ತ್ಯಾಜ್ಯ ನಗರಿಯಾಗಿ ಮಾರ್ಪಡುತ್ತಿದೆ ಸ್ವಚ್ಛ ನಗರಿ
ಮೈಸೂರು

ತ್ಯಾಜ್ಯ ನಗರಿಯಾಗಿ ಮಾರ್ಪಡುತ್ತಿದೆ ಸ್ವಚ್ಛ ನಗರಿ

July 16, 2018
  • ರಾತ್ರೋರಾತ್ರಿ ಲೋಡ್‍ಗಟ್ಟಲೇ ಕಸ ತಂದು ಸುರಿಯುತ್ತಿರುವ ಅನಾಮಿಕರು, ಮೈಸೂರಿನಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ

ಮೈಸೂರು: ಸಾಂಸ್ಕೃತಿಕ ನಗರಿ, ಪಾರಂಪರಿಕ ಹಾಗೂ ಅರಮನೆಗಳ ನಗರಿ ಹಾಗೂ ಸ್ವಚ್ಛ ನಗರಿ ಎಂದು ಕರೆಸಿಕೊಂಡು ದೇಶ-ವಿದೇಶಗಳ ಗಮನ ಸೆಳೆದಿದ್ದ ಮೈಸೂರು ನಗರ ಮುಂದಿನ ದಿನಗಳಲ್ಲಿ ಕಸದ ನಗರ ಎನಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ನಗರದ ಹೊರವಲಯ ಸೇರಿದಂತೆ ಹಲವೆಡೆ ರಸ್ತೆ ಬದಿ ಕಿಡಿಗೇಡಿಗಳು ರಾತ್ರೋರಾತ್ರಿ ಕಸದ ರಾಶಿ ಸುರಿದು ನಗರದ ಅಂದವನ್ನು ಕೆಡಿಸುತ್ತಿದ್ದಾರೆ.

ಕೇರಳ ಸೇರಿದಂತೆ ವಿವಿಧೆಡೆಯಿಂದ ಅಕ್ರಮವಾಗಿ ಮೈಸೂರಿಗೆ ಹಸಿ, ಒಣ ಕಸ ಹಾಗೂ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಅಪಾಯಕಾರಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದೀಗ ಎಲ್ಲೆಂದರಲ್ಲಿ ರಾತ್ರೋರಾತ್ರಿ ಕಸದ ರಾಶಿ ಕಾಣಿಸಿಕೊಳ್ಳುವ ಮೂಲಕ ಮೈಸೂರಿಗೆ ಸ್ವಚ್ಛತೆಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಮೈಸೂರು ನಗರದಲ್ಲಿ ಜನಸಂಖ್ಯೆ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗ ತೊಡಗುತ್ತಿದ್ದು, ಇದರಿಂದ ಪ್ರತಿದಿನ ಉತ್ಪತ್ತಿಯಾಗುವ ಕಸದ ಪ್ರಮಾಣವೂ ಹೆಚ್ಚಾಗುತ್ತಿದೆ. ವಿದ್ಯಾರಣ್ಯಪುರಂನಲ್ಲಿರುವ ಸೀವೆಜ್ ಫಾರಂನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಗ್ರಹಿಸಲಾಗಿರುವ 7 ಲಕ್ಷ ಟನ್ ಕಸ ದುರ್ನಾತ ಬೀರುವ ಮೂಲಕ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಗೆ ಕಸ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿತ್ತು. ಜೆ.ಪಿನಗರ, ವಿದ್ಯಾರಣ್ಯಪುರಂ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳು ಪ್ರತಿಭಟಿಸಿದ್ದರು.

ಮೈಸೂರು ನಗರದಲ್ಲಿ ದಿನವೊಂದಕ್ಕೆ ಸುಮಾರು 450 ಟನ್‍ನಷ್ಟು ಕಸ ಸಂಗ್ರಹವಾಗುತ್ತದೆ. ಕಸ ವಿಂಗಡಣೆಯ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಮೈಸೂರಿನ 9 ಕಡೆ ಶೂನ್ಯ ಕಸ ನಿರ್ವಹಣಾ ಘಟಕವನ್ನು ಆರಂಭಿಸಲಾಗಿದೆ. ಇದರೊಂದಿಗೆ ರಾಯನಕೆರೆ ಹಾಗೂ ಕೆಸರೆಯಲ್ಲಿ ವಿದ್ಯಾರಣ್ಯಪುರಂನಲ್ಲಿರುವ ಸೀವೆಜ್ ಫಾರಂ ಮಾದರಿಯಲ್ಲಿ ಕಸ ನಿರ್ವಹಣಾ ಘಟಕ ಆರಂಭಿಸುವುದಕ್ಕೆ ಮೈಸೂರು ನಗರ ಪಾಲಿಕೆ ನಿರ್ಧರಿಸಿದೆ. ಇದರಿಂದ ಮನೆ ಮನೆಗಳಿಂದ ಸಂಗ್ರಹವಾಗಲಿರುವ ಕಸವನ್ನು ಮೂರು ಕೇಂದ್ರ ಹಾಗೂ 9 ಶೂನ್ಯ ನಿರ್ವಹಣಾ ಘಟಕಗಳಿಗೆ ಸರಬರಾಜು ಮಾಡಿ ಸಮಸ್ಯೆ ನಿವಾರಿಸುವುದಕ್ಕೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಮೈಸೂರಿನ ಹೊರವಲಯದ ರಸ್ತೆಯಲ್ಲಿ ಕಸದ ರಾಶಿ ಉತ್ಪತ್ತಿಯಾಗುವ ಮೂಲಕ ನಗರದ ಸೌಂದರ್ಯಕ್ಕೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ.

ಕಾಮನಕೆರೆಹುಂಡಿ-ರಾಯನಕೆರೆ ಬಳಿ ರಾಶಿ ಕಸ: ರಿಂಗ್ ರಸ್ತೆಯಲ್ಲಿರುವ ನಾರಾಯಣ ಹೃದಯಾಲಯದ ಬಳಿ ರಾಯನಕೆರೆ ಹಾಗೂ ಕಾಮನಕೆರೆಹುಂಡಿ ಬಳಿ ಕರ್ನಾಟಕ ಗೃಹಮಂಡಳಿ ಹಾಗೂ ವಿವಿಧ ಖಾಸಗಿ ಬಡಾವಣೆಗಳ ಖಾಲಿ ನಿವೇಶನದಲ್ಲಿ ರಾಶಿ ರಾಶಿ ಕಸ ಸುರಿಯಲಾಗಿದೆ. ವರುಣಾ ನಾಲೆಯ ದಡದಲ್ಲಿಯೂ ಅಪಾರ ಪ್ರಮಾಣದ ಕಸ ಸುರಿಯಲಾಗಿದೆ. ಗ್ಯಾರೇಜ್‍ಗಳಲ್ಲಿ ಉತ್ಪತ್ತಿಯಾಗುವ ಕಸ, ಹಣ್ಣಿನ ಮಂಡಿಗಳಲ್ಲಿ ಕೊಳೆತು ನಾರುವ ಹಣ್ಣು, ತರಕಾರಿ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಾಪರ್ ವೈರ್‍ಗಳು, ವಾಹನಗಳಿಗೆ ಬಳಸುವ ಫೈಬರ್ ಪೀಸುಗಳ ರಾಶಿ, ವೈರ್‍ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತಂದು ಸುರಿಯಲಾಗಿದೆ.

ಇದರೊಂದಿಗೆ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮೂಟೆ ಕಟ್ಟಿಕೊಂಡು ತಂದು ಎಸೆಯಲಾಗುತ್ತಿದೆ. ಇದರಿಂದ ಮಾಂಸದ ತ್ಯಾಜ್ಯ ತಿನ್ನುವುದಕ್ಕಾಗಿ ಹಲವಾರು ನಾಯಿಗಳು ಆ ಸ್ಥಳದಲ್ಲಿಯೇ ಬೀಡು ಬಿಟ್ಟಿವೆ. ಅಲ್ಲದೆ ಸುರಿದಿರುವ ಒಣ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ.

ಉತ್ತನಹಳ್ಳಿ ಬಳಿ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ಬಳಿ ಕಳೆದ 15 ದಿನದಿಂದ ರಸ್ತೆ ಬದಿಯಲ್ಲಿ ಕಸದ ರಾಶಿ ಸುರಿಯಲಾಗುತ್ತಿದೆ. ಸಿವೇಜ್ ಫಾರಂಗೆ ಬೇರೆಡೆಯಿಂದ ತಂದು ಸುರಿಯುತ್ತಿದ್ದ ಕಸಕ್ಕೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಲಾರಿ ಟೆಂಪೋಗಳಲ್ಲಿ ತಂದು ಕಸವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿದ್ದಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತುಂಬಿ ಬೀಸಾಡಲಾಗುತ್ತಿದೆ. ಕಳೆದ ವಾರ ಎರಡು ಸ್ಥಳಗಳಲ್ಲಿ ಕಸ ಸುರಿಯಲಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು.

ರಿಂಗ್ ರಸ್ತೆಯಲ್ಲಿ: ಒಂದೆಡೆ ಪ್ಲಾಸ್ಟಿಕ್ ಹಾಗೂ ಒಣ ಮತ್ತು ಹಸಿ ಕಸದ ಹಾವಳಿ ಹೆಚ್ಚಾಗಿ ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದರು. ಮತ್ತೊಂದೆಡೆ ಕಟ್ಟಡಗಳ ತ್ಯಾಜ್ಯವನ್ನು ರಿಂಗ್‍ರಸ್ತೆಯ ಬದಿಯಲ್ಲಿ ಖಾಲಿಯಿರುವ ನಿವೇಶನಗಳಲ್ಲಿ ಸುರಿದು ಪರಾರಿಯಾಗುತ್ತಿದ್ದಾರೆ. ವಿವಿಧೆಡೆಯಿಂದ ಮೈಸೂರು ನಗರಕ್ಕೆ ಹಾಗೂ ನಗರದ ಮೂಲಕ ಕೇರಳ, ತಮಿಳುನಾಡು ಸೇರಿದಂತೆ ವಿವಿಧೆಡೆಗೆ ಪ್ರಯಾಣಿಸುವ ಪ್ರಯಾಣಿಕರು ರಿಂಗ್‍ರಸ್ತೆಯ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಕಂಡು ಮೂಗು ಮುರಿಯುತ್ತಿದ್ದಾರೆ.

ದಂಡಿ ಸಡಕ್ ರಸ್ತೆಯಲ್ಲೂ ಕಸದ್ದೇ ಕಾರುಬಾರು.

ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆಯ ನಡುವೆ ಇರುವ ರಸ್ತೆ ಯಾವಾಗಲೂ ತಂಪಾದ ವಾತಾವರಣದಿಂದ ಥಂಡಿ ಸಡಕ್ ರಸ್ತೆಯೆಂದೇ ಪ್ರವಾಸಿಗರು ಹಾಗೂ ವಾಯುವಿಹಾರಿಗಳಿಗೆ ಮುದ ನೀಡುತ್ತಿದೆ. ಒಂದು ಬದಿಯಲ್ಲಿ ಕಾರಂಜಿಕೆರೆ ಹಾಗೂ ಮತ್ತೊಂದು ಬದಿಯಲ್ಲಿ ಮೃಗಾಲಯದಲ್ಲಿರುವ ವಿವಿಧ ಪ್ರಾಣಿಗಳು ಕಾಣುವ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಆಹ್ಲಾದಕರ ಅನುಭವವಾಗಿದೆ. ಈ ನಡುವೆ ಇದೀಗ ಈ ರಸ್ತೆಯನ್ನು ಕಿಡಿಗೇಡಿಗಳು ಕಸ ಸುರಿಯುವ ಮೂಲಕ ವಾತಾವರಣ ಹದಗೆಡಿಸುವುದರೊಂದಿಗೆ ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ. ಥಂಡಿ ಸಡಕ್ ರಸ್ತೆಯಲ್ಲಿ ಸೋಫ, ಹಾಸಿಗೆ, ಕುಷನ್ ಸೀಟ್ ರಿಪೇರಿ ಮಾಡಿದ ನಂತರ ಉತ್ಪತ್ತಿಯಾಗುವ ಕಸÀ, ಹತ್ತಿಯ ಕಸ, ಪ್ಲಾಸ್ಟಿಕ್ ಕಸ ಸೇರಿದಂತೆ ಇನ್ನಿತರ ಕಸವನ್ನು ತಂದು ಈ ರಸ್ತೆಯ ಬದಿಯಲ್ಲಿ ಸುರಿದು ಪರಾರಿಯಾಗುತ್ತಿದ್ದಾರೆ. ಮುಂಜಾನೆ ಹಾಗೂ ರಾತ್ರಿ ವೇಳೆ ಈ ಕೃತ್ಯ ಎಸಗುತ್ತಿದ್ದು, ರಸ್ತೆಯ ಅಂದವನ್ನು ಕೆಡಿಸುತ್ತಿದ್ದಾರೆ. ಇದನ್ನು ಗಮನಿಸಿರುವ ಮೃಗಾಲಯದ ಅಧಿಕಾರಿಗಳು ಥಂಡಿಸಡಕ್ ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಗಸ್ತು ನಡೆಸಲಾಗುತ್ತಿದೆ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.

ಕಸ ಸುರಿಯುತ್ತಿರುವವರನ್ನು ಪತ್ತೆ ಮಾಡಲು ಅಭಯ ತಂಡದ ಸದಸ್ಯರು ಗಸ್ತು ತಿರುಗುತ್ತಿದ್ದಾರೆ. ಮೊದಲ ಬಾರಿ ಕಸ ಸುರಿಯುತ್ತಿದ್ದಾಗ ಸಿಕ್ಕಿ ಹಾಕಿಕೊಂಡರೆ 100ರೂ ದಂಡ ಹಾಕಲಾಗುತ್ತದೆ. ಎರಡನೇ ಬಾರಿ ಸಿಕ್ಕಿದರೆ 500 ರೂ ದಂಡ, ಮೂರನೆ ಬಾರಿ ಸಿಕ್ಕಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. – ಡಾ.ಹೆಚ್.ರಾಮಚಂದ್ರ, ಹಿರಿಯ ಆರೋಗ್ಯಾಧಿಕಾರಿ.

Translate »