ರೈತರ ಸಾಲಮನ್ನಾ, ಮಾತಿಗೆ ತಪ್ಪಿದ ಕುಮಾರಸ್ವಾಮಿ; ಆರೋಪ
ಮೈಸೂರು

ರೈತರ ಸಾಲಮನ್ನಾ, ಮಾತಿಗೆ ತಪ್ಪಿದ ಕುಮಾರಸ್ವಾಮಿ; ಆರೋಪ

July 16, 2018
  • ಜು.21ರಂದು ಹೊಸಪೇಟೆ ಬಳಿ ರೈತಸಂಘದಿಂದ ರಾಷ್ಟ್ರೀಯ ಹೆದ್ದಾರಿ ಬಂದ್

ಮೈಸೂರು:  ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಸ್ವರಾಜ್ ಇಂಡಿಯಾ ಪಾರ್ಟಿ ಆಶ್ರಯದಲ್ಲಿ 39ನೇ ರೈತ ಹುತಾತ್ಮ ದಿನವಾದ ಜು.21ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಹಿಟ್ನಾಳ್ ಕ್ರಾಸ್ ಬಳಿ ಇಡೀ ದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ ನಡೆಸಲಾಗುವುದು ಎಂದು ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಬೆಳೆಸಾಲ ಮನ್ನಾ ಮಾಡುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಸಾರ್ವಜನಿಕರ ಸಭೆಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತಿಗೆ ತಪ್ಪುವುದಿಲ್ಲ. ಸಾಲ ಮನ್ನಾ ಮಾಡೇ ತೀರುತ್ತೇನೆ ಎಂದಿದ್ದರು. ಆದರೆ ಅವರು ಹೇಳಿದಂತೆ ನಡೆದುಕೊಳ್ಳದೇ ರೈತ ಸಮುದಾಯವನ್ನು ನಂಬಿಸಿ, ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸಾಲ ಪಡೆದ ಎಲ್ಲಾ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಎಲ್ಲಾ ಬ್ಯಾಂಕ್‍ಗಳಲ್ಲಿ ಪಡೆದಿರುವ ಕೃಷಿ ಅಭಿವೃದ್ಧಿ ಸಾಲ, ಟ್ರಾಕ್ಟರ್ ಸಾಲ, ಪಂಪ್‍ಸೆಟ್ ಸಾಲ, ಪೈಪ್‍ಲೈನ್ ಸಾಲ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣ ಕೆ ಸಾಲ, ಕೃಷಿ ಯಂತ್ರೋಪಕರಣಗಳ ಸಾಲ, ಸ್ತ್ರೀಶಕ್ತಿ ಸಂಘಗಳ ಸಾಲ, ಸ್ವ-ಸಹಾಯ ಗುಂಪುಗಳ ಸಾಲ, ಆರ್‍ಟಿಸಿ ನೀಡಿ ಪಡೆದುಕೊಂಡಿರುವ ಚಿನ್ನದ ಮೇಲಿನ ಸಾಲಗಳನ್ನು ಮನ್ನಾ ಮಡಬೇಕು. ಸರಳ ಸಾಲ ನೀತಿ ರೂಪಿಸಿ ಸಾಲ ಪಡೆದ ರೈತ ಸಮುದಾಯ ವಾಪಸ್ ಸಾಲ ಕಟ್ಟುವಂತಹ ಶಕ್ತಿ ತುಂಬಬೇಕು. ಡಾ.ಸ್ವಾಮಿನಾಥ್‍ನ ವರದಿ ಜಾರಿಗೊಳಿಸಿ ರೈತರ ರಕ್ಷಣೆ ಮಾಡಬೇಕು. ಗೋರಕ್‍ಸಿಂಗ್ ವರದಿ ಜಾರಿಗೊಳಿಸಿ ಅಡಿಕೆ, ತೆಂಗು ಬೆಳೆಗಾರರ ರಕ್ಷಣೆ ಮಾಡಬೇಕು. ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ 2016ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಅವರು ಮಂಡಿಸಿದ್ದ ಖಾಸಗಿ ಮಸೂದೆಯ ಅಂಶಗಳನ್ನು ಪರಿಗಣಿಸಬೇಕು. ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಪುನಶ್ಚೇತನ್ಕಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ ನಡೆಸಲಾಗುತ್ತಿದ್ದು, 25 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ಇದು ನಮ್ಮ ಮೊದಲ ಹಂತದ ಚಳುವಳಿಯಾಗಿದ್ದು, ಸರ್ಕಾರ ನಮ್ಮ ಹೋರಾಟವನ್ನು ನಿರ್ಲಕ್ಷಿಸಿದರೆ 2ನೇ ಹಂತದಲ್ಲಿ ಜೆಡಿಎಸ್‍ನ 38 ಶಾಸಕರ ಮನೆಗಳ ಮುಂದೆ ಧರಣಿ, ಸರ್ಕಾರ ಇದಕ್ಕೂ ಜಗ್ಗದಿದ್ದರೆ ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಾರ್ಟಿ ಪ್ರಧಾನ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ, ರೈತಸಂಘದ ಮುಖಂಡರಾದ ಅಶ್ವಥ್‍ನಾರಾಯಣರಾಜೇ ಅರಸ್, ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಬಸವರಾಜು, ಹಾಸನ ಜಿಲ್ಲಾ ಕಾರ್ಯದರ್ಶಿ ಹರೀಶ್ ಇನ್ನಿತರರು ಉಪಸ್ಥಿತರಿದ್ದರು.

ಬಜೆಟ್ ಬಗ್ಗೆ ರೈತರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸಿದ ಕ್ಷಣದಲ್ಲಿ ನಿರಾಸೆಯಿಂದ ರಾಜ್ಯದ ಚಾಮರಾಜನಗರ, ಬಿಜಾಪುರ, ಬಾಗಲಕೋಟೆಗಳಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ಮುಖ್ಯಮಂತ್ರಿಯವರೇ ನೇರ ಹೊಣೆಗಾರರು. – ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತಸಂಘ.

 

ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಫಿ, ಮೆಣಸು ಬೆಳೆ ಇಳಿಮುಖವಾಗಿದೆ. ಒಂದೆಡೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾದರೆ, ಇನ್ನೊಂದೆಡೆ ಮುಂಗಾರು ಹೊಡೆತಕ್ಕೆ ಸಾಕಷ್ಟು ಬೆಳೆ ಹಾನಿಯಾಗಿದೆ. ಇದರ ತಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು. – ಮನು ಸೋಮಯ್ಯ, ಅಧ್ಯಕ್ಷ, ಕೊಡಗು ಜಿಲ್ಲಾ ರೈತಸಂಘ.

Translate »