ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ  ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

September 2, 2021

ಮೈಸೂರು,ಸೆ.1(ಪಿಎಂ)-ಅಡುಗೆ ಅನಿಲದ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಚಿಕ್ಕ ಸಿಲಿಂಡರ್ ಪ್ರದರ್ಶನದೊಂದಿಗೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿ ಭಟನಾಕಾರರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಡಾ.ಪುಷ್ಪಾ ಅಮರ ನಾಥ್, ಬೆಲೆ ಏರಿಕೆ ಬಿಸಿ ಭಾರತದ ಬಡ ಜನರನ್ನು ಸುಡುತ್ತಿದೆ. ಮಧ್ಯಮ ವರ್ಗದ ಜನತೆಯೂ ಜೀವನ ಸಾಗಿಸಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಒಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜವ್ಯ ವ್ಯಾಪಕವಾಗುತ್ತಿದ್ದರೆ, ಮತ್ತೊಂ ದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಕೋವಿಡ್ ನಿಂದ ಸಂಕಷ್ಟದಲ್ಲಿರುವ ಬಡವರು, ಮಧ್ಯಮ ವರ್ಗದವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ.17ರಂದು ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಳ ಮಾಡಲಾಯಿತು. ಇಂದಿನಿಂದ ಮತ್ತೆ 25 ರೂ. ಹೆಚ್ಚಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರಿಗೆ ಈ ಸರ್ಕಾರದಿಂದ ರಕ್ಷಣೆ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಮನೆ ಒಳಗೂ ಮಹಿಳೆ ಯರಿಗೆ ನೆಮ್ಮದಿ ಇಲ್ಲದಂತೆ ಮಾಡಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ಮೈಸೂ ರಿಗೆ ಸ್ವಚ್ಛ ನಗರಿ ಎಂದು ಖ್ಯಾತಿ ಬಂದಿದ್ದರೆ, ಬಿಜೆಪಿ ಆಡಳಿತದಲ್ಲಿ ರೇಪ್ ಸಿಟಿ ಎಂಬ ಕುಖ್ಯಾತಿ ಬಂದಿದೆ. ಇದೇ ಇವರ ಅಭಿವೃದ್ಧಿ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಛೇ ದಿನ್ ಎಲ್ಲಿ ಹೋಯಿತು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವ ಇವರು ಜನಾರ್ಶೀವಾದ ಯಾತ್ರೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

2013ರಲ್ಲಿ ಅಡುಗೆ ಅನಿಲದ ಬೆಲೆ ಕೇವಲ 5 ರೂ. ಹೆಚ್ಚಳಗೊಂಡಾಗ, ಶೋಭಾ ಕರಂದ್ಲಾಜೆ, ಮಾಳವಿಕ ಸೇರಿದಂತೆ ಬಿಜೆಪಿಯವರು ರಸ್ತೆಗಿಳಿದು ಉರುಳಾಡಿ ಪ್ರತಿಭಟನೆ ಮಾಡಿದರು. 2014ರಿಂದ ಈವರೆಗೆ ಅಡುಗೆ ಅನಿಲದ ಬೆಲೆ 26 ಬಾರಿ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ 970 ರೂ. ಒಂದು ಸಿಲಿಂಡರ್ ಬೆಲೆ ಇದ್ದು, ಉಜ್ವಲ ಯೋಜನೆ ಎಂದು ಬೀಗುವ ಇವರಿಗೆ ನಾಚಿಕೆ ಯಾಗಬೇಕು. ಇವರು ಕೇವಲ ಪ್ರಚಾರಕ್ಕಾಗಿ ಯೋಜನೆ ತರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಇಲ್ಲಿನ ನಾಯಕರವರೆಗೂ ಯಾರಿಗೂ ಆಡಳಿತ ನಡೆಸುವ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮಹಿಳಾ ಕಾಂಗ್ರೆಸ್ ಮುಖಂಡರಾದ ಪುಷ್ಪವಲ್ಲಿ, ಎಂ.ಎ.ಕಮಲಾ ಅನಂತರಾಮು, ರಾಣಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »