ಅವಾಚ್ಯ ಪದ ಬಳಕೆ: ಬಹಿರಂಗ ಕ್ಷಮೆಗೆ ಸಿದ್ದು ಬಳಗ ಆಗ್ರಹ
ಮೈಸೂರು

ಅವಾಚ್ಯ ಪದ ಬಳಕೆ: ಬಹಿರಂಗ ಕ್ಷಮೆಗೆ ಸಿದ್ದು ಬಳಗ ಆಗ್ರಹ

October 29, 2021

ಮೈಸೂರು, ಅ.28(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಪದ ಬಳಸಿ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಮುಖಂಡ ಸಿ.ಟಿ.ರವಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್, ಸಿ.ಟಿ.ರವಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಳಸಿ ರುವ ಪದಗಳು ಅವರ ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ. ಇಂತಹ ಬುದ್ಧಿಗೇಡಿ ಹೇಳಿಕೆಯನ್ನು ಅವರು ಕೂಡಲೇ ವಾಪಸ್ ಪಡೆಯದಿದ್ದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಂದು ಪಕ್ಷದ ರಾಜಕೀಯ ಪ್ರತಿನಿಧಿಯಾಗಿ ಇಂತಹ ಕೀಳು ಪದ ಬಳಕೆ ಮಾಡಿದ ಅವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಳಗದ ನಗರಾಧ್ಯಕ್ಷ ಹೆಬ್ಬಾಳ್ ವಿಜಯ್, ಜಿಲ್ಲಾಧ್ಯಕ್ಷ ಬೋಗಾದಿ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡ ಮಹೇಶ್‍ಗೌಡ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬ್ರಾಡ್‍ವೇ ಕಿರಣ್ ಉಪಸ್ಥಿತರಿದ್ದರು.

Translate »