ಭೀಕರ ರಸ್ತೆ ಅಪಘಾತದಲ್ಲಿ  ಎಂಬಿಬಿಎಸ್ ವಿದ್ಯಾರ್ಥಿ ಬಲಿ
ಮೈಸೂರು

ಭೀಕರ ರಸ್ತೆ ಅಪಘಾತದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಬಲಿ

January 6, 2022

ಮೈಸೂರು, ಜ. 5(ಆರ್‍ಕೆ)- ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ, ಮೈಸೂರಿನ ಚಾಮರಾಜ ಜೋಡಿ ರಸ್ತೆಯ ತಾತಯ್ಯ ಸರ್ಕಲ್‍ನಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಒಒಅ&ಖI) ವಿದ್ಯಾರ್ಥಿ ರಾಹುಲ್ ಲಕ್ಷ್ಮಣ್ ಹಿಡಿಕಲ್(24) ಸಾವನ್ನಪ್ಪಿದವರು. ಮೂಲತಃ ಬೆಳಗಾವಿ ಜಿಲ್ಲೆ, ಘಟಪ್ರಭ ನಿವಾಸಿ ಲಕ್ಷ್ಮಣ್ ಹಿಡಿಕಲ್ ಮತ್ತು ಶ್ರೀಮತಿ ಹೇಮಾ ಲಕ್ಷ್ಮಣ್ ಹಿಡಿಕಲ್ ಅವರ ಹಿರಿಯ ಮಗನಾದ ರಾಹುಲ್ ಎಂಎಂಸಿಆರ್‍ಐನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದು, 6 ತಿಂಗಳಲ್ಲಿ ಇಂಟರ್ನ್‍ಶಿಪ್ ಸೇರಬೇಕಿತ್ತು.

ಮುಡಾ ಕಚೇರಿ ಎದುರು ಜೆಎಲ್‍ಬಿ ರಸ್ತೆಯಲ್ಲಿರುವ ಮೆಡಿಕಲ್ ಕಾಲೇಜು ಯುಜಿ ಪುರುಷರ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್, ತನ್ನ ಯಮಹಾ(ಕೆಎ09-ಹೆಚ್‍ಪಿ 9549) ಬೈಕಿನಲ್ಲಿ ಸಿದ್ದಪ್ಪ ಸ್ಕ್ವೇರ್ ಸರ್ಕಲ್ ಕಡೆಯಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶಾಂತಲಾ ಟಾಕೀಸ್ ಕಡೆಗೆ ಬರುತ್ತಿದ್ದಾಗ ರಾಮಸ್ವಾಮಿ ಸರ್ಕಲ್ ಕಡೆಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿ ಗನ್‍ಹೌಸ್ ಸರ್ಕಲ್ ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಚಿಕ್ಕಮಗಳೂರು ಡಿಪೋ ಬಸ್(ಕೆಎ-45-ಎಫ್30) ತಾತಯ್ಯ ಸರ್ಕಲ್‍ನಲ್ಲಿ ಕಳೆದ ಮಧ್ಯರಾತ್ರಿ 12.15 ಗಂಟೆ ವೇಳೆಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಬೈಕ್ ತುಸು ದೂರಕ್ಕೆ ಹಾರಿ ಬಿದ್ದರೆ, ರಾಹುಲ್ ಚಕ್ರಕ್ಕೆ ಸಿಲುಕಿ ಅಸುನೀಗಿದ ದೃಶ್ಯ ತಾತಯ್ಯ ಸರ್ಕಲ್‍ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಮಂಜುನಾಥ ಹಾಗೂ ಸಿಬ್ಬಂದಿ ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಮಧ್ಯರಾತ್ರಿಯೇ ರಾಹುಲ್ ಪೋಷಕರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದ ಪೊಲೀಸರು, ಇಂದು ಮಧ್ಯಾಹ್ನದ ವೇಳೆ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಹೆಚ್.ಎನ್. ದಿನೇಶ, ಕೆ.ಆರ್. ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎನ್.ನಂಜುಂಡಸ್ವಾಮಿ, ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಚಂದ್ರಶೇಖರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ಅವರು ಮಧ್ಯರಾತ್ರಿಯೇ ಧಾವಿಸಿದ್ದರು. ಕಾಲೇಜು ಆವರಣದಲ್ಲಿ ರಾಹುಲ್ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ನಮನ ಸಲ್ಲಿಸಿದರು. ಡಾ. ಚಂದ್ರಶೇಖರ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಪೋಷಕರೊಂದಿಗೆ ಸಂಸ್ಥೆ ಸಿಬ್ಬಂದಿಗಳನ್ನೂ ಬೆಳಗಾವಿಗೆ ಪಾರ್ಥಿವ ಶರೀರವನ್ನು ಕಳುಹಿಸಿಕೊಟ್ಟರು.

Translate »