ಮನೆಯಂಗಳದಲ್ಲಿ ಎರಡು ಕೃತಿ ಬಿಡುಗಡೆ
ಮೈಸೂರು

ಮನೆಯಂಗಳದಲ್ಲಿ ಎರಡು ಕೃತಿ ಬಿಡುಗಡೆ

July 16, 2018

ಮೈಸೂರು: `ನನ್ನ ರಂಗಭೂಮಿ’ ಮತ್ತು `ರಂಗ ವಿಮರ್ಶೆ ಅಂದು-ಇಂದು’ ಎಂಬ ಎರಡು ಕೃತಿಗಳನ್ನು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ.ಸಿ.ನಾಗಣ್ಣ ಭಾನುವಾರ ಬಿಡುಗಡೆ ಮಾಡಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಶಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಕೃಷ್ಣ ಜನಮನ ಅವರ ಈ ಎರಡು ಕೃತಿಗಳನ್ನು ಡಾ.ಸಿ.ನಾಗಣ್ಣ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಎದುರಾಗುವ ಅಡ್ಡಿ-ಆತಂಕಗಳನ್ನು ಮೀರಿ ರಂಗಭೂಮಿಯಲ್ಲಿ ಬೆಳೆದಿರುವ ಕೃಷ್ಣ ಜನಮನ 28 ಕೃತಿಗಳನ್ನು ರಚನೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕಥೆ, ಕಾದಂಬರಿ ಸೇರಿದಂತೆ ಯಾವುದೇ ಪ್ರಕಾರದ ಸಾಹಿತ್ಯ ಕೃಷಿ ಮಾಡಿದರೂ ಅದರಲ್ಲಿ ತನ್ನ ಆತ್ಮಚರಿತ್ರೆಯ ತುಣುಕುಗಳನ್ನು ಬಿಟ್ಟಿರುತ್ತಾನೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ನಾಟಕವಾದರೂ ತನ್ನ ಗರ್ಭದಲ್ಲಿ ಒಂದು ಸಂದೇಶ ಅಡಗಿಸಿಕೊಂಡಿರುತ್ತದೆ. ಆದರೆ ಆ ಸಂದೇಶ ಸಮಾಜಮುಖಿ ಆಗಿರಬೇಕು ಎಂಬುದು ಕೃಷ್ಣ ಜನಮನ ತಮ್ಮ `ನನ್ನ ರಂಗಭೂಮಿ’ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆ ನನ್ನದೆಂದು ಹೇಳಿಕೊಂಡಿದ್ದಾರೆ. `ನನ್ನ ರಂಗ ಸಂಘಟನೆ’ ಎಂಬ ಪ್ರಬಂಧ ಈ ಕೃತಿಯಲ್ಲಿ ಮುಖ್ಯ ಪ್ರಬಂಧವಾಗಿ ಹೊರಹೊಮ್ಮಿದೆ. `ರಂಗ ವಿಮರ್ಶೆ ಅಂದು-ಇಂದು’ ಕೃಷ್ಣಜನಮನ ಅವರ ಸಂಪಾದಿತ ಕೃತಿಯಾಗಿದೆ. ಎರಡೂ ಕೃತಿಗಳಲ್ಲೂ ಲೇಖಕರು ಪ್ರಸ್ತುತಕ್ಕೆ ಅಗತ್ಯವಾದ ಪ್ರಶ್ನೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ `ರಂಗಭೂಮಿಯ ನನ್ನ ಸೈದ್ಧಾಂತಿಕ ನೋಟ’ ಕುರಿತಂತೆ ಮಾತನಾಡಿದ ಹಿರಿಯ ರಂಗನಿರ್ದೇಶಕ ಪ್ರೊ.ಹೆಚ್.ಎಸ್.ಉಮೇಶ್, ರಂಗಭೂಮಿ ಎಂದರೇನು ಎಂದು ಅರಿವಿಲ್ಲದ ವೇಳೆಯಲ್ಲಿ ನನಗೆ ರಂಗಭೂಮಿಯೊಂದಿಗೆ ಒಡನಾಟ ಆರಂಭವಾಯಿತು. ನಾನು ನಾಟಕದಲ್ಲಿ ಅಭಿನಯಿಸುವ ಬಗ್ಗೆ ತಿಳಿದ ಸಂಸ್ಕøತ ವಿದ್ವಾಂಸರಾದ ನನ್ನ ತಂದೆ `ನೀನು ನಾಟಕ ಮಾಡು, ಆದರೆ ಇದಕ್ಕಿಂತಲೂ ಹೆಚ್ಚಾಗಿ ನಾಟಕ ರಚನೆಗೆ ಆದ್ಯತೆ ನೀಡು. ಏಕೆಂದರೆ ಕೇವಲ ಅಭಿನಯ ಕಲಿತರೆ ರಂಗಭೂಮಿಯಲ್ಲಿ ಉಳಿಯುವುದು ಕಷ್ಟ ಎಂದಿದ್ದರು ಎಂದು ಸ್ಮರಿಸಿದರು.

ಕಲೆ ಕರಗತವಾಗಿದ್ದವರು ಜನರ ಮನಸ್ಸಿನಲ್ಲಿ ನೆಲೆ ನಿಲ್ಲದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಒಂದು ಸಿದ್ಧಾಂತದ ನೆಲಗಟ್ಟಿನಲ್ಲಿ ಮುಂದುವರೆಯಬೇಕೆ ಎಂಬ ಪ್ರಶ್ನೆ ಕಾಡುತ್ತದೆ. ಸಿಎಫ್‍ಟಿಆರ್‍ಐ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದ ಸತ್ಯನಾರಾಯಣ್ ಅಮೋಘ ಅಭಿನಯ ಮಾಡುತ್ತಿದ್ದರು. ಆದರೆ ಇವರು ಜನಪ್ರಿಯವಾಗಲೇ ಇಲ್ಲ. ಇವರದೇ ಕಾಲಘಟ್ಟದ ಮೊತ್ತಬ್ಬರು ಅಭಿಯನದಲ್ಲಿ ಪರಿಣಿತ ಇಲ್ಲವಾದರೂ ಜನಪ್ರಿಯಗೊಂಡರು. ಅಂದರೆ ರಂಗಭೂಮಿ ಆಪೇಕ್ಷಿಸುವ ಸೃಜನಶೀಲನೆ ಹಿಂದೆ ಒಂದು ರಾಜಕೀಯ ಸಿದ್ಧಾಂತದ ಪ್ರಜ್ಞೆ ಇರಬೇಕೆ ಎಂಬ ಭಾವನೆ ಮೂಡುತ್ತಿದೆ ಎಂದು ವಿಶ್ಲೇಷಿಸಿದರು.

ಬಳಿಕ ರಂಗಭೂಮಿ ಕುರಿತು ಸಂವಾದ ನಡೆಯಿತು. ಹಿರಿಯ ರಂಗಕರ್ಮಿ ಡಾ.ಹೆಚ್.ಕೆ.ರಾಮನಾಥ್ ಅಧ್ಯಕ್ಷತೆ ವಹಿಸಿದ್ದರು. ರಂಗ ಚಿಂತಕ ಗಂಗಾಧರಸ್ವಾಮಿ, ರಂಗ ನಿರ್ದೇಶಕ ಪ್ರೊ.ಎಸ್.ಆರ್.ರಮೇಶ್, ಕೃತಿಗಳ ಕರ್ತೃ ಕೃಷ್ಣಜನಮನ ಮತ್ತಿತರರು ಹಾಜರಿದ್ದರು.

Translate »