ಮೈಸೂರು ನಗರ ಸಾರಿಗೆ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ಮೈಸೂರು

ಮೈಸೂರು ನಗರ ಸಾರಿಗೆ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

January 30, 2021

ಮೈಸೂರು,ಜ.29(ಎಸ್‍ಬಿಡಿ)-ಕೊರೊನಾ ತಗ್ಗುತ್ತಿರುವ ಮೈಸೂರು ನಗರ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಲಾಕ್‍ಡೌನ್‍ನಿಂದ ರಸ್ತೆ ಸಾರಿಗೆ ಸಂಸ್ಥೆಗೇ ಭಾರೀ ಹೊಡೆತ ಬಿದ್ದಿತ್ತು. ಕೊರೊನಾ ಆತಂಕದ ನಡುವೆಯೇ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಗೆ ಬರುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ದಿನೇ ದಿನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರು ಮತ್ತೆ ಸಾರಿಗೆ ಸಂಸ್ಥೆ ಬಸ್‍ಗಳತ್ತ ಹೆಜ್ಜೆ ಹಾಕಿದ್ದಾರೆ. ಪರಿಣಾಮ ಮೈಸೂರು ನಗರ ಸಾರಿಗೆಯಲ್ಲೂ ಗಣನೀಯ ಸುಧಾರಣೆಯಾಗಿದೆ. ಮೈಸೂರು ನಗರದಲ್ಲಿ ಭಾನುವಾರ ಇನ್ನಿತರ ರಜಾ ದಿನಗಳನ್ನು ಹೊರತುಪಡಿಸಿ ನಿತ್ಯ 380 ಬಸ್‍ಗಳ ಕಾರ್ಯಾಚರಣೆಯಾಗುತ್ತಿದೆ. ಕಳೆದ ಡಿಸೆಂಬರ್‍ನಲ್ಲಿ ನಿತ್ಯ 1.16 ಲಕ್ಷ ಮಂದಿ ಪ್ರಯಾಣಿಸಿದ್ದು, 18.09 ಲಕ್ಷ ರೂ. ಸಂಗ್ರಹವಾಗಿದೆ. ಪ್ರಸಕ್ತ ತಿಂಗಳು ಈವರೆಗೆ 1.63 ಲಕ್ಷ ಮಂದಿ ಪ್ರಯಾಣಿಸಿದ್ದು, 23.71 ಲಕ್ಷ ರೂ. ಸಂಗ್ರಹವಾಗಿದೆ. ಕೊರೊನಾ ಪೂರ್ವದಲ್ಲಿ ನಿತ್ಯ 2.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆಗ ಸುಮಾರು 33 ಲಕ್ಷ ರೂ. ಆದಾಯವಾಗುತ್ತಿತ್ತು. ಸದ್ಯ ಕೊರೊನಾ ತಗ್ಗುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಪ್ರಯಾಣಿಕರ ಬೇಡಿಕೆಯಂತೆ ನಗರ ಸಾರಿಗೆ ಬಸ್‍ಗಳ ಸಂಚಾರ ಸಮಯವನ್ನು ರಾತ್ರಿ 10 ಗಂಟೆವರೆಗೂ ವಿಸ್ತರಿಸಲಾಗಿದೆ. ಇದರಿಂದ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕಾರ್ಮಿಕರು, ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

Translate »