ಜ್ಞಾನದ ಕಲೆಯಾದ ಜನಪದದಿಂದ ಬೌದ್ಧಿಕ ಸಾಮಥ್ರ್ಯ ವೃದ್ಧಿ ಮೈಸೂರು ವಿವಿ ಕುಲಸಚಿವ ಪ್ರೊ.ಜೆ.ಸೋಮಶೇಖರ್
ಮೈಸೂರು

ಜ್ಞಾನದ ಕಲೆಯಾದ ಜನಪದದಿಂದ ಬೌದ್ಧಿಕ ಸಾಮಥ್ರ್ಯ ವೃದ್ಧಿ ಮೈಸೂರು ವಿವಿ ಕುಲಸಚಿವ ಪ್ರೊ.ಜೆ.ಸೋಮಶೇಖರ್

July 16, 2018

ಮೈಸೂರು: ಪ್ರತಿಯೊಂದು ಜನಪದ ಕಲೆಯೂ ಜ್ಞಾನದ ಕಲೆಯಾಗಿದ್ದು, ಅವುಗಳನ್ನು ಕರಗತ ಮಾಡಿಕೊಳ್ಳುವ ಮೂಲಕ ಬೌದ್ಧಿಕ ಸಾಮಥ್ರ್ಯ ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಜೆ.ಸೋಮಶೇಖರ್ ಹೇಳಿದರು.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಪದ ಕಲೆ ತನ್ನ ಜನಪರ ಸತ್ವದಿಂದ ಜೀವಪರತೆಯೊಂದಿಗೆ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಜನಪದ ಕಲೆ ಪ್ರತಿಯೊಬ್ಬರ ಜೀವನ ಶೈಲಿಯಲ್ಲಿ ಅಳವಡಿಕೆಯಾದಲ್ಲಿ ಆಲೋಚನೆಗಳು ಉನ್ನತ ಮಟ್ಟಕ್ಕೆ ತಲುಪಲಿವೆ. ಇಂತಹ ಜನಪರ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಯನ್ನು ಯುವ ಸಮುದಾಯ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಬಿರದಲ್ಲಿ ಕಲಿತ ಜನಪದ ಕಲೆಯನ್ನು ಶಿಬಿರಾರ್ಥಿಗಳು ಮತ್ತಷ್ಟು ಜನರಿಗೆ ವಿಸ್ತರಿಸಲು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಜನಪದ ಸೇರಿದಂತೆ ಕಲೆಗಳು ಸ್ತಬ್ಧಗೊಂಡರೆ ಸಮಾಜ ಚಲನಶೀಲತೆ ಕಳೆದುಕೊಳ್ಳಲಿದೆ. ಹೀಗಾಗಿ ಕಲೆಗಳ ಚಾಲನಾಶಕ್ತಿ ವೃದ್ಧಿಸಬೇಕಿದ್ದು, ಕಲಾವಿದರು ಪ್ರತಿ ಹಂತದಲ್ಲೂ ಸಮಾಜಕ್ಕೆ ಉನ್ನತ ಸಂದೇಶ ನೀಡಬೇಕಾಗುತ್ತದೆ. ಬಹುತೇಕ ಯುವ ಜನರು ದಾರಿ ತಪ್ಪುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಹಿರಿಯ ಕಂಸಾಳೆ ಕಲಾವಿದ ಕಂಸಾಳೆ ಕುಮಾರಸ್ವಾಮಿ ಮಾತನಾಡಿ, ಜನಪದ ಕಲೆಯಿಂದಾಗಿ ನನಗೆ ಅಪಾರವಾದ ಗೌರವ ಲಭಿಸಿದೆ. ಮೈಸೂರು ವಿವಿಯಲ್ಲಿ 4ನೇ ದರ್ಜೆ ನೌಕರನಾದರೂ ನನ್ನ ಕಲೆಯಿಂದ ಎಲ್ಲರ ಗೌರವಕ್ಕೆ ಪಾತ್ರವಾಗಿದ್ದೆ. ಮೈಸೂರು ವಿವಿ ಉತ್ತೇಜನದಿಂದ ನನ್ನ ತಂದೆಯವರ ಜೊತೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಭಾಜನನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿ, ಮಲೆ ಮಹದೇಶ್ವರಸ್ವಾಮಿ ಕುರಿತ ಜನಪದ ಗೀತೆಯೊಂದನ್ನು ಸಾದರಪಡಿಸಿ ಚಪ್ಪಾಳೆ ಗಿಟ್ಟಿಸಿದರು.

ಮೈಸೂರು ವಿವಿಯ ಸಮಾಜಕಾರ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಹೆಚ್.ಪಿ.ಜ್ಯೋತಿ ಮಾತನಾಡಿ, ಪ್ರಸ್ತುತದಲ್ಲಿ ಪಾಶ್ಚಿಮಾತ್ಯ ಕಲೆಗಳ ಅಬ್ಬರ ಜೋರಾಗಿದ್ದು, ಇದರ ಪರಿಣಾಮ ನಮ್ಮ ಜನಪದ ಕಲೆಗಳ ಮಹತ್ವ ಅರಿವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಜನಪದ ಕಲೆಗಳ ಉಳಿಸಿ ಬೆಳೆಸಲು ಗಂಭೀರ ಚಿಂತನೆ ಅಗತ್ಯವಾಗಿದ್ದು, ಹೆಚ್ಚು ಹೆಚ್ಚು ಯುವ ಜನರು ಜನಪದ ಕಲೆಗಳನ್ನು ಕಲಿತು ಕಲಿಸಲು ಮುಂದಾಗಬೇಕು. ಇದಕ್ಕಾಗಿ ಜನಪದ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿ ಕಲಿಸುವ ಕಾಯಕ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಮೇಯರ್ ಪುರುಷೋತ್ತಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಯಾಂಡ್ ತಾಳ ಡ್ಯಾನ್ಸ್ ಕಂಪೆನಿಯ ಪೂಜಾಜೋಷಿ, ಮೈಸೂರು ವಿವಿ ಎಂಬಿಎ ವಿಭಾಗದ ಪ್ರಾಧ್ಯಾಪಕ ಡಿ.ಆನಂದ್, ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಭಾನುಪ್ರಕಾಶ್, ಲೇಖಕ ಮಲ್ಕುಂಡಿ ಮಹದೇವಸ್ವಾಮಿ, ಗಾಯಕ ಲಕ್ಷ್ಮಿರಾಮ್, ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ತಲಕಾಡು ಮತ್ತಿತರರು ಹಾಜರಿದ್ದರು.

ಗೌತಮ ಶೈಕ್ಷಣ ಕ ಮತ್ತು ಸಾಂಸ್ಕøತಿಕ ಸೇವಾ ಟ್ರಸ್ಟ್‍ನಿಂದ ಏರ್ಪಡಿಸಿದ್ದ ರಂಗಕಲೆ, ಜನಪದ ನೃತ್ಯ ಹಾಗೂ ಸಂಗೀತ ಕಲೆಗಳ 19 ದಿನಗಳ ಶಿಬಿರದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ 60ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »