ವೀರಪ್ಪನ್ ವಿರುದ್ಧ ಮೊದಲ ಹತ್ಯೆ ಪ್ರಕರಣ ದಾಖಲಿಸಿದವರು ವೆಂಕಟಸ್ವಾಮಿ
ಮೈಸೂರು

ವೀರಪ್ಪನ್ ವಿರುದ್ಧ ಮೊದಲ ಹತ್ಯೆ ಪ್ರಕರಣ ದಾಖಲಿಸಿದವರು ವೆಂಕಟಸ್ವಾಮಿ

July 5, 2020

ಮೈಸೂರು, ಜು.4(ಪಿಎಂ)- ನರ ಹಂತಕ ವೀರಪ್ಪನ್ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಗೆ ನೆರವಾದ ದಕ್ಷ ಪೊಲೀಸ್ ಅಧಿಕಾರಿ ನಿವೃತ್ತ ಎಎಸ್‍ಐ ದಿವಂಗತ ವೆಂಕಟಸ್ವಾಮಿ. ವೀರಪ್ಪನ್ ವಿರುದ್ಧ ಮೊದಲ ಹತ್ಯೆ ಪ್ರಕ ರಣ ದಾಖಲಿಸಿದವರೂ ಅವರೇ ಎಂದು ವಿಶೇಷ ಪಡೆಯ ಮುಖ್ಯಸ್ಥರೂ ಆಗಿದ್ದ ಸಿಆರ್‍ಪಿಎಫ್ ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಕೆ.ಅರಕೇಶ್ ಸ್ಮರಿಸಿದರು.

ಮೈಸೂರಿನ ಜಯನಗರದ ನೇಗಿಲ ಯೋಗಿ ಮರಳೇಶ್ವರ ಸೇವಾ ಭವನದಲ್ಲಿ ದಿವಂಗತ ಪಿ.ವೆಂಕಟಸ್ವಾಮಿ ಆಪ್ತ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ವೆಂಕಟಸ್ವಾಮಿ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ನಾನು ಎಸ್‍ಟಿಎಫ್‍ಗೆ (ಸ್ಪೆಷಲ್ ಟಾಸ್ಕ್ ಫೋರ್ಸ್) ಹೋದಾಗ ವೆಂಕಟಸ್ವಾಮಿ ಅವರು ವೀರಪ್ಪನ್ ಜೊತೆ ಶಾಮೀಲಾ ಗಿದ್ದಾರೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಸ್ಥಳೀಯರಲ್ಲಿ ಮೂಡಿತ್ತು. ವೀರಪ್ಪನ್ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವಲ್ಲಿ ಅವರು ನಿಪುಣರಾಗಿದ್ದ ಕಾರಣದಿಂದಲೇ ಇಂತಹ ಅನುಮಾನ ಅವರ ಮೇಲೆ ಮೂಡಿತ್ತು. ಹೀಗಾಗಿ ನಾನೂ ಬಹಳ ಅನುಮಾನ ದಿಂದಲೇ ಅವರನ್ನು ಪರಿಚಯ ಮಾಡಿ ಕೊಂಡೆ. ಆಗ ನನಗೆ ಅವರೊಂದು ತೆರೆದ ಪುಸ್ತಕದಂತೆ ಎಂದು ಅರಿವಾಯಿತು. ಅವರದು ಮಗುವಿನಂತಹ ಮನಸ್ಸು. ಏನನ್ನೂ ಬಚ್ಚಿಡಲಾಗದ ವ್ಯಕ್ತಿತ್ವ ಎಂದು ಅಭಿಮಾನ ವ್ಯಕ್ತಪಡಿಸಿದರು.

ಒಂದು ಕಾಲಘಟ್ಟದಲ್ಲಿ ವೀರಪ್ಪನ್ ಬಗ್ಗೆ ಏನೂ ಮಾಹಿತಿ ಇಲ್ಲದ ಸಂದರ್ಭ. ವೀರಪ್ಪನ್ ಅಣ್ಣ ಕೂಸೆ ಮಾದಯ್ಯನ್ ಕೊಯಮತ್ತೂರು ಜೈಲಿನಲ್ಲಿ ಇರುವುದು ನಮಗೆ ಗೊತ್ತಿತ್ತು. ಆತನ ಮೂಲಕ ಕಾರ್ಯಾಚರಣೆ ಮುಂದುವರೆಯಸ ಬಹುದೇ? ಎಂದು ವೆಂಕಟಸ್ವಾಮಿ ಅವ ರನ್ನು ನಾನು ಕೇಳಿದಾಗ ಮಾರನೇ ದಿನವೇ ಕೊಯಮತ್ತೂರಿನ ಜೈಲಿಗೆ ಭೇಟಿ ನೀಡಿದ ಅವರು ವೀರಪ್ಪನ್ ತನ್ನ ತಂಡಕ್ಕೆ ಕರ್ನಾಟಕ ಮತ್ತು ತಮಿಳುನಾಡು ಮೂಲ ದವರಲ್ಲದವರನ್ನು ಸೇರಿಸಿಕೊಳ್ಳಲು ಮುಂದಾಗಿದ್ದಾನೆ ಎಂಬುದು ಸೇರಿದಂತೆ ಹಲವು ಮಾಹಿತಿಗಳನ್ನು 1998ರ ಕೊಯ ಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕೊಯಮತ್ತೂರು ಜೈಲಿನಲ್ಲಿದ್ದ ಅಬ್ದುಲ್ ಮದನಿ ಮೂಲಕ ಕಲೆ ಹಾಕಿದರು ಎಂದು ವಿವರಿಸಿದರು.

ನಾವು ಮದನಿ ಕಡೆಯವರನ್ನೇ ಹೋಲುವ ಹಲವರಿಗೆ ತರಬೇತಿ ನೀಡಿ ದ್ದೆವು. ಬಳಿಕ ಅವರನ್ನು ಕಾಡಿನೊಳಗೆ ಕಳುಹಿಸಿಕೊಟ್ಟೆವು. 15 ದಿನಗಳಾದರೂ ಅವರ ಸುಳಿವೇ ಇರಲಿಲ್ಲ. ಇದು ನಮಗೆ ಆತಂಕ ತಂದಿತು. ಏಕೆಂದರೆ ವೀರಪ್ಪನ್ ಅಂತಹ ಕ್ರೂರಿಯಾಗಿದ್ದ. ಒಮ್ಮೆ ಸತ್ಯ ಮಂಗಲದ ಬಳಿಯ ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ನಕ್ಕೀರನ್ ಗೋಪಾಲ್ ಮಾದರಿಯಲ್ಲಿ ವೀರಪ್ಪನ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇನೆ. ಆ ಮೂಲಕ ಸಿನಿಮಾ ಮಾಡುತ್ತೇನೆ ಎಂಬ ಉದ್ದೇಶದಿಂದ ವೀರ ಪ್ಪನ್ ತಂಡ ಸಂಪರ್ಕಿಸಿದ್ದ. ಆದರೆ ಈ ವಿದ್ಯಾರ್ಥಿ ಬಗ್ಗೆ ಅನುಮಾನಗೊಂಡಿದ್ದ ವೀರಪ್ಪನ್ ಮತ್ತು ಆತನ ಸಹಚರರು ವಿದ್ಯಾರ್ಥಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದರು. ಅಲ್ಲದೆ, ಹತ್ಯೆಯ ಚಿತ್ರೀ ಕರಣ ಸಹ ವೀರಪ್ಪನ್ ಮಾಡಿಸಿದ್ದ. ಈ ತರದ ಕೌರ್ಯಕ್ಕೆ ಕಳುಹಿಸಿದ್ದವರೂ ಒಳಗಾಗಿ ದ್ದಾರೆಯೇ? ಎಂಬ ಅನುಮಾನ ಮೂಡಿತ್ತು.

ಹೀಗಿರುವಾಗಲೇ ನಾವು ತರಬೇತಿ ನೀಡಿ ದವರು ನಮ್ಮನ್ನು ಸಂಪರ್ಕಿಸಿ ಕಾರ್ಯಾ ಚರಣೆ ಯಶಸ್ವಿಯಾಗಿದೆ. ನಮ್ಮ ವಿವರ ಪಡೆದಿರುವ ವೀರಪ್ಪನ್ ಅಗತ್ಯವಿರುವಾಗ ಕರೆಸಿಕೊಳ್ಳುವುದಾಗಿ ತಿಳಿಸಿ ಕಳುಹಿಸಿ ದ್ದಾನೆ ಎಂಬ ಮಾಹಿತಿ ನೀಡಿದರು. ಆದರೆ ಈ ಕಾರ್ಯಾಚರಣೆ ಯಶಸ್ವಿ ಯಾಗಲಿಲ್ಲ ಎಂದು ಹೇಳಿದರು.

ವೆಂಕಟಸ್ವಾಮಿ ಮತ್ತು ನಾನು ಎಸ್‍ಟಿ ಎಫ್‍ನಲ್ಲಿದ್ದಾಗ ನಡೆದ ಹಲವು ಘಟನೆ ಗಳಿವೆ. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದರೂ ಬಂಧು-ಬಳಗ ಹಾಗೂ ಸ್ನೇಹಿತರನ್ನು ವಿಚಾರಿಸುವ ಗುಣ ಹೊಂದಿದ್ದರು. ಅವರ ಕೋರಿಕೆ ಮೇರೆಗೆ ದೇವನೂರ ಮಹಾದೇವ ಅವರ ಪುಸ್ತಕ ವೊಂದನ್ನು ಕಳುಹಿಸಿಕೊಟ್ಟಿದ್ದೆ. ಬಳಿಕ `ಗಾಂಧಿ ಕಥನ’ ಎಂಬ ಪುಸ್ತಕ ಓದಬೇಕು ಎಂದಿದ್ದರು. ಅದನ್ನೂ ಕಳುಹಿಸಿದ್ದೆ. ವೆಂಕಟಸ್ವಾಮಿ ಅವರೊಬ್ಬ ಮಾನವೀಯ ಗುಣ ಹೊಂದಿದವರು. ತಮ್ಮ ವೃತ್ತಿ ಬಗ್ಗೆ ಬದ್ಧತೆ ಹೊಂದಿದ್ದರು. ಅವರ ವ್ಯಕ್ತಿತ್ವದ ಕೆಲವು ಅಂಶಗಳಾದರೂ ನಮ್ಮಲ್ಲಿ ಬರಲಿ ಎಂದು ಆಶಿಸಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ ಮಾತನಾಡಿ, ನಾನು ವೆಂಕಟಸ್ವಾಮಿ ಯವರ ಸಹೋದ್ಯೋಗಿ ಅಲ್ಲ. ಆದರೆ ಅವರು ಅತೀವ ಆಸಕ್ತಿ ಹೊಂದಿದ್ದ ಕುಸ್ತಿ ಯಿಂದಾಗಿ ನನಗೆ ಅವರೊಂದಿಗೆ ಸ್ನೇಹ ವಿತ್ತು. ನಾನು ಮತ್ತು ಅವರು ಹಲವು ಕುಸ್ತಿ ಆಯೋಜನೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಕಿರಿಯರು ಅವರನ್ನು ನೋಡಿ ಕಲಿಯುವಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದ ವ್ಯಕ್ತಿತ್ವ ಅವರದು. ಕುಸ್ತಿ ಪಟು ಗಳಿಗೆ ಅವರು ಉತ್ತೇಜನ ನೀಡುತ್ತಿದ್ದರು. ಅವರ ಅಗಲಿಕೆ ಕೇವಲ ಪೊಲೀಸ್ ಇಲಾ ಖೆಗೆ ಮಾತ್ರವಲ್ಲ, ಕುಸ್ತಿ ಕ್ಷೇತ್ರಕ್ಕೂ ನಷ್ಟ ಉಂಟು ಮಾಡಿದೆ ಎಂದು ಭಾವುಕರಾದರು.

ಹಿರಿಯ ನ್ಯಾಯವಾದಿ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಿಚಾರಣಾ ಸಮಿತಿ ಸದಸ್ಯ ಸಿ.ಅಪ್ಪಾಜಿಗೌಡ ಮಾತ ನಾಡಿ, ವೆಂಕಟಸ್ವಾಮಿಯವರೊಂದಿಗೆ ಬಹಳ ವರ್ಷದ ಸ್ನೇಹ ನನ್ನದು. ನಮ್ಮಿ ಬ್ಬರ ನಡುವೆ ಅಣ್ಣ-ತಮ್ಮಂದಿರಂತಹ ಭಾವನೆ ಇತ್ತು. ಅವರಂತಹ ವ್ಯಕ್ತಿಯನ್ನು ಎಂದಿಗೂ ಮರೆಯಲಾಗದು. ತಾಯಿ ಚಾಮುಂಡೇಶ್ವರಿ ಅವರ ಅಗಲಿಕೆ ನೋವು ಮರೆಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ನುಡಿದರು.

ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗ ಸ್ವಾಮಿ, ಪಿ.ವೆಂಕಟಸ್ವಾಮಿ ಅವರ ಸಂಬಂಧಿ ರಾಮು, ಮೈಸೂರು ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವೇಗೌಡ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ದವರು ಹಾಗೂ ಪಿ.ವೆಂಕಟಸ್ವಾಮಿ ಆಪ್ತ ಬಳಗದವರು ಹಾಜರಿದ್ದರು.

Translate »