋಲಾರ್ ತಂತಿಬೇಲಿಯನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಪೈಕಿ ಈಗಾಗಲೇ 74 ಕಿ.ಮೀ.ಉದ್ದದಲ್ಲಿ ಅಳವಡಿಸಲಾಗಿದೆ. ಉದ್ಯಾ ನವನದ ಮೇಟಿಕುಪ್ಪೆ, ವೀರನಹೊಸಳ್ಳಿ ಮತ್ತು ಅಂತರಸಂತೆ ವಲಯದಲ್ಲಿ ರೈಲ್ವೆ ಕಂಬಿಗಳಿಗೆ ಸೋಲಾರ್ ತಂತಿಬೇಲಿ ಅಳ ವಡಿಸಲಾಗಿದೆ. ಅಂತೆಯೇ ಹುಣಸೂರು, ಕಲ್ಲಹಳ್ಳ, ನಾಗರಹೊಳೆ ಮತ್ತು ಆನೆಚೌಕೂರು ವಲಯ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ.

ಟೆಂಟಕಲ್ಸ್ ಸೋಲಾರ್ ಬೇಲಿ:ಈ ಹಿಂದೆ ಕೇವಲ ಸೋಲಾರ್ ತಂತಿ ಬೇಲಿಗಳನ್ನು ಮಾತ್ರ ಇಳಿಬಿಡಲಾಗುತ್ತಿತ್ತು. ಇದು ಅಷ್ಟೇನೂ ಪರಿಣಾಮ ಬೀರಲಿಲ್ಲ. ಉತ್ತರಾಖಂಡ್ ರಾಜ್ಯದ ನಂದೌರ್ ವನ್ಯಜೀವಿ ಅಭಯಾರಣ್ಯದಲ್ಲಿ ಮೊದಲ ಬಾರಿಗೆ ಟಂಟಕಲ್ಸ್ (ಗ್ರಹಣಾಂಶವುಳ್ಳ) ಸೋಲಾರ್ ತಂತಿ ಬೇಲಿ ಅಳವಡಿಸಲಾಯಿತು. 15 ಅಡಿ ಎತ್ತರದ ಕಂಬಕ್ಕೆ ಮೇಲಿನಿಂದ ಕಂಬದ ಎರಡೂ ಬದಿಯಿಂದ ಸೋಲಾರ್ ತಂತಿಗಳನ್ನು ನೆಲದಿಂದ 2-3 ಅಡಿ ಭೂಮಿಯಿಂದ ಮೇಲಕ್ಕೆ ಇಳಿಬಿಡ ಲಾಗುತ್ತದೆ. ತಂತಿಯಲ್ಲಿ 12 ವೋಲ್ಡ್ ಸಾಮಥ್ರ್ಯದ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಇದರಿಂದಾಗಿ ವನ್ಯಜೀವಿಗಳಿಗೆ ತಂತಿ ಮುಟ್ಟಿದ ಕೂಡಲೇ ಶಾಕ್ ಆಗುತ್ತದೆಯೇ ಹೊರತು ಪ್ರಾಣಾಪಾಯ ಸಂಭವಿಸುವುದಿಲ್ಲ.

ರೈಲ್ವೆ ಕಂಬಿಗೂ ಅಳವಡಿಕೆ: ನಾಗರಹೊಳೆ ಉದ್ಯಾನವನದ ಮೂರು ವಲಯದಲ್ಲಿ ಅಳವಡಿಸಿರುವ ರೈಲ್ವೆ ಕಂಬಿ ಗಳಿಗೂ ಒಂದೊಂದು ಎಳೆ ಸೋಲಾರ್ ತಂತಿಬೇಲಿಗಳನ್ನು ಸುತ್ತಲಾಗಿದ್ದು, ಇದು ಪ್ರಮುಖವಾಗಿ ಆನೆಗಳ ದಾಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದೆ.
ಬೆಳೆ ನಷ್ಟ ಹೆಚ್ಚು: 2020-21ನೇ ಸಾಲಿನಲ್ಲಿ ಉದ್ಯಾನವನ ವ್ಯಾಪ್ತಿಯಲ್ಲಿ ವನ್ಯಜೀವಿಗಳು ರೈತರು ಬೆಳೆದ ಫಸಲನ್ನು ತಿಂದು ತುಳಿದು ನಾಶಪಡಿಸಿರುವ 1011 ಪ್ರಕರಣಗಳು ದಾಖಲಾಗಿವೆ. ಹಾಗೂ ಇದಕ್ಕಾಗಿ ಇಲಾಖೆ ರೈತರಿಗೆ ಒಟ್ಟು 49 ಲಕ್ಷ ರೂ.ಬೆಳೆ ಪರಿಹಾರ ನೀಡಿದೆ. 57 ಪ್ರಕರಣಗಳು ಜಾನುವಾರುಗಳ ಮೇಲಿನ ದಾಳಿಯಾಗಿದ್ದರೆ, ಇಬ್ಬರನ್ನು ವನ್ಯಜೀವಿ ಗಳು ಬಲಿಪಡೆದಿವೆ. ಆಸ್ತಿಪಾಸ್ತಿ ಹಾನಿಯ 31 ಪ್ರಕರಣಗಳು ದಾಖಲಾಗಿವೆ. 2021-22ರ ಸಾಲಿನಲ್ಲಿ ಈವರೆಗೆ 594 ಪ್ರಕರಣ ಗಳು ದಾಖಲಾಗಿದ್ದು, ಈವರೆಗೆ 93 ಪ್ರಕರಣಗಳಿಗೆ 9.50 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೂ 501 ಪ್ರಕರಣ ಗಳಿಗೆ 34 ಲಕ್ಷ ರೂ.ಬಾಕಿ ನೀಡಬೇಕಿದೆ.

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಇಳಿಕೆ: ಉದ್ಯಾನವನ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಪ್ರಕಣUಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ರೈಲ್ವೆ ಕಂಬಿಗಳು ನಿರ್ಮಾಣ ಕಾರ್ಯ ಸಂಪೂರ್ಣಗೊಂಡಲ್ಲಿ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ. ಸೋಲಾರ್ ತಂತಿ ಬೇಲಿಯನ್ನು ಒಳಗೊಂಡು ಇನ್ನಿತರ ಸಂಶೋ ಧನಾತ್ಮಕ ವ್ಯವಸ್ಥೆಗಳು ಕಂಡು ಬಂದಲ್ಲಿ ಅವು ಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಲಯ ವ್ಯಾಪ್ತಿಯಲ್ಲಿ ಟೆಂಟಕಲ್ಸ್ ಸೋಲಾರ್ ತಂತಿಬೇಲಿ ಅಳವಡಿಸಲಾಗಿದೆ. ವೀರನಹೊಸಳ್ಳಿ ವಲಯ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ರೈಲ್ವೆ ಕಂಬಿಗೆ ಸೋಲಾರ್ ತಂತಿ ಬೇಲಿ ಸುತ್ತಲಾಗಿದೆ.

Translate »