ಸಂಗೀತ, ನೃತ್ಯವಿಲ್ಲದೇ ಸಾಂಸ್ಕೃತಿಕ ನಗರಿ ಸಭಾಂಗಣ ಭಣಭಣ
ಮೈಸೂರು

ಸಂಗೀತ, ನೃತ್ಯವಿಲ್ಲದೇ ಸಾಂಸ್ಕೃತಿಕ ನಗರಿ ಸಭಾಂಗಣ ಭಣಭಣ

July 5, 2020

ಮೈಸೂರು, ಜು.4(ಎಂಕೆ)- ಸದಾ ಸಂಗೀತ, ನೃತ್ಯ, ನಾಟಕ, ಭರತನಾಟ್ಯ ದಂತಹ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಗಿಜಿಗುಡುತ್ತಿದ್ದ ಮೈಸೂರಲ್ಲಿ ಕಳೆದ 3 ತಿಂಗಳಿಂದ ನಾದ ಸ್ವರದ ಇಂಪು, ಚಪ್ಪಾಳೆ ಸದ್ದು ಕೇಳದೆ ಸಾಂಸ್ಕೃತಿಕ ಕಲಾ ಕ್ಷೇತ್ರಗಳಲ್ಲಿ ಮೌನ ಆವರಿಸಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಯಾದ ಬಳಿಕ ಸಾಂಸ್ಕೃತಿಕ ರಾಜಧಾನಿ ಮೈಸೂ ರಿನಲ್ಲಿ ವಿವಿಧ ಬಗೆಯ ಕಾರ್ಯಕ್ರಮ ಗಳಿಂದ ತುಂಬಿರುತ್ತಿದ್ದ ಸಭಾಂಗಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಮನಸ್ಸಿನ ನೆಮ್ಮದಿಗಾಗಿ ಮತ್ತು ಕಲಾವಿದ ರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಭಾಂಗಣಗಳತ್ತ ಧಾವಿಸುತ್ತಿದ್ದ ಕಲಾ ರಸಿಕರು, ಹಿರಿಯ ನಾಗರಿಕರು ಸಂಗೀತ ಸುಧೆಗಾಗಿ ಹಂಬಲಿಸುವಂತಾಗಿದೆ.

ಕರ್ನಾಟಕ ಕಲಾಮಂದಿರ ಸಭಾಂಗಣ, ಕಿರು ರಂಗಮಂದಿರ, ಮನೆಯಂಗಳ, ರಂಗಾ ಯಣ ಆವರಣದಲ್ಲಿರುವ ಭೂಮಿಗೀತ, ಶ್ರೀರಂಗ, ವನರಂಗ, ನಾದಬ್ರಹ್ಮ ಸಂಗೀತ ಸಭಾ, ವೀಣೆ ಶೇಷಣ್ಣ ಗಾನಭಾರತಿ ಸಂಗೀತ ಸಭಾ, ಜಗನ್ಮೋಹನ ಅರಮನೆ, ಟೌನ್‍ಹಾಲ್, ರೋಟರಿ ಸಭಾಂಗಣ, ಇಂಜಿನಿಯರ್ಸ್ ಸಂಸ್ಥೆ ಸಭಾಂಗಣ, ಶಾರದಾ ವಿಲಾಸ ಸಭಾಂಗಣ, ಸೆನೆಟ್ ಹಾಲ್, ಮುಕ್ತ ಗಂಗೋತ್ರಿ ಸಭಾಂಗಣ, ಮಾಧವ ಕೃಪ ಸೇರಿದಂತೆ ನಗರದಲ್ಲಿರುವ ಹತ್ತು ಹಲವು ಸಾಂಸ್ಕೃತಿಕ ಸಭಾಂಗಣಗಳು ಬರಿ ದಾಗಿ ಕಾಣುತ್ತಿವೆ.

ಆನ್‍ಲೈನ್ ಪ್ರಯತ್ನ: ಲಾಕ್‍ಡೌನ್ ನಿಂದ ಪ್ರೇಕ್ಷಕರೊಡನೆ ವೇದಿಕೆ ಮೇಲೆ ನಡೆಯುತ್ತಿದ್ದ ಎಲ್ಲಾ ಬಗೆಯ ಕಾರ್ಯ ಕ್ರಮಗಳು, ತರಬೇತಿ ನೀಡುವ ಸಾಂಸ್ಕೃತಿಕ ಸಂಸ್ಥೆಗಳು ಶಾಲೆಗಳು ಬಂದ್ ಆಗಿವೆ. ಆದರೆ, ಕಲೆಯನ್ನೇ ನಂಬಿಕೊಂಡಿದ್ದ ಉದಯೋ ನ್ಮುಖ ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ, ಅವ ಕಾಶ ಮಾಡಿಕೊಡುವ ಪ್ರಯತ್ನವನ್ನು ಕೆಲವು ಸಂಗೀತ ಸಂಸ್ಥೆಗಳ ಮಾಡುತ್ತಿವೆ.

ಕಷ್ಟವೆನಿಸಿದರೂ ಸರ್ಕಾರದ ನಿಯಮ ಗಳನ್ನು ಪಾಲಿಸಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ಉದಯೋನ್ಮುಖ ಕಲಾವಿದ ರಿಗೆ ಅನುಕೂಲವಂತೆ ಮೊದಲ ಬಾರಿಗೆ ಆನ್‍ಲೈನ್(ಫೇಸ್‍ಬುಕ್) ಮೂಲಕ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಹಿರಿಯ ಮತ್ತು ಉದಯೋನ್ಮುಖ ಕಲಾವಿದರಿಗೆ ಅನುಕೂಲ ವಾಗುವಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಸಂಗೀತ ಕಾರ್ಯಕ್ರಮಗಳನ್ನು ಪ್ರತೀ ಮಂಗಳವಾರ ಮತ್ತು ಶನಿವಾರ ಹಮ್ಮಿ ಕೊಳ್ಳಲಾಗುತ್ತಿದೆ. ಆನ್‍ಲೈನ್ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳನ್ನು ದೇಶದಲ್ಲಿ ಅಲ್ಲದೆ ವಿದೇಶದಲ್ಲಿರುವ ಸಂಗೀತ ಪ್ರಿಯರೂ ನೋಡುತ್ತಿದ್ದಾರೆ ಎಂದು ಗಾನಭಾರತೀ ಸಂಗೀತ ಸಭಾ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕಡಿಮೆ ಜನರನ್ನು ಸೇರಿಸಿಯಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಪ್ರಯತ್ನದಲ್ಲಿ ತಪ್ಪಿಲ್ಲ. ಹಿಂದೆ ಮನೆಗಳಲ್ಲಿ ಕಡಿಮೆ ಜನಗಳ ಮಧ್ಯದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದ ರಂತೆಯೇ ಸ್ವಲ್ಪ ಜನರ ನಡುವೆ ಸಂಗೀತ, ನೃತ್ಯ, ನಾಟಕ ಪ್ರದರ್ಶನಗಳನ್ನು ಏರ್ಪ ಡಿಸಬಹುದು ಎಂದು ಶ್ರೀ ಕೃಷ್ಣಗಾನ ಸಭಾ ಅಧ್ಯಕ್ಷ ಶ್ರೀಧರ್ ರಾಜೇ ಅರಸ್ ಅಭಿ ಪ್ರಾಯ ವ್ಯಕ್ತಪಡಿಸಿದರು. ಆನ್‍ಲೈನ್‍ನಲ್ಲಿ ಸಂಗೀತ, ನೃತ್ಯ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಸಂಭ್ರಮವಿಲ್ಲ. ಚಪ್ಪಾಳೆ ಸದ್ದು ಇದ್ದರೆ ತಾನೇ ಕಲಾವಿದರಿಗೂ ಪ್ರೋತ್ಸಾಹ ಸಿಕ್ಕಿದಂತಾ ಗುವುದು. ಖುಷಿಯಿಲ್ಲದಿದ್ದರೂ ಸುಮ್ಮನಿ ರುವುದು ಬೇಡವೆಂದು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ನೂಪುರ ಕಲಾವಿದರ ಸಾಂಸ್ಕೃತಿಕ ಟ್ರಸ್ ಸ್ಥಾಪಕ ಕೆ.ರಾಮಮೂರ್ತಿ ಹೇಳಿದರು.

Translate »