ಮೈಸೂರಲ್ಲಿ `ಜಾವಾ ನನ್ನ  ಜೀವ’ ಎಂದ ರೈಡರ್‍ಗಳು
ಮೈಸೂರು

ಮೈಸೂರಲ್ಲಿ `ಜಾವಾ ನನ್ನ ಜೀವ’ ಎಂದ ರೈಡರ್‍ಗಳು

July 12, 2021

ಮೈಸೂರು, ಜು.11(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜಾವಾ ಬೈಕ್‍ಗಳು ಸದ್ದು ಮಾಡಿದವು. ರಿಂಗ್ ರಸ್ತೆಯಲ್ಲಿ ಶಬ್ದ ಮಾಡುತ್ತಾ 20ಕ್ಕೂ ಹೆಚ್ಚು ಜಾವಾ ಸುಂದರಿಯರು ಏಕಕಾಲಕ್ಕೆ ರಸ್ತೆಗಿಳಿದು ನೋಡುಗರ ಕಣ್ಮನ ಸೆಳೆದವು.

ಪ್ರತೀ ವರ್ಷ ಜುಲೈ ತಿಂಗಳ ಎರಡನೇ ಭಾನು ವಾರ ಅಂತರರಾಷ್ಟ್ರೀಯ ಜಾವಾ ಬೈಕ್ ದಿನವ ನ್ನಾಗಿ ಆಚರಿಸಲಾಗುತ್ತದೆ. ಕೋವಿಡ್-19 ಹಿನ್ನೆಲೆ ಯಲ್ಲಿ ಕಳೆದ ಎರಡು ವರ್ಷದಿಂದ ಜಾವಾ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಇಂದು ಜಾವಾ ಕಂಪನಿಯ 175, 250, 350ಸಿಸಿ ಯ ಯಜ್ಡಿ ಹಾಗೂ ಜಾವಾ ಬೈಕುಗಳು ರಸ್ತೆಗಿಳಿದು ಗಮನ ಸೆಳೆದವು. ಮೈಸೂರು ಜಾವಾ ಫ್ರೆಂಡ್ಸ್ ಕ್ಲಬ್‍ನ 25ಕ್ಕೂ ಹೆಚ್ಚು ಮಂದಿ ರೈಡರ್‍ಗಳು ಜಾವಾ ಹಾಗೂ ಯಜ್ಡಿ ಬೈಕ್ ಏರಿ ಸವಾರಿ ಮಾಡುವ ಮೂಲಕ ಇಂದಿಗೂ `ಜಾವಾ ನನ್ನ ಜೀವ’ ಎಂಬ ಸಂದೇಶ ಸಾರಿದರು. ಮೈಸೂರಿನ ನಂಜನಗೂಡು ರಸ್ತೆಯ ಬಂಡಿಪಾಳ್ಯದ ಮುಂಭಾಗದಿಂದ ಆರಂಭ ವಾದ ಜಾವಾ ಬೈಕ್ ರ್ಯಾಲಿ ರಿಂಗ್ ರೋಡ್‍ನಲ್ಲಿ ಸಂಚರಿಸಿತು. ಹುಣಸೂರು ರಸ್ತೆಯ ಜಂಕ್ಷನ್ ಬಳಿ ಕೆಲ ಕಾಲ ಜಾವಾ ರ್ಯಾಲಿಗೆ ವಿರಾಮ ನೀಡಿದ ರೈಡರ್ ಗಳು ಉಪಾಹಾರ ಸೇವಿಸಿ ಜಾಥಾ ಮುಂದುವರೆಸಿ ದರು. ಯಾದವಗಿರಿಯಲ್ಲಿರುವ ಜಾವಾ ಕಾರ್ಖಾನೆ ಇದ್ದ ಸ್ಥಳಕ್ಕೆ ರ್ಯಾಲಿಯಲ್ಲಿ ತಲುಪಿ, ಈ ವರ್ಷದ ಅಂತರರಾಷ್ಟ್ರೀಯ ಜಾವಾ ದಿನವನ್ನು ಅಂತ್ಯಗೊಳಿಸಿದರು.

ಜಾವಾ ರ್ಯಾಲಿಯ ನೇತೃತ್ವವನ್ನು ಮೈಸೂರು ಜಾವಾ ಫ್ರೆಂಡ್ಸ್ ಕ್ಲಬ್‍ನ ಜಾಕೀರ್ ಮತ್ತು ರಿಖಿ ಮುನ್ನಡೆಸಿದರು. ಈ ಕ್ಲಬ್‍ನಲ್ಲಿ 400ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ತಮ್ಮಲ್ಲಿರುವ ಜಾವಾ ಮತ್ತು ಯಜ್ಡಿ ಬೈಕ್‍ಗಳೊಂದಿಗೆ ಪ್ರತೀ ವರ್ಷ ಜಾಥಾ ದಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಹಿನ್ನೆಲೆ ಯಲ್ಲಿ ಈ ಬಾರಿ 25 ಮಂದಿಯಷ್ಟೇ ಭಾಗವಹಿಸಿ ದ್ದರು. ನಿಗದಿಯಂತೆ ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರಕ್ಕೆ ಜಾವಾ ಬೈಕ್ ರ್ಯಾಲಿ ತೆರಳಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರ್ಯಾಲಿಯನ್ನು ರಿಂಗ್ ರೋಡ್‍ಗಷ್ಟೇ ಸೀಮಿತಗೊಳಿಸಲಾಗಿತ್ತು.

Translate »