ಸೀವೆಜ್ ಫಾರಂನಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ವಿಲೇವಾರಿ ಯೋಜನೆ ಜಾರಿಗೊಳಿಸುವುದು ಶತಸಿದ್ಧ
ಮೈಸೂರು

ಸೀವೆಜ್ ಫಾರಂನಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ವಿಲೇವಾರಿ ಯೋಜನೆ ಜಾರಿಗೊಳಿಸುವುದು ಶತಸಿದ್ಧ

May 9, 2020
  •  ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
  • ಎಲ್ಲಾ ಪ್ರಕ್ರಿಯೆ ಪೂರ್ಣ: ಟೆಂಡರ್ ಕರೆಯುವುದೊಂದೇ ಬಾಕಿ

ಮೈಸೂರು, ಮೇ 8(ಎಂಟಿವೈ)- ಕಳೆದ ಮೂವತ್ತು ವರ್ಷದಿಂದ ವಿದ್ಯಾರಣ್ಯಪುರಂನ ಸೀವೆಜ್ ಫಾರಂ ನಲ್ಲಿನ ತ್ಯಾಜ್ಯ ರಾಶಿಯ ದುರ್ವಾಸನೆಯಿಂದ ನರಕಯಾತನೆ ಅನುಭವಿಸುತ್ತಿರುವ ಇದರ ಸುತ್ತಮುತ್ತಲಿನ ಜನರ ಹಿತಕಾಯಲು, ದೇಶದ ವಿವಿಧೆಡೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ಪ್ರಶಂಸೆಗೆ ಪಾತ್ರವಾಗಿರುವ ಸಿಗ್ಮಾ ಕಂಪನಿ ಮೂಲಕ ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡುವ ಯೋಜನೆಯನ್ನು ತಂದೇ ತರುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಸ್ಪಷ್ಟಪಡಿಸಿದ್ದಾರೆ.

ಸುತ್ತೂರು ಮಠದ ಆವರಣದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಗುರುವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರೊಂದಿಗೆ ವಿದ್ಯಾರಣ್ಯಪುರಂ ಸೀವೆಜ್ ಫಾರ್‍ಂಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿಲ್ಲ, ಬದಲಾಗಿ ವಸ್ತುನಿಷ್ಠ ಚರ್ಚೆ ಯಾಗಿದೆ. ಕಳೆದ 30 ವರ್ಷದಿಂದ ಸೀವೆಜ್ ಫಾರಂನಲ್ಲಿ ಕಸದ ಬೃಹತ್ ರಾಶಿಯೇ ನಿರ್ಮಾಣ ವಾಗಿದೆ. ಇದುವರೆಗೆ ಎಷ್ಟೋ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ರಾಜಕಾರಣಿಗಳು ಬಂದು ಕೇವಲ ಭೇಟಿ ನೀಡಿ, ಪರಿಶೀಲಿಸಿ ವಾಪಸ್ಸಾಗಿ ದ್ದಾರೆ. ಆದರೆ ಸಕಾರಾತ್ಮಕ ಕಾರ್ಯಕ್ರಮ ರೂಪಿಸಿಲ್ಲ. ಇದರಿಂದ ಪ್ರಸ್ತುತ 3 ಲಕ್ಷ ಟನ್ ಕಸ ಸಂಗ್ರಹವಾ ಗಿದೆ. ಆ ಘಟಕದಿಂದ ಬೀರುವ ದುರ್ವಾಸನೆ 5 ಕಿ.ಮೀ. ದೂರದವರೆಗೂ ಜನರನ್ನು ಕಾಡುತ್ತಿದೆ. ಈ ಘಟಕದ ಸುತ್ತಮುತ್ತ 50 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಸಮೀಪದ ಶಾಲೆಯ ವಿದ್ಯಾರ್ಥಿ ಗಳು ಮೂರ್ಛೆ ಬೀಳುವಂತಾಗಿದೆ. ಇದುವರೆಗೆ ಈ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಯಾವ ರಾಜಕಾರಣಿಯೂ ಪ್ರಯತ್ನ ಪಟ್ಟಿಲ್ಲ ಎಂದರು.

ಸೀವೆಜ್ ಫಾರಂನಿಂದ ಹೊರ ಬರುವ ದುರ್ವಾಸನೆ ಕಡಿಮೆಯಾಗಬೇಕೆಂದರೆ, ಅಲ್ಲಿರುವ ಕಸದ ರಾಶಿಯನ್ನು ತೆರವು ಮಾಡಬೇಕು. ಕಳೆದ ವರ್ಷ ದಸರಾ ಆಚರಣೆಗೆ ಉಸ್ತುವಾರಿ ಸಚಿವರಾಗಿ ಬಂದ ವಿ.ಸೋಮಣ್ಣ ಅವರನ್ನು ಕರೆತಂದು ಸ್ಥಳೀಯ ಜನರು ಅನುಭವಿಸುತ್ತಿರುವ ನರಕಯಾ ತನೆ ವಿವರಿಸಿದೆ. ಕಸದ ರಾಶಿಯನ್ನು ತೆರವು ಮಾಡುವುದೇ ಇದಕ್ಕೆ ಪರಿಹಾರವಾಗಿದೆ.

ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕ್ಷೇತ್ರವೂ ಸೇರಿದಂತೆ ದೇಶದ 35 ನಗರಗಳಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಸಿಗ್ಮಾ ಕಂಪನಿಯಿಂದ ಮೈಸೂರಿನ ಕಸದ ಸಮಸ್ಯೆ ನಿವಾರಿಸಬೇಕೆಂದು ನಿರ್ಧರಿಸಲಾಗಿದೆ. ನಾಗ್ಪುರದಲ್ಲಿ ಸಂಗ್ರಹವಾಗಿದ್ದ 7 ಲಕ್ಷ ಟನ್ ಕಸವನ್ನು ಸಿಗ್ಮಾ ಕಂಪನಿ ವೈಜ್ಞಾನಿಕ ವಾಗಿ ಯಶಸ್ವಿಯಾಗಿ ವಿಲೇವಾರಿ ಮಾಡಿಕೊಟ್ಟಿದೆ. ಯಾವ ತ್ಯಾಜ್ಯವನ್ನು ಗೊಬ್ಬರ ಮಾಡಬೇಕು, ಯಾವ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗೆ ಕೊಡಬೇ ಕೆಂದು ನಿರ್ಧರಿಸಿ, ಎಲ್ಲ ಕ್ಲೀನ್ ಮಾಡಿಕೊಡು ತ್ತಾರೆ. ಇಂತಹ ಯೋಜನೆ ರಾಜ್ಯದಲ್ಲಿ ಯಾವ ನಗರ ದಲ್ಲೂ ಅನುಷ್ಠಾನಗೊಂಡಿಲ್ಲ. ಮೈಸೂರು ನಗರದ ಹಿತದೃಷ್ಟಿಯಿಂದ ಆ ಕಂಪನಿಯನ್ನು ಕರೆಸಿ, ಇಲ್ಲಿನ ಕಸ ತೋರಿಸಿ, ಅಸೆಸ್‍ಮೆಂಟ್ ಮಾಡಿಸಿದ್ದೆ. ಸಚಿವ ವಿ.ಸೋಮಣ್ಣ ಅವರಿಗೆ ಈ ಯೋಜನೆ ಮಾಡಬೇ ಕೆಂದು ಮನವಿ ಮಾಡಿಕೊಂಡು ಡಿಪಿಆರ್ ಮಾಡಿಸಿದ್ದೆ. ಎಲ್ಲಾ ಕೆಲಸ ಮುಗಿದು, ಅರ್ಬನ್ ಡೆವಲಪ್‍ಮೆಂಟ್ ಡಿಪಾರ್ಟ್‍ಮೆಂಟ್ ಯೋಜನೆ ಜಾರಿ ಮಾಡಲು ಅನುಮತಿಗಾಗಿ ಫೈಲ್ ಹೋಗಿತ್ತು. ಇದೀಗ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಫೈಲ್ ಬಂದಿದೆ. ಟೆಂಡರ್ ಕರೆಯು ವುದೊಂದೇ ಬಾಕಿಯಿದೆ ಎಂದು ತಿಳಿಸಿದರು.

ಮೂರು ಹಂತದಲ್ಲಿ ಕಸ ವಿಲೇವಾರಿ ಮಾಡಲು ಉಲ್ಲೇಖಿಸಲಾಗಿದೆ. ಬಯೋ ರೆಮೆಡಿಯನ್, ಟ್ರಾಸ್ಫೋ ಟೇಷನ್, ಡಿಸ್ಫೋಸ್ಮೆಂಟ್ ಎಂದು ಪ್ರತ್ಯೇಕಿಸಲಾಗಿದೆ. ಆದರೆ ನಾವು ಮೂರು ಹಂತವನ್ನು ಪ್ರತ್ಯೇಕಿಸು ವುದು ಬೇಡ, ಎಲ್ಲವೂ ಒಳಗೊಂಡಂತೆ ಒಂದೇ ಹಂತದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಗುರುವಾರ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜು ಅವರಿಗೆ ಈ ಯೋಜನೆಯನ್ನು ಜಾರಿಗೆ ತರು ವಂತೆ ಮನವಿ ಮಾಡಿಕೊಂಡಿದ್ದೇನೆ. ಒಳ್ಳೆ ಟೆಕ್ನಾಲಜಿ ಬಳಸಿ ಕಸ ವಿಲೇವಾರಿ ಮಾಡಿ ಬಹುವರ್ಷ ಗಳಿಂದ ತಲೆ ನೋವಾಗಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ದತೆ ಮುಗಿದಿದೆ. ಇದಕ್ಕೆ ಚಾಲನೆ ನೀಡುವುದೊಂದೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅನುಮತಿ ನೀಡು ವಂತೆ ಕೋರಿದ್ದೇನೆ ಎಂದು ತಿಳಿಸಿದರು.

ಇದೊಂದು ಟ್ರೈಯ್ಡ್ ಟ್ರಸ್ಟೆಡ್ ಮಾಡೆಲ್ ಯೋಜನೆಯಾಗಿದೆ. ಹಾಗಾಗಿ ಇದನ್ನು ಜಾರಿಗೆ ತರಲೇಬೇಕಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಲ್ಲಿ ಜಾರಿಗೆ ತಂದ ಕೀರ್ತಿ ದೊರೆಯಲಿದೆ. ಈ ಹಿಂದೆ ಸಚಿವ ಸೋಮಣ್ಣ ಪ್ರೋತ್ಸಾಹ ಕೊಟ್ಟರು. ಈಗಿನ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರೂ ವಿಶೇಷವಾದ ಆಸಕ್ತಿ ತೋರಿಸಿದ್ದಾರೆ. ಟೆಂಡರ್ ಕರೆ ಯುವ ಪ್ರಕ್ರಿಯೆ ಮಾತ್ರ ಉಳಿದಿದೆ. ಇಂತಹ ಸಂದರ್ಭ ದಲ್ಲಿ ಮತ್ತೆ ಪ್ರಾರಂಭಿಕ ಹಂತದಿಂದ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಬೇಕು ಎನ್ನುವುದು ಸರಿಯಲ್ಲ. ಹಾಗೆ ಒತ್ತಾಯಿಸುವವರು 25 ವರ್ಷದಿಂದ ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.

ಈ ಯೋಜನೆ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಅಭಿಯಾನದ ಒಂದು ಭಾಗವಾಗಿದೆ. ಈ ಯೋಜನೆ ಮಾಡಿಸಿಯೇ ತೀರುತ್ತೇನೆ. ಈ ಹಿಂದಿನ ಮೇಯರ್ ಪುಷ್ಪಲತಾ ಜಗನ್ನಾಥ್, ಹೆಲ್ತ್ ಕಮಿಟಿ ಸದಸ್ಯರು ನಾಗ್ಪುರಕ್ಕೆ ಹೋಗಿ ಅಧ್ಯಯನ ಮಾಡಿ ಇದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಜನರನ್ನು ದುರ್ವಾಸನೆಯಿಂದ ಮುಕ್ತಗೊ ಳಿಸುವುದೇ ನಮ್ಮ ಉದ್ದೇಶವಾಗಿದೆ. ಗೊಂದಲ ಸೃಷ್ಟಿಸುವವರಿಗೆ ನಾನೇನು ಹೇಳಲ್ಲ. ಯಾರು ಬೇಕಾದರೂ ಟೆಂಡರ್ ಪಡೆದು ಕಸ ವಿಲೇವಾರಿ ಮಾಡಲಿ. ನಾನು ಈ ಯೋಜನೆಯನ್ನು ಜಾರಿಗೆ ತಂದೇ ತರುತ್ತೇನೆ ಎಂದು ಘೋಷಿಸಿದರು.

Translate »