ಮಾಜಿ ಶಾಸಕ ಎಂ.ಸತ್ಯನಾರಾಯಣ್ ವಿಧಿವಶ
ಮೈಸೂರು

ಮಾಜಿ ಶಾಸಕ ಎಂ.ಸತ್ಯನಾರಾಯಣ್ ವಿಧಿವಶ

June 7, 2019

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಸತ್ಯನಾರಾಯಣ ಅವರು ಗುರುವಾರ ರಾತ್ರಿ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಮೈಸೂ ರಿನ ಇಲವಾಲ ಸಮೀಪದ ನಂಜಮ್ಮ ಜವರೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೈಸೂರು ತಾಲೂಕು ಗುಂಗ್ರಾಲ್ ಛತ್ರ ಗ್ರಾಮದವರಾದ ಎಂ.ಸತ್ಯನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಇವರಿಬ್ಬರೂ ಒಂದೇ ಸಮಯದಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. 2008ರ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಸ್ಥಳಾಂತರ ಗೊಂಡ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಎಂ.ಸತ್ಯನಾರಾಯಣ ಅವರು ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. ಇಲವಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಇವರು ಸ್ಥಳೀಯವಾಗಿ ಸತ್ಯಪ್ಪ ಎಂತಲೇ ಗುರುತಿಸಿಕೊಂಡಿ ದ್ದರು. ಸತ್ಯನಾರಾಯಣ ಅವರು ಪತ್ನಿ ಲಕ್ಷ್ಮೀದೇವಿ, ಪುತ್ರರಾದ ಅರುಣ್‍ಕುಮಾರ್ (ಜಿಪಂ ಸದಸ್ಯ), ಜಗದೀಶ್, ಪುತ್ರಿ ಸುನಿತಾ ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹಿತರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮವಾದ ಗುಂಗ್ರಾಲ್ ಛತ್ರದ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಶುಕ್ರವಾರ ಮಧ್ಯಾಹ್ನ 3ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಿಟಿಡಿ ಸಂತಾಪ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಸತ್ಯನಾರಾಯಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವು, ಕಾಂಗ್ರೆಸ್ ಮುಖಂಡ ಉಮಾಶಂಕರ್ ಮತ್ತಿತರರು ಸತ್ಯನಾರಾಯಣ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Translate »