ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…
ಮೈಸೂರು

ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…

July 16, 2018

ಮೈಸೂರು: ಸೊಸೈಟಿ ಯಲ್ಲಿ ಅಕ್ಕಿ ತೂಗುತ್ತಿದ್ದ ನನ್ನನ್ನು ಸಚಿವನಾಗುವ ಮಟ್ಟಕ್ಕೆ ಬೆಳೆಸಿದ್ದೀರಿ… ಚುನಾವಣೆ ಯುದ್ಧದಲ್ಲಿ ರಣ ಕಹಳೆ ಊದಿ ಭಾರೀ ಹೋರಾಟದ ಮೂಲಕ ನನ್ನನ್ನು ಗೆಲ್ಲಿಸಿದ್ದೀರಿ… ನನ್ನುಸಿರುವವರೆಗೂ ನಿಮ್ಮನ್ನು ಮರೆಯಲ್ಲ…. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆ ಯಲ್ಲಿ ಭಾವುಕರಾಗಿ ಹೇಳಿದ ಮಾತುಗಳಿವು.

ಮೈಸೂರಿನ ಹೊರ ವಲಯದಲ್ಲಿರುವ ಲಿಂಗ ದೇವರು ಕೊಪ್ಪಲು ಮೈದಾನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಘಟಕ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಜಿ.ಟಿ.ದೇವೇಗೌಡರು ಮಾತನಾಡಿದರು. ನಿಮ್ಮ ಜಿ.ಟಿ.ದೇವೇಗೌಡರನ್ನು ಸೋಲಿಸಲು ದೊಡ್ಡ ಶಕ್ತಿ ಕೆಲಸ ಮಾಡಿತು. ಆದರೆ ನೀವು ರಣ ಕಹಳೆ ಊದಿ, ಭಾರೀ ಹೋರಾಟವನ್ನೇ ಮಾಡಿ ಮುಖ್ಯಮಂತ್ರಿಗಳ ಎದುರು ನನ್ನನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ನಿಮ್ಮ ಈ ಹೋರಾಟವನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಯವರೇ ನಡುಗಿ ಹೋಗಿದ್ದಾರೆ ಎಂದರು. 1989ರ ಎಪಿಎಂಸಿ ಚುನಾವಣೆ ಮೂಲಕ ರಾಜಕಾರಣದಲ್ಲಿ ತಾವು ಬೆಳೆದು ಬಂದ ಹಾದಿಯನ್ನು ವಿವರಿಸಿದ ಜಿ.ಟಿ.ದೇವೇಗೌಡರು, ಎಲ್ಲಾ ಚುನಾವಣೆಗಳಲ್ಲೂ ತಮಗೆ ಗೆಲುವು ತಂದುಕೊಟ್ಟ ಮತದಾರರನ್ನು ಸ್ಮರಿಸಿಕೊಂಡರು. ಜೆಡಿಎಸ್ 37 ಸ್ಥಾನಗಳನ್ನು ಮಾತ್ರ ಗೆದ್ದಿದ್ದರೂ, ಕುಮಾರಸ್ವಾಮಿ ಚಾಮುಂಡೇಶ್ವರಿ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಜಿಟಿಡಿ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರ ವರುಣಾ ಹೋಬಳಿ ಹಾಗೂ ಮೈಸೂರು ನಗರದ 3 ಕ್ಷೇತ್ರಗಳು ಸೇರಿದಂತೆ 103 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉಂಡವಾಡಿ ಯೋಜನೆ ಬಜೆಟ್‍ನಲ್ಲಿ ಸೇರ್ಪಡೆಯಾಗಿದೆ. 545 ಕೋಟಿ ಅಂದಾಜಿ ನಲ್ಲಿ 2 ವರ್ಷದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಈ ಯೋಜನೆಗೆ ಮಂಜೂರಾತಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಪ್ಪಾಳೆ ತಟ್ಟುವಂತೆ ಜಿ.ಟಿ.ದೇವೇಗೌಡರು ಮನವಿ ಮಾಡಿದಾಗ ಚಪ್ಪಾಳೆಗಳ ಸುರಿಮಳೆಯಾಯಿತು.

ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾಯಿಸಿದ್ದರು. ವೇದಿಕೆಯಲ್ಲಿ ಭಾರೀ ಗಾತ್ರದ ಗುಲಾಬಿ ಹೂವಿನ ಹಾರ ಹಾಗೂ ಸೇಬಿನ ಹಾರ ಹಾಕಿ, ಬೆಳ್ಳಿ ಗದೆ ನೀಡಿ ಕಾರ್ಯಕರ್ತರು ಜಿ.ಟಿ.ದೇವೇಗೌಡರನ್ನು ಸನ್ಮಾನಿಸಿದರು. ಅವರನ್ನು ಸನ್ಮಾನಿಸಲು ವೇದಿಕೆ ಮೇಲೆ ನೂಕು-ನುಗ್ಗಲು ಉಂಟಾದಾಗ ಜಿ.ಟಿ. ದೇವೇಗೌಡರೇ ಒಬ್ಬೊಬ್ಬರನ್ನು ಹೆಸರಿಸಿ ವೇದಿಕೆಯಿಂದ ಕೆಳಗಿಳಯುವಂತೆ ಸೂಚಿಸಿದರು. ಮೈಸೂರಿನ ಐಶ್ವರ್ಯ ಪೆಟ್ರೋಲ್ ಬಂಕ್ ವೃತ್ತದಿಂದ ಲಿಂಗದೇವರು ಕೊಪ್ಪಲುವರೆವಿಗೂ ಜಿ.ಟಿ.ದೇವೇಗೌಡರ ಕಟೌಟ್‍ಗಳು ರಾರಾಜಿಸುತ್ತಿದ್ದವು. ಕಾರ್ಯಕರ್ತರಿಗಾಗಿ ಭರ್ಜರಿ ಮಾಂಸದ ಊಟ ಏರ್ಪಡಿಸಲಾಗಿತ್ತು.

ಅಧಿಕಾರ ಇರುವಾಗಅಹಂಕಾರದಿಂದ ಮೆರೆಯಬಾರದು

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮ ಪಂಚಾಯ್ತಿ ಪಿಡಿಓಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮೈಸೂರಿನ ಹೊರ ವಲಯದ ಲಿಂಗದೇವರು ಕೊಪ್ಪಲು ಮೈದಾನದಲ್ಲಿ ನಡೆದ ಕೃತಜ್ಞತಾ ಸಮಾ ವೇಶದಲ್ಲಿ ಮಾತನಾಡಿದ ಅವರು, ನಮಗೆ ಅಧಿಕಾರ ಇದೆ ಎಂದು ಅಹಂಕಾರದಿಂದ ಮೆರೆಯ ಬಾರದು. ಜನಗಳ ಮೇಲೆ ದೌರ್ಜನ್ಯ ನಡೆಸಬಾರದು.

ಅಧಿಕಾರ, ಶ್ರೀಮಂತಿಕೆ ಶಾಶ್ವತವಲ್ಲ. ಕಳೆದ ಐದು ವರ್ಷದಲ್ಲಿ ಸಿದ್ದರಾಮಯ್ಯನವರಿಂದ ಚಾಮುಂಡೇಶ್ವರಿ ಕ್ಷೇತ್ರದ
ಜನ ತೀವ್ರ ಕಿರುಕುಳ ಅನುಭವಿಸಿದ್ದಾರೆ. ನಮ್ಮ ಜನರು ಇಲ್ಲ-ಸಲ್ಲದ ಕೇಸ್‍ಗಳನ್ನು ಹಾಕಿಸಿಕೊಳ್ಳುವಂತಾಯಿತು.

ಎಲ್ಲವನ್ನೂ ಕಂಡು ಕಣ್ಣೀರು ಹಾಕಿದ್ದೇನೆ. ಇನ್ನು ಮುಂದೆ ಹಾಗೆ ನಡೆಯಲು ಸಾಧ್ಯವಿಲ್ಲ ಎಂದರು. ಹಿಂದಿನ ಸರ್ಕಾರದಲ್ಲಿ ಗ್ರಾಪಂ ಪಿಡಿಓಗಳ ವರ್ತನೆ ಬಗ್ಗೆ ಕಿಡಿಕಾರಿದ ಅವರು, ಪಿಡಿಓಗಳು ಸಾರ್ವಜನಿಕರ ಖಾತೆ ಮಾಡಿಕೊಡಲು ಸಾವಿರ ಕತೆ ಹೇಳಿ ಲಂಚ ಕೇಳುತ್ತಾರೆ. ಒಬ್ಬ ಪಿಡಿಓ ಖಾತೆಗಾಗಿ ಲಕ್ಷ ರೂ. ಕೇಳಿದ್ದಾನೆ ಎಂದು ಕಿಡಿಕಾರುವ ಭರದಲ್ಲಿ ಅಸಂಸದೀಯ ಪದವನ್ನೂ ಉಪಯೋಗಿಸಿದರು. ಹಿಂದಿನ ಸರ್ಕಾರ ಇದ್ದಾಗ ಅವರು (ಸಿದ್ ರಾಮಯ್ಯ) ಹೇಳಿದಂತೆ ಕುಣದಿದ್ದೀರಿ. ಹಲವಾರು ತಪ್ಪುಗಳನ್ನೂ ಮಾಡಿದ್ದೀರಿ. ಈಗ ನಿಮ್ಮ ವರ್ತನೆ ಬದಲಾಗದಿದ್ದರೆ ಉಳಿಗಾಲವಿಲ್ಲ. ನಾನೇನೂ ನಿಮಗೆ ತೊಂದರೆ ಕೊಡುವುದಿಲ್ಲ. ನೀವು ಬದಲಾಗಬೇಕು ಅಷ್ಟೇ. ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಇಲ್ಲದ ಎಲ್ಲಾ ಜನರ ಸರ್ವೆ ಕಾರ್ಯವನ್ನು ತಿಂಗಳ ಕೊನೆಯೊಳಗೆ ಪಟ್ಟಿ ಮಾಡಿ ವರದಿ ಕೊಡಿ ಎಂದು ಪಿಡಿಓಗಳಿಗೆ ವೇದಿಕೆಯಲ್ಲೇ ಸೂಚನೆ ನೀಡಿದರು.

ನಾನು ಪಾಸಾಗಬೇಕಾದರೆ ಕ್ಷೇತ್ರದ ಜನರ ಸಹಕಾರ ಬೇಕು. ಈ ಹಿಂದಿನಂತೆ ಮದುವೆ, ಸಾವು, ನಾಮಕರಣ ಎಲ್ಲಾ ಕಾರ್ಯಗಳಿಗೂ ನನ್ನಿಂದ ಬರಲಾಗುವುದಿಲ್ಲ. ನಿಮ್ಮ ಕಾರ್ಯಕ್ರಮಗಳಿಗೆ ನನ್ನ ಮಗ ಅಥವಾ ಪತ್ನಿ ಬರುತ್ತಾರೆ, ದಯವಿಟ್ಟು ಸಹಕಾರ ಕೊಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕೇಳಿದ್ದು ಕಂದಾಯ, ಸಿಕ್ಕಿದ್ದು ಉನ್ನತ ಶಿಕ್ಷಣ

ಮೈಸೂರು: ನಾನು ಕೇಳಿದ್ದು ಕಂದಾಯ ಇಲಾಖೆ. ಆದರೆ ಕಂದಾಯ ಮತ್ತು ಗೃಹ ಇಲಾಖೆಗಳು ಕಾಂಗ್ರೆಸ್ ಪಾಲಾಯಿತು. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಕೇವಲ 8ನೇ ತರಗತಿ ಓದಿರುವ ನನಗೆ ಉನ್ನತ ಶಿಕ್ಷಣ ಖಾತೆ ಸೂಕ್ತವೇ ಎಂಬ ಬಗ್ಗೆ ಸಾಕಷ್ಟು ಯೋಚನೆ ಮಾಡಿದೆ. ಕಾಲೇಜಿನ ಪ್ರೊಫೆಸರ್‍ಗಳು ವಿವಿ ಕುಲಪತಿಗಳೊಂದಿಗೆ ಸೇರಿ ಉನ್ನತ ಶಿಕ್ಷಣ ಖಾತೆಯನ್ನು ನಿಭಾಯಿಸು ವುದು ಹೇಗೆ? ಎಂಬ ಚಿಂತೆ ನನ್ನನ್ನು ಕಾಡಿತ್ತು.

ಸಾಕಷ್ಟು ಯೋಚನೆ ಮಾಡಿ 15 ದಿನಗಳ ಬಳಿಕ ಈ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಶಾಸಕನಾಗಿ ಜನರ ನೋವು-ನಲಿವು ಗಳಿಗೆ ಸ್ಪಂದಿಸಿದ್ದೇನೆ. ವಿದೇಶಕ್ಕೂ ಹೋಗದೆ ನಿಮ್ಮ ಸೇವೆ ಮಾಡಿದ್ದೇನೆ. ಇದೀಗ ನನಗೆ ಮುಖ್ಯಮಂತ್ರಿಗಳು ದೊಡ್ಡ ಖಾತೆಯನ್ನೇ ವಹಿಸಿದ್ದಾರೆ. ಅದನ್ನು ನಾನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚು ಬರಲಾಗುವುದಿಲ್ಲ. ಅದಕ್ಕೆ ನೀವು ಅನುಮತಿ ನೀಡುತ್ತೀರಿ ಎಂದುಕೊಂಡಿದ್ದೇನೆ ಎಂದು ಜಿ.ಟಿ.ದೇವೇ ಗೌಡರು ಹೇಳುತ್ತಿದ್ದಂತೆಯೇ ಕಾರ್ಯಕರ್ತರಿಂದ ಕರತಾಡನ ಮುಗಿಲು ಮುಟ್ಟಿತು.

Translate »