ಜನವರಿ 1ರಿಂದ ಶಾಲೆ ಕಾಲೇಜು ಆರಂಭದ ಹಿನ್ನೆಲೆಯಲ್ಲಿ  ಒಂದೇ ದಿನ 653 ಮಂದಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆ
ಮೈಸೂರು

ಜನವರಿ 1ರಿಂದ ಶಾಲೆ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಒಂದೇ ದಿನ 653 ಮಂದಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆ

December 30, 2020

ಮೈಸೂರು,ಡಿ.29(ಆರ್‍ಕೆ)-2021ರ ಜನವರಿ 1ರಿಂದ 6ರಿಂದ 9ನೇ ತರಗತಿಗೆ ವಿದ್ಯಾಗಮ ಹಾಗೂ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ತರಗತಿ ಆರಂಭವಾಗುವ ಹಿನ್ನೆಲೆಯಲ್ಲಿ ಮೈಸೂರಿನ ಜೆಕೆ ಮೈದಾನದಲ್ಲಿ ಏರ್ಪಡಿಸಿದ್ದ ಉಚಿತ ಕೊರೊನಾ ಟೆಸ್ಟ್ ಶಿಬಿರದಲ್ಲಿ 653 ಮಂದಿ ಆರ್‍ಟಿ-ಪಿಸಿಆರ್ ಪರೀಕ್ಷೆಗೊಳಗಾದರು. ಜಿಲ್ಲಾ ಲಯನ್ಸ್ ಸರ್ವಿಸ್ ಫೌಂಡೇಷನ್ 317ಎ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಚಿತವಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಿದರು. ಮೊದಲ ದಿನವಾದ ಇಂದು 653 ಮಂದಿಗೆ ಸ್ವ್ಯಾಬ್ ತೆಗೆದು ಪರೀಕ್ಷೆ ಮಾಡಲಾಗಿದ್ದು, ಉಳಿದ 300 ಮಂದಿಗೆ ಟೋಕನ್ ಕೊಟ್ಟು ನಾಳೆ (ಬುಧವಾರ) ಬರುವಂತೆ ಹೇಳಿ ಕಳಿಸಲಾಯಿತು ಎಂದು ಹಿರಿಯ ಲ್ಯಾಬ್ ಟೆಕ್ನೀಷಿಯನ್ ಹೇಮರಾಜ್ ತಿಳಿಸಿದರು.

ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳು, ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, 4 ಕೌಂಟರ್‍ಗಳನ್ನು ತೆರೆದರೂ 300 ಮಂದಿಗೆ ಪರೀಕ್ಷೆ ಮಾಡಲಾಗದೇ ವಾಪಸ್ ಕಳುಹಿಸಲಾಯಿತು ಎಂದ ಅವರು, ಬುಧವಾರ ಬರುವವರ ಸಂಖ್ಯೆ ನೋಡಿಕೊಂಡು ಕೌಂಟರ್‍ಗಳನ್ನು ಮಾಡಿಕೊಳ್ಳುತ್ತೇವೆ ಎಂದರು. ಆರೋಗ್ಯ ಇಲಾಖೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಿದಂಬರ್, ತಾಲೂಕು ವೈದ್ಯಾಧಿಕಾರಿ ಡಾ.ಶಿರಾಜ್ ಅಹಮದ್ ಸಹ ಸ್ಥಳಕ್ಕೆ ಭೇಟಿ ನೀಡಿ ಆರ್‍ಟಿಪಿಸಿಆರ್ ಟೆಸ್ಟ್ ಅನ್ನು ಪರಿಶೀಲಿಸಿದರು.

 

 

Translate »