ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ  ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ನಿಗಾ ವಹಿಸಬೇಕು
ಮೈಸೂರು

ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ನಿಗಾ ವಹಿಸಬೇಕು

August 23, 2021

ಮೈಸೂರು,ಆ.22(ಪಿಎಂ)- ಕೋವಿಡ್ ಮುನ್ನೆಚ್ಚರಿಕೆ ಯೊಂದಿಗೆ 9ರಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜು ಪುನರಾರಂಭದ ಸರ್ಕಾರದ ಕ್ರಮ ಸ್ವಾಗತಿಸಿ ರುವ ವಿಧಾನಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಹೆಚ್ಚು ನಿಗಾ ವಹಿಸಬೇಕೆಂದು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಯಿಂದ ರಾಜ್ಯದ ಶಾಲಾ-ಕಾಲೇಜು ಪ್ರಾರಂಭಿಸುತ್ತಿದ್ದು, ಇದು ಸ್ವಾಗತಾರ್ಹ. ಮುಖ್ಯಮಂತ್ರಿಗಳು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಎಲ್ಲಾ ಮುಂಜಾಗ್ರತ ಕ್ರಮಗಳೊಂದಿಗೆ ಶಾಲೆ ಪ್ರಾರಂಭ ಮಾಡುವುದಾಗಿ ಹೇಳಿ ದ್ದಾರೆ. ಮಕ್ಕಳು ಶಾಲೆಯಿಂದ ಹೊರಗಿದ್ದು, ಶಿಕ್ಷಣದಿಂದ ವಿಮುಖರಾಗುತ್ತಿದ್ದರು. ನಾಳೆಯಿಂದ ಮಕ್ಕಳು ಭೌತಿಕವಾಗಿ ಶಾಲೆಗೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮುಂಜಾಗ್ರತ ಕ್ರಮಗಳು ಕೇವಲ ನಗರ ಪ್ರದೇಶದ ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತಗೊಳ್ಳದೇ, ಗ್ರಾಮೀಣ ಪ್ರದೇಶದಲ್ಲೂ ಕಟ್ಟುನಿಟ್ಟಾಗಿ ಕೈಗೊಳ್ಳುವ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಶೌಚಾಲಯ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶುದ್ಧ ಕುಡಿ ಯುವ ನೀರಿನ ವ್ಯವಸ್ಥೆ ಮಾಡಬೇಕು. ಈಗ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರವಲ್ಲದೇ, ಆರೋಗ್ಯ ಇಲಾಖೆಯೂ ಸನ್ನದ್ಧವಾಗಿರಬೇಕು. ಗ್ರಾಪಂ, ಪುರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ ಎಂದರು.

ವೀಕೆಂಡ್ ಕಫ್ರ್ಯೂ ಕೈಬಿಡುವುದು ಸೂಕ್ತ: ಕೇರಳದಲ್ಲಿ ಕೋವಿಡ್ ಪಾಸಿಟಿ ವಿಟಿ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯದ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇರಳದಿಂದ ರಾಜ್ಯ ಪ್ರವೇಶಿಸಲು ಬಾವಲಿಯಲ್ಲಿ 2ರಿಂದ 3 ಸಾವಿರ ರೂ. ಹಣ ಪಡೆದು ಒಳ ಪ್ರವೇಶಿಸಲು ಅವಕಾಶ ನೀಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಅಗತ್ಯವಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿ ಮುಖವಾಗಿದೆ. ಆದರೆ ಇಲ್ಲಿಯೂ ವೀಕೆಂಡ್ ಕಫ್ರ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ಎಲ್ಲಾ ರೀತಿಯ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಗಡಿಗಳಲ್ಲಿ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಮೈಸೂರು ಜಿಲ್ಲೆಯಲ್ಲಿ ವೀಕೆಂಡ್ ಕಫ್ರ್ಯೂ ಕೈಬಿಡುವುದು ಸೂಕ್ತ ಎಂದು ಹೇಳಿದರು.

ಸೆ.13ರಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳ ಲಿದ್ದು, ಅಷ್ಟರೊಳಗೆ ಹುಣಸೂರು ಜಿಲ್ಲೆಯಾಗಿ ಮಾಡ ಬೇಕೆಂಬ ಬೇಡಿಕೆ ಸಂಬಂಧ ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಮತ್ತು ನಾನು ತಾಲೂಕಿನ ಸಂಘ ಸಂಸ್ಥೆ, ಜನಪ್ರತಿನಿಧಿಗಳ ಸಭೆ ನಡೆಸಲಿದ್ದೇವೆ. ಇದಾದ ಬಳಿಕ ಇದೇ ರೀತಿ ಉಳಿದ ಐದು ತಾಲೂಕುಗಳಲ್ಲೂ ಸಭೆ ಹಮ್ಮಿಕೊಳ್ಳ ಲಾಗುವುದು. ಆ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳಲಾಗುವುದು. ಕೇವಲ ಎರಡು ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಿಲ್ಲವೇ? ಅಂತೆಯೇ ದೇವರಾಜ ಅರಸು ಹೆಸರಿನಲ್ಲಿ ಹುಣಸೂರು ಜಿಲ್ಲೆಯಾಗಲಿ ಎಂದರು.
ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಆಗಿದ್ದು, ನೀವು ಸಂಸದರಾದ ಮೇಲಲ್ಲ, ಮಿಸ್ಟರ್ ಪ್ರತಾಪ್ ಸಿಂಹ… ಎಂದು ಹೇಳಿದ ವಿಶ್ವನಾಥ್, ಆ ಮೂಲಕ ಸ್ವಪಕ್ಷೀಯ ಸಂಸದರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ದಶಪಥ ಹೆದ್ದಾರಿ ಯೋಜನೆಯು ಪ್ರತಾಪ್ ಸಿಂಹರ ಕೆಲಸ ಅಥವಾ ಸಾಧನೆಯಲ್ಲ. ಇದು ಹಿಂದಿನ ಯುಪಿಎ ಸರ್ಕಾರದ ಸಾಧನೆ. ಜೊತೆಗೆ ಅಂದಿನ ಸಂಸದರ ಸಾಧನೆಯೂ ಹೌದು. ಅಲ್ಲದೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಡಾ.ಮಹ ದೇವಪ್ಪ ಅವರ ಕೊಡುಗೆಯೂ ಇದೆ. ನೀವು ಹೊಸದಾಗಿ ಏನಾದರೂ ಮಾಡಿ ಕ್ರೆಡಿಟ್ ತೆಗೆದುಕೊಳ್ಳಿ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು.
ಶಾಸಕ ಜಿ.ಟಿ.ದೇವೇಗೌಡರು ಉಂಡವಾಡಿ ಕುಡಿಯುವ ನೀರಿನ ಯೋಜನೆ ತಮ್ಮ ಕೊಡುಗೆ ಎಂದು ಹೇಳಿಕೊಳ್ಳು ತ್ತಿದ್ದಾರೆ. ನಿಮ್ಮದಲ್ಲ ರೀ ಈ ಯೋಜನೆ ಎಂದು ಜಿ.ಟಿ. ದೇವೇಗೌಡರನ್ನು ಕುಟುಕಿದರು. ಇದು ನರ್ಮ್ ಯೋಜನೆ ಯಾಗಿದ್ದು, ಈ ಯೋಜನೆ ಅನುಷ್ಠಾನಕ್ಕಾಗಿ ಮನವಿ ಮಾಡಿ ಮತ್ತಷ್ಟು ಹಣವನ್ನು ಅಂದು ಬಿಡುಗಡೆ ಮಾಡಿಸಿದ್ದೇ ನಾನು ಎಂದು ವಿಶ್ವನಾಥ್ ತಿಳಿಸಿದರು.

Translate »