ಬದುಗಳ ನಿರ್ಮಾಣದಿಂದ ಮಣ್ಣಿನ ತೇವಾಂಶ ಹೆಚ್ಚಳ
ಮೈಸೂರು ಗ್ರಾಮಾಂತರ

ಬದುಗಳ ನಿರ್ಮಾಣದಿಂದ ಮಣ್ಣಿನ ತೇವಾಂಶ ಹೆಚ್ಚಳ

May 25, 2020

ಹುಣಸೂರು, ಮೇ 24(ಕೆಕೆ)- ಮಣ್ಣಿನ ಸವಕಳಿ ಹಾಗೂ ಭೂಮಿಯಲ್ಲಿ ನೀರಿನ ತೇವಾಂಶಗಳನ್ನು ಹೆಚ್ಚಿಸಿಕೊಳ್ಳಲು ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕರ್ಣಕುಪ್ಪೆ ಗ್ರಾಪಂ ಪಿಡಿಓ ರಾಮಣ್ಣ ಕರೆ ನೀಡಿದರು.

ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ `ಬದು ನಿರ್ಮಾಣ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಣ್ಣಿನ ಸವಕಳಿ ನಿಯತ್ರಣದಿಂದ ತೇವಾಂಶ ಹೆಚ್ಚಾಗಿ ಬೆಳೆಯಲ್ಲಿ ಶೇ.15 ಅಧಿಕ ಇಳುವರಿ ಪಡೆಯಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಕಂದಕ ಬದು ನಿರ್ಮಿಸಿಕೊಳ್ಳಲು ಪ್ರತಿ ಎಕರೆಗೆ 18 ಸಾವಿರ ಆರ್ಥಿಕ ನೆರವು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಬದುವಿನ ಮೇಲೆ ಹುಲ್ಲು, ತೋಟಗಾರಿಕೆ, ಅರಣ್ಯ ಸಸಿಗಳನ್ನು ನಾಟಿ ಮಾಡಿದಲ್ಲಿ ಬದುಗಳ ಸ್ಥಿರೀಕರಣ ಹಾಗೂ ಆದಾಯ ಹೆಚ್ಚಿಸಿಕೊಳ್ಳಬಹುದು. ಇದಲ್ಲದೆ ನರೇಗಾ ಯೋಜನೆಯಡಿ ರೈತರು ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ನೀರುಗಾಲುವೆ, ದನಗಳ ಕೊಟ್ಟಿಗೆ ನಿರ್ಮಾಣ ಹಾಗೂ ತೋಟಗಾರಿಕೆಯಲ್ಲಿ ತೆಂಗಿನ ಸಸಿ ನೆಡಲು ನುಗ್ಗೆ, ನಿಂಬೆ ಮತ್ತು ಮಾವು ಬೆಳೆಗಳಿಗೆ ನರೇಗಾ ಯೋಜನೆಯಡಿ ಕೂಲಿ ವೆಚ್ಚವನ್ನು ಪಡೆಯಬಹುದು ಎಂದು ತಿಳಿಸಿದರು.

ಕರ್ಣಕುಪ್ಪೆ ಗ್ರಾಪಂ ಪಾಪಣ್ಣ ಮಾತನಾಡಿದರು. ಗ್ರಾಪಂ ಸದಸ್ಯರಾದ ಕುಮಾರಸ್ವಾಮಿ, ಮಹೇಶ್‍ಕುಮಾರ್, ಸಣ್ಣರಾಮೇಗೌಡ, ಸಿಬ್ಬಂದಿ ಚಂದ್ರೇಗೌಡ, ಸುರೇಶ, ನಿಂಗರಾಜಶೆಟ್ಟಿ, ಚಂದ್ರಶೆಟ್ಟಿ, ಕುಮಾರ್, ಮಂಜುನಾಥ್, ಸ್ವಯಂಸೇವಕ ಕೆ.ಪಿ.ರಾಘವೇಂದ್ರ ಹಾಗೂ ಫಲಾನುಭವಿ ರೈತ ಕೆಂಪನಾಯಕ ಹಾಜರಿದ್ದರು.

Translate »