ಅಷಾಢಮಾಸದಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುತ್ತಿದ್ದ ಪುನೀತ್
ಮೈಸೂರು

ಅಷಾಢಮಾಸದಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುತ್ತಿದ್ದ ಪುನೀತ್

October 30, 2021

ಮೈಸೂರು, ಅ. ೨೯(ಆರ್‌ಕೆ)- ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಪರಮ ಭಕ್ತರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಪ್ರತೀ ಆಷಾಢ ಮಾಸದಲ್ಲಿ ಮೆಟ್ಟಿಲು ಮೂಲಕ ಚಾಮುಂಡಿಬೆಟ್ಟ ಹತ್ತುತ್ತಿದ್ದರು. ತಂದೆ ವರನಟ ಡಾ. ರಾಜ್ ಕುಮಾರ್ ಮತ್ತು ತಾಯಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿದ್ದಾಗಿನಿಂದಲೂ ಆಗಿಂದಾಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಮಾಡಿ, ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಿದ್ದು. ಅದರಲ್ಲೂ ವಿಶೇಷವಾಗಿ ಆಷಾಢ ಮಾಸದಲ್ಲಿ ಮೈಸೂರಿನ ಆಪ್ತರೊಂದಿಗೆ ಮೆಟ್ಟಿಲು ಏರಿ ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನ ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರು, ಭಕ್ತಾದಿಗಳ ದರ್ಶನಕ್ಕೆ ಎಂದು ತೊಂದರೆ ಮಾಡಿರಲಿಲ್ಲ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಈ ಬಾರಿಯೂ ಸಹ ಸೆಪ್ಟೆಂಬರ್ ೨೨ರಂದು ಮುಂಜಾನೆ ಮೆಟ್ಟಿಲು ಹತ್ತಿಕೊಂಡೇ ಬೆಟ್ಟಕ್ಕೆ ತೆರಳಿ ಪುನೀತ್ ಅವರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದರು. ಅದು ಅವರ ಕಡೇ ಭೇಟಿಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತೀ ಬಾರಿ ಬಂದಾಗಲೂ, ವಿಶೇಷ ಪೂಜೆ ಮಾಡಿಸಿ, ದೇವಿಗೆ ಹರಕೆ ಸಲ್ಲಿಸುತ್ತಿದ್ದರು ಎಂದು ಅರ್ಚಕರು ತಿಳಿಸಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲಾ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಮ್ಮ ತಂದೆ-ತಾಯಿ ಸ್ಥಾಪಿಸಿರುವ ‘ಶಕ್ತಿಧಾಮ’ ನಿರಾಶ್ರಿತ ಮಹಿಳೆಯರ ಆಶ್ರಯ ಸೆಂಟರ್‌ಗೂ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದಿರು ವವರ ಯೋಗಕ್ಷೇಮ ವಿಚಾರಿಸಿ ಹಿಂತಿರುಗುತ್ತಿದ್ದರು.

ಅತ್ಯAತ ವಿನಮ್ರದ ವ್ಯಕ್ತಿಯಾಗಿದ್ದರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಸಂತಾಪ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ದೇವರು ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರತಾಪ್ ಸಿಂಹ ಹೇಳಿದರು. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಅತ್ಯಂತ ವಿನಮ್ರದ ವ್ಯಕ್ತಿಯಾಗಿದ್ದು, ಹಿರಿಯರಿಗೆ ಪ್ರೀತಿ ಗೌರವಗಳನ್ನು ನೀಡುತ್ತಿದ್ದರು.

ತಾನು ೨ನೇ ಬಾರಿಗೆ ಚುನಾವಣೆ ಗೆದ್ದಾಗ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಸಂಸದ ತೇಜಸ್ವಿ ಸೂರ್ಯ ಜೊತೆ ತೆರಳಿದ ಸಂದರ್ಭ ೪ ಗಂಟೆ ಅವರೊಂದಿಗೆ ಕಾಲ ಕಳೆದಿದ್ದೆ. ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಬಂದಾಗ ಕುಟುಂಬ ಸಹಿತವಾಗಿ ಫೋಟೋ ತೆಗೆಸಿಕೊಂಡಿದ್ದೆವು ಎಂದು ಸ್ಮರಿಸಿದರು. ಅತ್ಯಂತ ಚಿಕ್ಕ ವಯಸಲ್ಲಿ ಅವರ ಅಗಲಿಕೆ ನನಗೆ ಆಘಾತ ತಂದಿದೆ. ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದರು.

Translate »