ಭಾರತದ ಒಳ್ಳೆಯವರಲ್ಲಿ ರಾಜಕೀಯ ನಿರಾಸಕ್ತಿ
ಮೈಸೂರು

ಭಾರತದ ಒಳ್ಳೆಯವರಲ್ಲಿ ರಾಜಕೀಯ ನಿರಾಸಕ್ತಿ

October 29, 2021

ಮೈಸೂರು, ಅ.28- ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವು ಪರಸ್ಪರ ಟೀಕೆಗಳಿಗಷ್ಟೇ ಸೀಮಿತವಾಗಿದೆ. ಹೀಗಾಗಿ ಉತ್ತಮ ಜನರು ರಾಜಕೀಯ ಪ್ರವೇ ಶಿಸುತ್ತಿಲ್ಲ. ಜನರು ಹೆಚ್ಚಾಗಿ ರಾಜಕೀಯ ಹೊರತಾದ ಇನ್ನಿತರ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಂಗ್ಲಿಷ್ ಕಾದಂಬರಿಕಾರ ಜೆಫ್ರಿ ಆರ್ಚರ್ ಅಭಿಪ್ರಾಯಪಟ್ಟರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿಯಾಗಿ ಆಯೋಜಿಸಿರುವ ವರ್ಚುಯಲ್ ವೇದಿಕೆಯಲ್ಲಿ ‘ಮೈಸೂರು ಸಾಹಿತ್ಯ ಉತ್ಸವ-2021’ರಲ್ಲಿ ಬುಧವಾರ ಲೇಖಕ ಅರೂನ್ ರಾಮನ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಉತ್ತಮ ನಾಯಕರ ಅವಶ್ಯಕತೆ ಇದೆ. ಭಾರತದಂತಹ ದೇಶಕ್ಕೆ ಇಂದಿರಾಗಾಂಧಿ ಅವರಂತಹ ವರ್ಚಸ್ವಿ ನಾಯಕತ್ವದ ಅವಶ್ಯಕತೆ ಇದೆ ಎಂದರು.

ಬಾಲಿವುಡ್‍ನಲ್ಲಿ ಅತ್ಯಂತ ವೃತ್ತಿಪರವಾಗಿ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಆದರೆ ಕೃತಿಚೌರ್ಯದ ವಿಚಾರದಲ್ಲಿ ಮಾತ್ರ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ. ನಾನು ಬರೆದ ಕಥೆಗಳನ್ನು ಆಧರಿಸಿ ಬಾಲಿವುಡ್‍ನಲ್ಲಿ ಹಲವಾರು ಸಿನಿಮಾಗಳು ನಿರ್ಮಾಣವಾಗಿವೆ ಎಂದು ಭಾರತದ ಗೆಳೆಯರ ಮೂಲಕ ತಿಳಿದುಕೊಂಡಿದ್ದೇನೆ. ಅಂತಹ ಸಿನಿಮಾಗಳಿಗೆ ನಾನು ಬರೆದ ಕಥೆಯ ಮೂಲ ಹೆಸರು ಇಲ್ಲದೆ, ಬೇರೆ ಹೆಸರನ್ನು ಇಡಲಾಗಿದೆ. ಲೇಖಕನ ಅನುಮತಿ ಪಡೆಯದೆ ಆತನ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವುದು ಸರಿಯಲ್ಲ ಎಂದ ಅವರು, ಆದರೆ ಅದನ್ನು ತಡೆಯುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಂಡನ್‍ನಲ್ಲಿ ಬಿಡುಗಡೆಯಾಗುವ ನನ್ನ ಹೊಸ ಕೃತಿಯನ್ನು ಯಾರೋ ಖರೀದಿಸಿದ ಕೆಲವೇ ದಿನಗಳಲ್ಲಿ ಅದರ ನಕಲಿ ಪ್ರತಿಗಳು ಭಾರತದ ಪ್ರಮುಖ ನಗರಗಳ ಬೀದಿ ಗಳಲ್ಲಿ ಮಾರಾಟಕ್ಕೆ ಸಿಗುತ್ತವೆ ಎಂದ ಅವರು, ಅದೇನೆ ಇರಲಿ ಭಾರತದ ಜನರು ನನ್ನ ಕೃತಿಗಳನ್ನು ಇಷ್ಟಪಡುತ್ತಾರೆ ಎಂದರು.
ನನ್ನ ಕಥೆಗಳಲ್ಲಿ ಕಥಾವಸ್ತುವಿಗಿಂತ ಅದರಲ್ಲಿ ಬರುವ ಪಾತ್ರಗಳೇ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಹಾಗೂ ಆ ಪಾತ್ರಗಳೇ ಕಥಾವಸ್ತುವನ್ನು ನಿರೂಪಿಸುತ್ತವೆ. ಆಸಕ್ತಿದಾಯಕ ಜೀವನವನ್ನು ನಡೆ ಸಿದ ಹಲವರನ್ನು ನಾನು ಭೇಟಿ ಆಗಿದ್ದೇನೆ. ಬ್ರಿಟನ್ ರಾಣಿ ಮತ್ತು ಮಾಜಿ ಪ್ರಧಾನಿ ದಿವಂಗತ ಮಾರ್ಗರೇಟ್ ಥ್ಯಾಚರ್ ಅವರೊಂ ದಿಗೆ ಕೆಲಸ ಮಾಡಿದ ಅವಕಾಶ ಲಭಿಸಿದ್ದು ನನ್ನ ಅದೃಷ್ಟ ಎಂದರು.

Translate »