ಮೈಸೂರು ಜಿಲ್ಲೆಯಲ್ಲಿ ಶೇ.75.07 ಮತದಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.75.07 ಮತದಾನ

May 11, 2023

ಮೈಸೂರು, ಮೇ 10(ಆರ್‍ಕೆ)-ಇಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶೇ.75.07ರಷ್ಟು ಶಾಂತಿಯುತ ಮತದಾನ ನಡೆದಿದೆ.

ಭಾರತ ಚುನಾವಣಾ ಆಯೋಗದ ನಿರ್ದೇ ಶನದಂತೆ ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರ ಗಳ 2,905 ಮತಗಟ್ಟೆಗಳಲ್ಲೂ ಬೆಳಗ್ಗೆ 7 ಗಂಟೆಗೆ ಮತದಾನ ಕಾರ್ಯ ಆರಂಭವಾಯಿತಾದರೂ, ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟ ಕಾರಣ ಕೆಲವು ಮತಗಟ್ಟೆಗಳಲ್ಲಿ ಅರ್ಧ ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಮೈಸೂರು ಜಿಲ್ಲೆಯಲ್ಲಿ 230 ಇತರರು, 13,38,637 ಮಹಿಳೆಯರು ಹಾಗೂ 13,17,121 ಪುರುಷ ಮತದಾರರಿದ್ದು, ಬೆಳಗ್ಗೆ ಯಿಂದಲೇ ಮತಗಟ್ಟೆಗಳಿಗೆ ತೆರಳಿ ಉತ್ಸಾಹದಿಂದ ಸಾಲುಗಟ್ಟಿ ನಿಂತು ಮತದಾನ ಮಾಡಿದರು. ಪ್ರತಿ ಮತದಾರರ ಮನೆಗೂ ಈ ಬಾರಿ ಅವರ ಹೆಸರು, ಮತಗಟ್ಟೆ ಸಂಖ್ಯೆ, ಸ್ಥಳ, ಭಾಗದ ಸಂಖ್ಯೆ, ಕ್ರಮಸಂಖ್ಯೆ ಇರುವ ಚೀಟಿ ಗಳನ್ನು ಜಿಲ್ಲಾಡಳಿತದಿಂದಲೇ ವಿತರಿಸಲಾಗಿತ್ತು. ಹಾಗಾಗಿ ಎಲ್ಲಿಯೂ ತಾವು ಮತ ಚಲಾಯಿಸುವ ಕೇಂದ್ರ ಹುಡುಕಬೇಕಾದ ತೊಂದರೆ ಉಂಟಾಗ ಲಿಲ್ಲ. ಬೆಳಗ್ಗೆ 6.30 ರಿಂದ 6.50 ಗಂಟೆವರೆಗೆ ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ
ಮತಯಂತ್ರಗಳಲ್ಲಿ ಅಣಕು ಮತದಾನ ಮಾಡಿ, ಸುರಕ್ಷತೆ ಬಗ್ಗೆ ಖಾತರಿಪಡಿಸಿ ಕೊಂಡರು. ತಾವು ಚಲಾಯಿಸಿದ ಮತ ಆ ಅಭ್ಯರ್ಥಿಗೇ ಹೋಗಿದೆಯೇ ಎಂಬು ದನ್ನು ವಿವಿ ಪ್ಯಾಟ್‍ನಲ್ಲಿ ಖಚಿತಪಡಿಸಿ ಕೊಂಡ ಬಳಿಕವೇ ಬೆಳಗ್ಗೆ 7 ಗಂಟೆಯಿಂದ ಮತದಾನಕ್ಕೆ ಅವಕಾಶ ನೀಡಲಾಯಿತು. ಆರಂಭದಲ್ಲಿ ನೀರಸ ಮತದಾನವಾಯಿ ತಾದರೂ, ಬೆಳಗ್ಗೆ 9 ಗಂಟೆವರೆಗೆ ಮೊದಲ ಎರಡು ತಾಸುಗಳಲ್ಲಿ ಜಿಲ್ಲೆಯಾದ್ಯಂತ ಶೇ.8.19ರಷ್ಟು ಮತದಾನವಾಗಿತ್ತು. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಶೇ.8.13, ಕೆ.ಆರ್.ನಗರದಲ್ಲಿ ಶೇ.8.4, ಹುಣಸೂ ರಲ್ಲಿ ಕೇವಲ ಶೇ.5.5, ಹೆಚ್.ಡಿ.ಕೋಟೆ ಯಲ್ಲಿ ಶೇ.6.53, ನಂಜನಗೂಡಲ್ಲಿ ಶೇ.8, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶೇ.9, ಕೆಆರ್‍ನಲ್ಲಿ ಶೇ.6.32, ಚಾಮರಾಜದಲ್ಲಿ ಶೇ.8.82, ನರಸಿಂಹರಾಜದಲ್ಲಿ ಶೇ.6, ವರುಣದಲ್ಲಿ ಶೇ.8.5 ಹಾಗೂ ಟಿ.ನರಸೀಪುರ ಕ್ಷೇತ್ರದಲ್ಲಿ ಶೇ.8.19ರಷ್ಟು ಮತದಾನ ದಾಖಲಾಗಿತ್ತು. ತದನಂತರ ಮತದಾನ ಚುರುಕುಗೊಂಡಿತು. 18 ವರ್ಷ ಮೇಲ್ಪಟ್ಟ ಯುವ ಮತದಾರರು, ವೃದ್ಧರು, ವಿಕಲ ಚೇತನರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಲಾರಂಭವಾದಾಗ ಬೆಳಗ್ಗೆ 11 ಗಂಟೆವರೆಗೆ 4 ಗಂಟೆ ಅವಧಿಯಲ್ಲಿ ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಶೇ.19.07ರಷ್ಟು ಮತ ಚಲಾವಣೆಯಾಗಿತ್ತು. ಇಂದು ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣವಿದ್ದ ಕಾರಣ, ಬಿಸಿಲಿನ ತೀವ್ರತೆ ಇಲ್ಲದಿದ್ದರೂ, ತಾಪಮಾನ ಮಾತ್ರ ಕಡಿಮೆಯಾಗಿರಲಿಲ್ಲ. ಆದರೂ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.36.73ರಷ್ಟು ಮತ ದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮಧ್ಯಾಹ್ನ 3 ಗಂಟೆವರೆಗೆ ಶೇ.52.45, ಸಂಜೆ 5 ಗಂಟೆವರೆಗೆ ಶೇ.66.70, ಅಂತಿಮವಾಗಿ ಶೇ.75.07ರಷ್ಟು ಮತದಾನವಾಯಿತು.
ಕ್ಷೇತ್ರವಾರು ಮತದಾನ: ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಶೇ.84.42, ಕೆ.ಆರ್.ನಗರದಲ್ಲಿ ಶೇ.85.10, ಹುಣಸೂರಿನಲ್ಲಿ ಶೇ.82.16, ಹೆಚ್.ಡಿ.ಕೋಟೆಯಲ್ಲಿ ಶೇ.79.85, ನಂಜನಗೂಡಲ್ಲಿ ಶೇ.80.67, ಚಾಮುಂಡೇಶ್ವರಿಯಲ್ಲಿ ಶೇ.74.27, ಕೃಷ್ಣರಾಜದಲ್ಲಿ ಶೇ.59.34, ಚಾಮರಾಜ ದಲ್ಲಿ ಶೇ.61.12, ನರಸಿಂಹರಾಜದಲ್ಲಿ ಶೇ.63.44, ವರುಣದಲ್ಲಿ ಶೇ.84.39 ಹಾಗೂ ತಿ.ನರಸೀಪುರ ಕ್ಷೇತ್ರದಲ್ಲಿ ಶೇ.78.77 ರಷ್ಟು ಸೇರಿ ಜಿಲ್ಲೆಯಲ್ಲಿ ಒಟ್ಟು ಶೇ.75.75ರಷ್ಟು ಮತದಾನವಾಗಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಕಡೇ ಘಳಿಗೆಯಲ್ಲಿ ಬಿರುಸಿನಿಂದ ಮತದಾನವಾಗಿದ್ದು, ಸಂಜೆ 5 ರಿಂದ 6 ಗಂಟೆವರೆಗೆ ಮತಗಟ್ಟೆ ಆವರಣ ಪ್ರವೇಶಿಸಿದ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು. 6 ಗಂಟೆಗೆ ಮತಗಟ್ಟೆ ಕಾಂಪೌಂಡ್ ಗೇಟ್ ಅನ್ನು ಬಂದ್ ಮಾಡಿ, ನಂತರ ಬಂದವರನ್ನು ವಾಪಸ್ ಕಳುಹಿಸಲಾಯಿತು. ಈ ಸಂದರ್ಭ ಕೆಲ ಮತಗಟ್ಟೆಗಳಲ್ಲಿ ಮತದಾರರು, ಮತಗಟ್ಟೆ ಅಧಿಕಾರಿಗಳೊಂದಿಗೆ ವಾದ ಮಾಡಲೆತ್ನಿಸಿದರಾದರೂ, ಪೊಲೀಸರು ಮತ್ತು ಪಿಆರ್‍ಓಗಳು ಭಾರತ ಚುನಾವಣಾ ಆಯೋಗದ ಸ್ಪಷ್ಟ ಲಿಖಿತ ಆದೇಶ ತರಿಸಿ, ತಡವಾಗಿ ಬಂದವರಿಗೆ ಹಕ್ಕು ಚಲಾಯಿಸಲು ಅವಕಾಶವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಕಳುಹಿಸಿದರು.

ಅಲ್ಪಮಟ್ಟಿನ ಸುಧಾರಣೆ: ಕಳೆದ 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ 12,40,035 ಮಹಿಳೆಯರು ಸೇರಿ ಒಟ್ಟು 24,89,355 ಮಂದಿ ಮತದಾರರ ಪೈಕಿ 18,45,996 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲಿ ಶೇ.74.16ರಷ್ಟು ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಕಮಿಟಿಯು ಹೆಚ್ಚು ಆಸಕ್ತಿ ವಹಿಸಿ ಮತ ಜಾಗೃತಿ ಮೂಡಿಸಿದ್ದಲ್ಲದೆ, 80 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರು ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಫಲವಾಗಿ ಮತದಾನ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.
ಅಚ್ಚುಕಟ್ಟಿನ ಮತದಾನ: ಇಂದು ಮತದಾನದ ವೇಳೆ ಮತಗಟ್ಟೆಗಳಲ್ಲಿ ಮುಕ್ತ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಯಮಾನುಸಾರ ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಟೇಬಲ್ ಹಾಕಿಕೊಂಡು ಮತದಾರರಿಗೆ ಮಾಹಿತಿ ನೀಡಿ, ಸಹಾಯ ಮಾಡಲು ಅವಕಾಶ ನೀಡಲಾಗಿತ್ತೇ ಹೊರತು, ಮತ ಪ್ರಚಾರ ಮಾಡಲು ನಿರ್ಬಂಧ ಹೇರಲಾಗಿತ್ತು.

ಅಭ್ಯರ್ಥಿಗಳು ತಮ್ಮ ಕ್ಷೇತ್ರದಾದ್ಯಂತ ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸುತ್ತಿದ್ದರಾದರೂ ಚುನಾವಣಾ ಪ್ರಚಾರ ನಡೆಸಲಿಲ್ಲ. ಅಭ್ಯರ್ಥಿಗಳು, ಪ್ರಮುಖ ರಾಜಕೀಯ ಮುಖಂಡರು, ಸಂಸದ, ಶಾಸಕರು, ಮಾಜಿ ಸಚಿವರು, ಗಣ್ಯರು ಉತ್ಸಾಹದಿಂದ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಮತ ಚಲಾಯಿಸಿದರು.

ವೃದ್ಧರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಬಂದಾಗ ನಿಯೋಜಿತ ಸ್ವಯಂ ಸೇವಕರು ಹಾಗೂ ಅಧಿಕಾರಿಗಳು ವ್ಹೀಲ್‍ಚೇರ್ ಸಹಾಯದಿಂದ ಅವರನ್ನು ಕರೆದೊಯ್ದು ಆದ್ಯತೆ ಮೇಲೆ ಮತ ಹಾಕಿಸಿ ಕಳುಹಿಸಲು ನೆರವು ನೀಡಿದರು. ಪ್ರತೀ ಮತಗಟ್ಟೆ ಬಳಿ ಮತಗಟ್ಟೆ ಸಂಖ್ಯೆ, ಅಭ್ಯರ್ಥಿಗಳ ಹೆಸರು, ಕ್ರಮಸಂಖ್ಯೆ, ಚಿಹ್ನೆಯ ಮಾಹಿತಿ ಯನ್ನು ಪ್ರಕಟಿಸಲಾಗಿತ್ತು. ಪ್ರತೀ ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾ ಗಿತ್ತು. ಸೂಕ್ಷ್ಮ ಮತಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಅರೆಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಿ ವೆಬ್‍ಕಾಸ್ಟಿಂಗ್ ಮೂಲಕ ಸಂಪೂರ್ಣ ಮತದಾನ ಪ್ರಕ್ರಿಯೆ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಪರಿಣಾಮ ಇಂದು ಯಾವುದೇ ಅಹಿತಕರ ಘಟನೆಗಳೂ ನಡೆಯದಂತೆ ಮೈಸೂರು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ಮುಕ್ತಾಯವಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ವಿ.ಸೋಮಣ್ಣ ಸ್ಪರ್ಧಿಸಿರುವ ವರುಣ ಹೈವೋಲ್ಟೇಜ್ ಕ್ಷೇತ್ರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಇನ್ನಿಲ್ಲದ ಭಾರೀ ಬಂದೋಬಸ್ತ್ ಮಾಡಿ, ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲಾ 54 ಸೂಕ್ಷ್ಮ ಮತಗಟ್ಟೆಗಳಿಗೆ ಅರೆಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಿ, ಹಿರಿಯ ಪೊಲೀಸ್ ಅಧಿಕಾರಿಗಳು ಕ್ಷೇತ್ರದಾದ್ಯಂತ ಗಸ್ತು ಕರ್ತವ್ಯದ ಮೇಲ್ವಿಚಾರಣೆ ನಡೆಸಿದರು.

Translate »