ಕೊರೊನಾ ಸೋಂಕಿನ ವಿರುದ್ಧ ಸೆಣಸಾಟದಲ್ಲಿ ಪೊಲೀಸರಿಗೆ ಹೋಂಗಾರ್ಡ್‍ಗಳ ಸಾಥ್
ಮೈಸೂರು

ಕೊರೊನಾ ಸೋಂಕಿನ ವಿರುದ್ಧ ಸೆಣಸಾಟದಲ್ಲಿ ಪೊಲೀಸರಿಗೆ ಹೋಂಗಾರ್ಡ್‍ಗಳ ಸಾಥ್

April 19, 2020

ಮೈಸೂರು,ಏ.18(ಎಸ್‍ಬಿಡಿ)- ಪೊಲೀಸ್ ಇಲಾಖೆಯ ಹೆಗಲಿಗೆ ಹೆಗಲು ಕೊಟ್ಟು ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕ ದಳವನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.

ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿರುವ ವಾರಿಯರ್ಸ್ ಪಡೆಯಲ್ಲಿ, ಗೃಹ ರಕ್ಷಕ ಸಿಬ್ಬಂದಿಯೂ ಪ್ರಮುಖರಾಗಿದ್ದಾರೆ. ಲಾಕ್‍ಡೌನ್ ಬಂದೋ ಬಸ್ತ್ ನಿರ್ವಹಣೆ, ಕಂಟೆನ್ಮೆಂಟ್ ಜೋನ್, ಹೋಂ ಕ್ವಾರಂಟೈನ್ ಪ್ರದೇಶ, ಕೋವಿಡ್ ಆಸ್ಪತ್ರೆ ಮೇಲೆ ನಿಗಾ ವಹಿಸಿರುವ ಪೊಲೀಸರಿಗೆ, ಗೃಹ ರಕ್ಷಕರು ಸಾಥ್ ನೀಡಿದ್ದಾರೆ. ಪೊಲೀಸರಂತೆಯೇ ಅಪಾಯಕಾರಿ ಸ್ಥಿತಿ ಯಲ್ಲೂ ನಿಷ್ಠೆ ಹಾಗೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರ ಉಡಾಫೆ, ದರ್ಪದ ವರ್ತನೆಯನ್ನು ಸಹಿಸಿಕೊಂಡು ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವ ಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ನಿರ್ವ ಹಣೆ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಶ್ರಮಿಸುತ್ತಿದ್ದಾರೆ.

ಪೊಲೀಸ್ ಇಲಾಖೆಯಡಿ ಮೈಸೂರು ನಗರದಲ್ಲಿ ಸುಮಾರು 250 ಹಾಗೂ ಜಿಲ್ಲೆಯ ವಿವಿಧೆಡೆ 70ಕ್ಕೂ ಹೆಚ್ಚು ಗೃಹ ರಕ್ಷಕರು ಕರ್ತವ್ಯದಲ್ಲಿದ್ದಾರೆ. ಇವರೆಲ್ಲ ಕೊರೊನಾ ಹೋರಾಟದಲ್ಲೂ ಸಕ್ರಿಯರಾಗಿದ್ದಾರೆ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಪೊಲೀಸ್ ಇಲಾಖೆಗೆ ಇವರಿಂದ ಒಂದಷ್ಟು ರಿಲೀಫ್ ಸಿಕ್ಕಿದೆ. ಪೊಲೀಸರು ಹಾಗೂ ಗೃಹ ರಕ್ಷಕರೊಂದಿಗೆ ಕೆಲ ಸಾರ್ವಜನಿಕರು ನಡೆದುಕೊಳ್ಳುವ ರೀತಿ ಭಿನ್ನವಾಗಿರುತ್ತದೆ. ಪೊಲೀಸರಿಲ್ಲದೆ, ಗೃಹ ರಕ್ಷಕರು ಮಾತ್ರವಿದ್ದರೆ ಅವರ ಮಾತಿಗೆ ಮನ್ನಣೆ ನೀಡದೆ, ಉಡಾಫೆಯಿಂದ ವರ್ತಿಸುತ್ತಾರೆ. ಆದರೂ ಧೃತಿಗೆಡದೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕರಿಗೆ ಅಭಿನಂದಿಸಲೇಬೇಕು.

ರಸ್ತೆಯಲ್ಲೇ ಊಟ: ಲಾಕ್‍ಡೌನ್‍ನಿಂದ ಜನ ಸುರಕ್ಷಿತವಾಗಿ ಮನೆಯಲ್ಲಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿ ವ್ಯತ್ಯಯವಾಗಿದ್ದರೂ ಇದ್ದಿದ್ದ ರಲ್ಲಿ ನೆಮ್ಮದಿಯಾಗಿದ್ದಾರೆ. ಸರ್ಕಾರ, ದಾನಿ ಗಳಿಂದ ರೇಷನ್ ಇನ್ನಿತರ ಅಗತ್ಯ ವಸ್ತು ಗಳ ಸಿಗುತ್ತಿವೆ. ಸ್ವಲ್ಪ ಹಣದಲ್ಲೇ ಹೇಗೋ ದಿನದೂಡಬಹುದು. ಮನೆಯವರೆಲ್ಲಾ ಒಟ್ಟಿಗೆ ಟಿವಿ ನೋಡುತ್ತಾ, ಆಟವಾಡುತ್ತಾ ಖುಷಿಯಿಂದ ಕಾಲ ಕಳೆಯಬಹುದು. ಆದರೆ ಜನರ ರಕ್ಷಣೆಗಾಗಿ ಬೀದಿಯಲ್ಲಿರುವ ಪೊಲೀಸ್ ಹಾಗೂ ಗೃಹ ರಕ್ಷಕರಿಗೆ ಇದು ಅಸಾಧ್ಯ. ನಿಯೋಜಿತ ಸ್ಥಳದಲ್ಲೇ ಇರಬೇಕು. ತಮ್ಮ ಪಾಳಿ ಮುಗಿಯುವವರೆಗೂ ಅಲ್ಲಿಂದ ಕದಲಲು ಅವಕಾಶವಿರುವುದಿಲ್ಲ. ಮನೆ ಯಿಂದ ಊಟ ತರಲು ಆಗುವುದಿಲ್ಲ. ಪೊಲೀಸರೋ ಅಥವಾ ಯಾರೋ ದಾನಿ ಗಳೋ ನೀಡಿದ ಆಹಾರವನ್ನು ರಸ್ತೆಯಲ್ಲೇ ಕುಳಿತು, ಸೇವಿಸಬೇಕು. ಕುಡಿಯುವ ನೀರಿಗೂ ತೊಂದರೆ. ಶೌಚಾಲಯಕ್ಕೆ ಹೋಗ ಬೇಕೆನಿಸಿದರು ಸುಲಭವಲ್ಲ. ಮಹಿಳಾ ಸಿಬ್ಬಂದಿ ಸಂಕಷ್ಟವಂತೂ ಅವರಿಗೇ ಗೊತ್ತು. ಪುಟ್ಟ ಮಕ್ಕಳು, ವಯಸ್ಸಾದ ಪೋಷಕರಿರುವ ಸಿಬ್ಬಂದಿ, ಆತಂಕದಲ್ಲೇ ಕೆಲಸ ಮಾಡಬೇಕು. 8-10 ಗಂಟೆ ನಂತರ ಮನೆಗೆ ಹೋದಾ ಗಲೂ ಏನೋ ಭೀತಿ. ಕುಟುಂಬದೊಂ ದಿಗೆ ನೆಮ್ಮದಿಯಿಂದ ಇರಲು ಆಗುವುದೇ ಇಲ್ಲ. ಒಟ್ಟಾರೆ ಇಂತಹ ಸಂದಿಗ್ಧ ಪರಿ ಸ್ಥಿತಿಯಲ್ಲಿ ಪೊಲೀಸರಷ್ಟೇ ಸಮನಾದ ಕೆಲಸ ಮಾಡುತ್ತಿರುವ ಗೃಹ ರಕ್ಷಕರಿಗೆ ನಿಗದಿತ ಸಮಯಕ್ಕೆ ವೇತನದ ಜೊತೆಗೆ ಮತ್ತಷ್ಟು ಅಗತ್ಯ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಇವರ ಪರಿಶ್ರಮ ಹಾಗೂ ಸಂಕಷ್ಟ ಅರಿತಿರುವ ನಾಗರಿಕರು ಆಗ್ರಹಿಸಿದ್ದಾರೆ.

Translate »