ಬದ್ಧತೆ, ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅಭಿಮತ
ಮೈಸೂರು

ಬದ್ಧತೆ, ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅಭಿಮತ

July 16, 2018

ಮೈಸೂರು: ಪ್ರತಿಷ್ಠಿತ ಫೆಡರೇಷನ್ ಆಫ್ ಕರ್ನಾಟಕ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಕೆಸಿಸಿಐ) ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದ್ಯಮಿ ಸುಧಾಕರ ಎಸ್.ಶೆಟ್ಟಿ ಹಾಗೂ ಅವರ ಪತ್ನಿ ಸುಖಲತಾ ಶೆಟ್ಟಿ ಅವರನ್ನು ಭಾನುವಾರ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಹೋಟೆಲ್ ಮಾಲೀಕರ ಸಂಘ ಮತ್ತು ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಉದ್ಘಾಟಿಸಿದರಲ್ಲದೇ, ಸುಧಾಕರ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಬದ್ಧತೆ ಮತ್ತು ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದಾಗಿದೆ. ಯಾರೇ ಹಿಯ್ಯಾಳಿಸಿದರೂ ಅಥವಾ ನೋಯಿಸಿದರೂ ಅದು ನಮಗೆ ಒಂದು ಪಾಠವಾಗಬೇಕು. ಇಂತಹ ವರ್ತನೆಗಳೇ ಸಾಧನೆಗೆ ಮೆಟ್ಟಿಲಾಗುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಸೇವೆ ಸಲ್ಲಿಸುವವರು ಶೇ.51ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಸ್ವಾರ್ಥಿಗಳಾಗಿ ಬಡ ಜನರಿಗೆ ನೆರವಾಗಬೇಕು. ಶೇ.49ಕ್ಕಿಂತ ಕಡಿಮೆ ಸ್ವಾರ್ಥತೆ ಇರಬೇಕು. ಸ್ವಾರ್ಥತೆಯಲ್ಲಿ ಶೇಕಡಾವಾರು ಪ್ರಮಾಣ ಕಡಿಮೆ ಇದ್ದಷ್ಟೂ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ. ಅಲ್ಲದೇ ಸಾಧನೆ ಮಾಡುವುದಕ್ಕೆ ಅದು ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇಂತಹ ವಾತಾವರಣದಲ್ಲಿ ಸುಧಾಕರ ಶೆಟ್ಟಿಯವರು ಬೆಳೆದು ಬಂದು ಇಂದು ಹೋಟೆಲ್, ಶಿಕ್ಷಣ ಸಂಸ್ಥೆ ಹಾಗೂ ಕೈಗಾರಿಕೆಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದಕ್ಕೆ ಹೋಟೆಲ್ ಉದ್ಯಮಗಳು ನೆರವಾಗುತ್ತವೆ. ಒಂದು ಕೊಠಡಿಯನ್ನು ಕಟ್ಟಿದರೆ ಅದರಿಂದ ನೇರವಾಗಿ 15 ಮಂದಿ ನೌಕರರು ಪ್ರಯೋಜನ ಪಡೆದುಕೊಳ್ಳಬಹುದು. ಅದೇ ರೀತಿ ಪರೋಕ್ಷವಾಗಿ ಇನ್ನಷ್ಟು ಮಂದಿಗೆ ನೆರವಾಗುತ್ತದೆ. ಅಲ್ಲದೇ ಯಾರಿಗಾದರೂ ತಕ್ಷಣವೇ ಉದ್ಯೋಗ ಕೊಡುವ ಕ್ಷೇತ್ರ ಹೋಟೆಲ್ ಉದ್ಯಮವಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಅವರು ಹೇಳಿದರು.

ಇದೇ ವೇಳೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಮೃಗಾಲಯಕ್ಕೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ವಾರಾಂತ್ಯ ಮತ್ತು ರಜೆ ದಿನದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದಲ್ಲದೇ ಸಾರಿಗೆ ಸಂಸ್ಥೆಯು ರಜೆ ದಿನಗಳಲ್ಲಿ ಪ್ರಯಾಣ ದರವನ್ನು ಹೆಚ್ಚಳ ಮಾಡುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಇದನ್ನು ಮನಗಂಡು ಹೆಚ್ಚಳ ಮಾಡುವ ಪ್ರಯಾಣ ದರ ಮತ್ತು ಪ್ರವೇಶ ಶುಲ್ಕ ಏಕ ರೂಪದಲ್ಲಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಸನ್ಮಾನ ಸ್ವೀಕರಿಸಿದ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ನಾನು ಸಣ್ಣ ಪ್ರಮಾಣದ ಹೋಟೆಲ್ ಆರಂಭಿಸಿದ ದಿನದಿಂದ ಇಂದಿನವರೆಗೂ ಕಲ್ಮಶವಾಗಿಲ್ಲ. ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಏಳಿಗೆ ಸಾಧಿಸಿದ್ದೇನೆ. ನನ್ನ ಏಳಿಗೆಗೆ ಪತ್ನಿ, ಮಕ್ಕಳು, ಸ್ನೇಹಿತರು ನೀಡಿದ ಪ್ರೋತ್ಸಾಹವೇ ಕಾರಣವಾಗಿದೆ ಎಂದು ಅವರು ಹೇಳಿದರು.

ಮೈಸೂರು ನಗರದ ಮಧ್ಯ ಭಾಗದಲ್ಲಿರುವ ರೇಸ್ ಕೋರ್ಸ್ ಅನ್ನು ಸ್ಥಳಾಂತರ ಮಾಡಬೇಕೆಂದು ಧ್ವನಿ ಎತ್ತಿದವರಲ್ಲಿ ನಾನೂ ಒಬ್ಬನಾಗಿದ್ದೇನೆ. ನಗರದ ಜನಸಂಖ್ಯೆ 14 ಲಕ್ಷ ದಾಟುತ್ತಿದೆ. ಜಿಲ್ಲೆಯ ಜನಸಂಖ್ಯೆ 27 ಲಕ್ಷ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕೆ ರೇಸ್ ಕೋರ್ಸ್ ಅನ್ನು ಸ್ಥಳಾಂತರ ಮಾಡುವ ಅವಶ್ಯಕತೆಯಿದೆ. ಆ ಸ್ಥಳದಲ್ಲಿ ಯೋಜನಾ ಬದ್ಧವಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕೆ ಕಾರ್ಯಕ್ರಮ ರೂಪಿಸಬೇಕಾಗಿದೆ. ಮೈಸೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಹಿಂದೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡುವುದಕ್ಕೆ 5 ಸ್ಥಳ ಗುರುತಿಸಲಾಗಿದೆ. ಆ ಸ್ಥಳದಲ್ಲಿ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಬೇಕು. ಅಲ್ಲದೆ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸುವುದಕ್ಕೆ ಯೋಗ್ಯವಾದ ಸಭಾಂಗಣ ನಿರ್ಮಾಣ ಮಾಡುವಂತೆ ಅವರು ಮನವಿ ಮಾಡಿದರಲ್ಲದೆ, ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದರು. ನಾಡ ಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದ್ದು ಕೂಡಲೇ ದಸರಾ ಪ್ರಾಧಿಕಾರ ಸ್ಥಾಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಕೆಪಿಹೆಚ್‍ಆರ್‍ಎ ಉಪಾಧ್ಯಕ್ಷ ರವಿಶಾಸ್ತ್ರಿ, ಪಾಲಿಕೆ ಸದಸ್ಯ ಪ್ರಶಾಂತ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಉಪಾಧ್ಯಕ್ಷ ಅಶೋಕ್ ಮತ್ತು ಉಗ್ರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »