ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ

April 19, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರತಿಷ್ಠೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.71.75ರಷ್ಟು ಮತದಾನ ದಾಖಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಜಿ.ಟಿ.ದೇವೇಗೌಡ ವಿಜಯ ಸಾಧಿ ಸಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರ ನಡುವೆ ಜಿದ್ದಾಜಿದ್ದಿ ನಡೆದಿತ್ತು.

ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ ಈ ಇಬ್ಬರು ನಾಯಕರೂ ಲೋಕಸಭಾ ಚುನಾವಣೆಯಲ್ಲಿ ಏರ್ಪಟ್ಟಿದ್ದ ಮೈತ್ರಿ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ತಮ್ಮ ವಿರಸ ಮರೆತು ಇಬ್ಬರೂ ಒಟ್ಟಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಜಂಟಿ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹೊಸ ಹುರುಪು, ಹುಮ್ಮಸ್ಸು ತುಂಬಿದ್ದರು. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪ ಸಿಂಹ ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರ್ಯಾಲಿ ನಡೆಸಿದ್ದರು.

ಸಚಿವ ಜಿ.ಟಿ.ದೇವೇಗೌಡ ಮತದಾನ: ಬೆಳಿಗ್ಗೆ 7.30ರ ವೇಳೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ತಮ್ಮ ಪತ್ನಿ ಲಲಿತಾ ದೇವೇಗೌಡ ಅವರೊಂದಿಗೆ ಗುಂಗ್ರಾಲ್ ಛತ್ರದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಳಿಗ್ಗೆ 7 ಗಂಟೆಗೆ ಮತದಾನ ಸ್ವಲ್ಪ ಚುರುಕಿನಿಂದ ಕೂಡಿ ದ್ದರೂ ಬರ ಬರುತ್ತಾ ಮಂದಗತಿಗೆ ಜಾರಿತು. ಬಿಸಿಲೇ ರುತ್ತಿದ್ದಂತೆ ಮತದಾನ ಇನ್ನಷ್ಟು ನೀರಸಗೊಂಡಿತ್ತು. ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆ 12 ಗಂಟೆ ವೇಳೆಗೆ ಶೇ.40 ದಾಟಿ ದ್ದರೂ, ಇನ್ನೂ ಕೆಲವು ಮತಗಟ್ಟೆಗಳಲ್ಲಿ ಶೇ.20ನ್ನೂ ಮೀರಿರಲಿಲ್ಲ. ಕ್ಷೇತ್ರದಲ್ಲಿ 9 ಗಂಟೆ ವೇಳೆಗೆ ಶೇ.5.81 ಮತ ದಾನ ನಡೆದಿತ್ತು. ಬೆಳಿಗ್ಗೆ 11ರ ವೇಳೆಗೆ ಶೇ.17.93, ಮಧ್ಯಾಹ್ನ 2 ಗಂಟೆಗೆ ಶೇ.27.81, ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಶೇ. 45.86ರಷ್ಟು ಮತದಾನ ನಡೆದಿರುವುದಾಗಿ ಅಂದಾಜಿಸಲಾಗಿತ್ತು.

ಮಧ್ಯಾಹ್ನದ ನಂತರ ಮತದಾನ ಸ್ವಲ್ಪ ಬಿರುಸು ಪಡೆದು ಕೊಂಡ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಸಂಜೆ 5ರ ವೇಳೆಗೆ ಶೇ.66.94ರಷ್ಟು ದಾಖಲಾಗಿತ್ತು.

ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.40ರ ಆಸುಪಾಸಿನಲ್ಲಿತ್ತು. ಬೀರಿಹುಂಡಿ ಗ್ರಾಮದ ಎರಡು ಮತಗಟ್ಟೆಗಳಲ್ಲಿ ಶೇ.40 ಮತದಾನ ಆಗಿತ್ತು.

ಎರಡು ಮತಗಟ್ಟೆಗಳಿರುವ ಕೇರ್ಗಳ್ಳಿಯಲ್ಲಿಯೂ ಶೇ. 40ರಷ್ಟು ಮತದಾನವಾಗಿತ್ತು. ಮರಿಯನಹುಂಡಿಯಲ್ಲಿ ಮಧ್ಯಾಹ್ನ 12ರ ಸಮಯದಲ್ಲಿ ಶೇ.45ರಷ್ಟು ಮತದಾನ ದಾಖಲಾಗಿತ್ತು. ದೊಡ್ಡಮಾರಗೌಡನಹಳ್ಳಿಯಲ್ಲಿ ಮಧ್ಯಾಹ್ನ 12.30ರ ವೇಳೆಗೆ ಶೇ.39ರಷ್ಟು ಮತದಾನವಾಗಿತ್ತು.

ಕಡಕೊಳದಲ್ಲಿ ಕೈಕೊಟ್ಟ ಮತ ಯಂತ್ರ

ಕಡಕೊಳದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟು ಕೆಲ ಕಾಲ ಮತದಾನ ಸ್ಥಗಿತವಾಗಿತ್ತು. ಮತಗಟ್ಟೆ ಸಂಖ್ಯೆ 319ರಲ್ಲಿ ಬೆಳಿಗ್ಗೆ 7 ಗಂಟೆಯಿಂದ 8.30ರವರೆಗೆ ಮತಯಂತ್ರ ಕೆಟ್ಟು ಮತದಾನ ಸ್ಥಗಿತವಾಗಿತ್ತು. 320ನೇ ಮತಗಟ್ಟೆಯಲ್ಲಿಯೂ ಸಂಜೆ 4.20ರಿಂದ 5.40ರವರೆಗೆ ಮತಯಂತ್ರ ಕೈಕೊಟ್ಟಿತ್ತು. ಈ ಬಗ್ಗೆ ತಾಪಂ ಸದಸ್ಯ ಶ್ರೀಕಂಠ ಚುನಾವಣಾ ಅಧಿಕಾರಿಗೆ ದೂರು ನೀಡಿದರು. ಮತಯಂತ್ರ ದುರಸ್ತಿಗೊಳಿಸಿದ ಬಳಿಕ ಮತದಾನ ಮುಂದುವರಿಯಿತು.

Translate »