ಅಂಗಡಿ ಲೈಸೆನ್ಸ್ ಜೊತೆಗೆ ಗೋಡೌನ್ ಅನ್ನು ಸೇರಿಸಿ
ಮೈಸೂರು

ಅಂಗಡಿ ಲೈಸೆನ್ಸ್ ಜೊತೆಗೆ ಗೋಡೌನ್ ಅನ್ನು ಸೇರಿಸಿ

February 28, 2021

ಮೈಸೂರು, ಫೆ.27(ಆರ್‍ಕೆಬಿ)- ಗೋಡೌನ್‍ಗೆ ಪ್ರತ್ಯೇಕ ಲೈಸೆನ್ಸ್ ಬದಲು ಅಂಗಡಿ ಲೈಸೆನ್ಸ್ ಜೊತೆಗೇ ಗೋಡೌನ್ ಅನ್ನು ಸೇರ್ಪಡೆ ಮಾಡಿ, ಪೆಸ್ಟಿಸೈಡ್ ಮ್ಯಾನೇಜ್‍ಮೆಂಟ್ ಬಿಲ್‍ನ ದಂಡ ವ್ಯಾಪ್ತಿಯಿಂದ ನಮ್ಮನ್ನು ಹೊರತುಪಡಿಸಿ ಎಂದು ಶನಿವಾರ ಮೈಸೂರಿನ ಬಲ್ಲಾಳ್ ವೃತ್ತದ ಬಳಿಯ ನಿತ್ಯೋತ್ಸವ ಸಭಾಂಗಣದಲ್ಲಿ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ರಸ ಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಸಂಘದ ಅಧ್ಯಕ್ಷ ಆರ್.ಯೋಗರಾಜ ಅಧ್ಯಕ್ಷತೆ ಯಲ್ಲಿ ನಡೆದ ಸಮಾವೇಶದಲ್ಲಿ ತಮಗಾಗುತ್ತಿರುವ ತೊಂದರೆಗಳ ಕುರಿತು ನಿರ್ಣಯಗಳನ್ನು ಕೈಗೊಂಡರು. ನಗರ ಪ್ರದೇಶದಲ್ಲಿ ಅಂಗಡಿ ಲೈಸೆನ್ಸ್‍ಗೆ 7500 ಕಟ್ಟಬೇಕು. ಈಗ ಪ್ರತೀ ಗೋಡೌನ್ ಅಷ್ಟೇ ದುಡ್ಡು ಕಟ್ಟಬೇಕಾಗಿದೆ. ಅಂದರೆ ಗೋಡೌನ್‍ಗೂ ಲೈಸೆನ್ಸ್ ತೆಗೆದುಕೊಳ್ಳಬೇಕು. ಅಲ್ಲಿ ಬರೀ ದಾಸ್ತಾನು ಮಾತ್ರ ಇಟ್ಟಿರುತ್ತೇವೆ. ಹಾಗಾಗಿ ಅಂಗಡಿಯ ಲೈಸೆನ್ಸ್ ಜೊತೆಗೇ ಗೋಡೌನ್ ಅನ್ನು ಸೇರ್ಪಡೆ ಮಾಡಬೇಕು. ಗೋಡೌನ್ ಅನ್ನು ಲೈಸೆನ್ಸ್ ವ್ಯಾಪ್ತಿಯಿದ ಹೊರ ಗಿಡಬೇಕು ಎಂದು ಆಗ್ರಹಿಸಿದರು.

ಫೆ.23ರಂದು ತರಲಾಗಿರುವ ಪೆಸ್ಟಿಸೈಡ್ ಮ್ಯಾನೇಜ್ ಮೆಂಟ್ ಬಿಲ್ ಪ್ರಕಾರ ಪ್ರಾಡಕ್ಟ್ ಏನಾದರೂ ಸಬ್ ಸ್ಟಾಂಡರ್ಡ್ ಬಂದರೆ ನಮ್ಮನ್ನು ಕೂಡ ದಂಡದ ವ್ಯಾಪ್ತಿಗೆ ಒಳಪಡಿಸಿದ್ದಾರೆ. ನಾವು ಫ್ಯಾಕ್ಟರಿ ಎಲ್ಲಿದೆ ಎಂದೇ ನೋಡಿಲ್ಲ. ತಯಾರಿಕೆ ಹೇಗಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆ ಕಂಪನಿಯು ಮಾಡುವ ತಪ್ಪಿಗೆ ನಮಗೂ ದಂಡದ ವ್ಯಾಪ್ತಿಗೆ ಸೇರಿಸಿರುವುದು ಸರಿ ಯಲ್ಲ. ಹೀಗಾಗಿ ಇದರಿಂದ ನಮ್ಮನ್ನು ಹೊರತು ಪಡಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಲೈಸೆನ್ಸ್ ಮತ್ತು ವಿಳಾಸ ಇಲ್ಲದೇ ಆನ್ ಲೈನ್ ಮಾರುಕಟ್ಟೆಯಲ್ಲಿಯೂ ಗೊಬ್ಬರ, ಬೀಜ ಮಾರಾಟವಾಗುತ್ತಿದೆ. ಮಾರಾಟಕ್ಕೆ ನಮ್ಮ ಅಭ್ಯಂತರ ವಿಲ್ಲ. ಆದರೆ ಆನ್‍ಲೈನ್ ಮಾರಾಟಗಾರರನ್ನೂ ಲೈಸೆನ್ಸ್ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

ಸಮಾವೇಶಕ್ಕೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ, ಮೈಸೂರು ಜಿಲ್ಲೆಯಲ್ಲಿ 585 ಮಂದಿ ಲೈಸೆನ್ಸ್ ಹೊಂದಿ ರುವ ಪರಿಕರ ಮಾರಾಟಗಾರರಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಇತ್ತೀಚೆಗೆ ಸೀಡ್ ಲೈಸೆನ್ಸ್ ಅನ್ನು ತೋಟಗಾರಿಕೆ ಅಧಿಕಾರಿಗಳ ವ್ಯಾಪ್ತಿಗೂ ತರಲಾಗಿದೆ. ಇದರಿಂದ ಮಾರಾಟಗಾರರು ಮತ್ತು ಇಲಾಖೆಗೆ ತೊಂದರೆಯಾಗುತ್ತಿದೆ. ಲೈಸೆನ್ಸ್ ವಿತರಿಸಲು ಕಷ್ಟ ವಾಗುತ್ತಿದೆ. ಈ ಬಗ್ಗೆ ಕೇಂದ್ರ ಕಚೇರಿಯ ಗಮನಕ್ಕೆ ತಂದಿದ್ದೇವೆ. ಪರಿಹರಿಸುವ ಕ್ರಮವಾಗುತ್ತದೆ ಎಂದು ಭರವಸೆ ನೀಡಿದರು. ಯೂರಿಯಾ ರಸಗೊಬ್ಬರ ವಿತರಣೆಗೆ ಸರ್ಕಾರ ಬಹಳಷ್ಟು ಮಹತ್ವ ಕೊಡುತ್ತಿದೆ. ಯೂರಿಯಾ ವಿತರಣೆ ಬಿಗಿಯಾಗಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಇದೇ ವೇಳೆ 30 ವರ್ಷಗಳಿಂದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರಾದ ಮೈಸೂರಿನ ಜಯಶಂಕರ್, ಹುಣಸೂರಿನ ರಾಜ ಶೇಖರ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮಹಮ್ಮದ್ ಅಕ್ಬರ್, ಲೊಕ್ಕನಹಳ್ಳಿಯ ಸುಬ್ರಹ್ಮಣ್ಯ ಅವ ರನ್ನು ಸನ್ಮಾನಿಸಲಾಯಿತು. 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಚಾಮ ರಾಜನಗರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಹೆಚ್.ಟಿ.ಚಂದ್ರಕಲಾ, ಸಂಘದ ಗೌರವಾಧ್ಯಕ್ಷ ಟಿ.ಮಹಾಂತೇಶ್, ಕಾರ್ಯದರ್ಶಿ ಬಿ.ಪಿ.ಶಿವಪ್ರಕಾಶ್, ಖಜಾಂಚಿ ಕೆ.ಕಿರಣ್, ಸಂಘದ ಉಪಾಧ್ಯಕ್ಷರಾದ ಆರ್.ವೆಂಕಟೇಶ್, ಎಸ್.ಮಹೇಶ್, ಜಂಟಿ ಕಾರ್ಯ ದರ್ಶಿಗಳಾದ ಜಿ.ಕೆ.ಸುಬ್ರಹ್ಮಣ್ಯ, ಅಸೀಮ್ ಉಲ್ಲಾ, ಮಾಜಿ ಅಧ್ಯಕ್ಷ ಶಾಂತಕುಮಾರ್, ಕೊಳ್ಳೇಗಾಲದ ಶ್ರೀನಿಧಿ ಆಗ್ರೋ ಏಜೆನ್ಸಿಯ ಮಹೇಶ್, ಬಾಲಾಜಿ ಆಗ್ರೋ ಏಜೆನ್ಸಿಯ ಬಾಬು, ಜಿ.ಪಿ.ಟ್ರೇಡರ್ಸ್‍ನ ಸುರೇಶ್, ಸೌಭಾಗ್ಯ ಟ್ರೇಡರ್ಸ್‍ನ ಜಡೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

 

 

 

Translate »