ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕ ಮೀಸಲಿಡಬೇಕು: ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ
ಮೈಸೂರು

ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕ ಮೀಸಲಿಡಬೇಕು: ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ

August 13, 2018

ಮೈಸೂರು: ಕೇಂದ್ರ ಸರ್ಕಾರವು ಕ್ರೀಡಾ ಚಟುವಟಿಕೆಗಳಿಗೆ 200 ಅಂಕ ನಿಗದಿಪಡಿಸಿದರೆ ಪೋಷಕರೇ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ಮೈಸೂರು ಲಿಟರರಿ ಫೆಸ್ಟ್ 2018 ಕಾರ್ಯಕ್ರಮದಲ್ಲಿ `ನಾವು ಕ್ರೀಡಾ ರಾಷ್ಟ್ರವೇ’ ವಿಷಯ ಕುರಿತು ಮಾತನಾಡಿದ ಅವರು, ಭಾರತ ಸರ್ಕಾರವು ಪಠ್ಯಕ್ರಮದಲ್ಲಿ 200 ಅಂಕಗಳನ್ನು ಕ್ರೀಡೆಗೆಂದು ಮೀಸಲಿರಿಸಬೇಕು. ಇಲ್ಲವಾದಲ್ಲಿ ಯಾರೊಬ್ಬರೂ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕಗಳನ್ನು ನಿಗದಿಪಡಿಸಿದರೆ ಪೋಷಕರೇ ಮಕ್ಕಳನ್ನು ಕ್ರೀಡೆಗೆ ಸೇರಿಸುತ್ತಾರೆ. 200 ಅಂಕಕ್ಕೋಸ್ಕರ ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಟ್ಯೂಷನ್‍ಗೆ ಕಳುಹಿಸುವಂತೆ ಕ್ರೀಡಾ ಕೋಚಿಂಗ್‍ಗೂ ಕಳುಹಿಸುತ್ತಾರೆ. ಆಗ ಮಾತ್ರ ಕ್ರೀಡಾ ಕ್ಷೇತ್ರ ಬದಲಾವಣೆಯಾಗಲು ಸಾಧ್ಯ ಎಂದರು. ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಕ್ರೀಡೆಗೆ 2196 ಕೋಟಿ ನೀಡಿದೆ. ಆದರೆ, ಭಾರತ ಯುವ ರಾಷ್ಟ್ರವಾಗಿದ್ದು, ದೇಶದ ಜನಸಂಖ್ಯೆಯ ಶೇ.60ರಷ್ಟು ಯುವಕರಿದ್ದಾರೆ. ಅಂದರೆ, 70 ಕೋಟಿಗಿಂತ ಹೆಚ್ಚು ಯುವಕರಿದ್ದಾರೆ. 2196 ಕೋಟಿಯನ್ನು 70 ಕೋಟಿ ಯುವಕರಿಗೆ ಹಂಚಿದರೆ ಪ್ರತಿಯೊಬ್ಬರಿಗೆ 30 ರೂ. ಬರಲಿದೆ. ಈ ಹಣದಲ್ಲಿ ಯಾವ ರೀತಿ ಕ್ರೀಡೆಯನ್ನು ಅಭಿವೃದ್ಧಿ ಮಾಡಬಹುದು ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಆದರೆ, ನಮ್ಮ ವಯಸ್ಸು ಹುಟ್ಟಿದ ಇಸವಿಯ ಪ್ರಕಾರ 1992ರಲ್ಲಿ ಹುಟ್ಟಿರಬಹುದು.

ಈಗ 25 ವರ್ಷವಾಗಿದ್ದರೂ ವೈದ್ಯರು ಬಯೋಲಾಜಿಕಲ್ ವಯಸ್ಸು ಚೆಕ್ ಮಾಡಿದಾಗ 15 ವರ್ಷ ಹೆಚ್ಚಾದವರಂತೆ ಕಾಣುತ್ತಿದ್ದಾರೆ. ಇದಕ್ಕೆ ಕ್ರೀಡೆಗಳಲ್ಲಿ ಭಾಗವಹಿಸದಿರುವುದೇ ಮುಖ್ಯ ಕಾರಣ. ಜತೆಗೆ ದೈಹಿಕವಾಗಿ ಸದೃಢರಾಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸದೃಢರಾಗಿ ಆರೋಗ್ಯವಂತರಾಗಬೇಕು ಎಂದು ಹೇಳಿದರು. ಕ್ರೀಡಾ ಬರಹಗಾರ ವೇದಮ್ ಜೈಶಂಕರ್, ಅಕಾಡೆಮಿಷಿಯನ್ ಡಾ.ಹೆಚ್.ಎಸ್.ಶಿವಣ್ಣ ಉಪಸ್ಥಿತರಿದ್ದರು.

Translate »