ಮೈಸೂರಲ್ಲಿ ಹೆಚ್ಚಿದ ಕೊರೊನಾ ಸೋಂಕು ಒಂದೇ ದಿನ 260 ಪ್ರಕರಣ ದೃಢ
ಮೈಸೂರು

ಮೈಸೂರಲ್ಲಿ ಹೆಚ್ಚಿದ ಕೊರೊನಾ ಸೋಂಕು ಒಂದೇ ದಿನ 260 ಪ್ರಕರಣ ದೃಢ

April 5, 2021

ಮೈಸೂರು, ಏ.4(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಭಾನುವಾರ 260 ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ ಐದಾರು ತಿಂಗಳಲ್ಲಿ ಇದು ದಾಖಲೆ ಪ್ರಮಾಣದ ಏರಿಕೆಯಾಗಿದೆ. 2020ರ ಮಾರ್ಚ್ ಅಂತ್ಯದಲ್ಲಿ ವಕ್ಕರಿಸಿದ ಕೊರೊನಾ, ದಿನಕಳೆ ದಂತೆ ಎಲ್ಲೆಡೆ ಆವರಿಸಿಬಿಟ್ಟಿತು. ನಂತರ ಸೆಪ್ಟೆಂಬರ್ ಮಾಹೆ ಯಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಇತ್ತೀಚೆಗೆ ಎರಡಂಕಿಗೆ ಇಳಿದಿತ್ತು. ಆದರೆ ಕೊರೊನಾ ದಾಳಿಯಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಇದೀಗ 2ನೇ ಅಲೆ ಅಬ್ಬರಿಸುತ್ತಿದೆ. ಅಂತೆಯೇ ಮೈಸೂರಿನಲ್ಲೂ ಸೋಂಕಿ ತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ. ಕಳೆದ ಜುಲೈ 28ರಂದು ಸೋಂಕಿತರ ಸಂಖ್ಯೆ 200ರ ಗಡಿ(260 ಪ್ರಕರಣ) ದಾಟಿತ್ತು. ನಂತರದ ದಿನಗಳಲ್ಲಿ ಏರಿಳಿತವಾಗುತ್ತಿತ್ತು. ಇದೀಗ ಮತ್ತೆ ಆ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾವಿರ ಮೀರಿದ ಸಕ್ರಿಯ ಪ್ರಕರಣ: ವಾರದಿಂದ ಜಿಲ್ಲೆಯಲ್ಲಿ ನೂರಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದ್ದು, ಭಾನುವಾರ ಈ ಸಂಖ್ಯೆ ದುಪ್ಪಟ್ಟಾಗಿದೆ. ಇಂದಿನ 260 ಪ್ರಕರಣ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 56,524 ಜನರಿಗೆ ಸೋಂಕು ಬಾಧಿಸಿದೆ. ಇಂದು ಗುಣಮುಖರಾದ 97 ಮಂದಿ ಸೇರಿ ಇದುವರೆಗೆ 54,428 ಸೋಂಕಿತರು ಗುಣವಾಗಿದ್ದಾರೆ. ಇದರೊಂದಿಗೆ ಈವರೆಗಿನ ಒಟ್ಟು ಸಾವಿನ ಪ್ರಕರಣ(1,061) ಹೊರತುಪಡಿಸಿ ಇನ್ನು 1,035 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 385 ಸೋಂಕಿತರು ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಶುಶ್ರೂಷೆ ಪಡೆಯುತ್ತಿದ್ದು, ಉಳಿದವರು ಸರ್ಕಾರಿ ಹಾಗೂ ಖಾಸಗಿ ನಿಗಾ ಕೇಂದ್ರಗಳಲ್ಲಿ ದಾಖಲಾಗಿ ದ್ದಾರೆ. ಇವರಲ್ಲಿ 24 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವುದು ಗಮನಾರ್ಹ.

ರಾಜ್ಯದಲ್ಲಿ ಕೊರೊನಾ ಅಬ್ಬರ: ಮೈಸೂರು ಸೇರಿದಂತೆ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಶತಕ ದಾಟುತ್ತಿರುವುದು ಆತಂಕಕಾರಿ ಸಂಗತಿ ಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 20, ಬಳ್ಳಾರಿ 93, ಬೆಳಗಾವಿ 52, ಬೆಂಗಳೂರು ಗ್ರಾಮಾಂತರ 155, ಬೆಂಗಳೂರು ನಗರ 2,787, ಬೀದರ್ 147, ಚಾಮರಾಜನಗರ 15, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 17, ಚಿತ್ರದುರ್ಗ 29, ದಕ್ಷಿಣಕನ್ನಡ 83, ದಾವಣಗೆರೆ 23, ಧಾರವಾಡ 100, ಗದಗ 18, ಹಾಸನ 104, ಹಾವೇರಿ 07, ಕಲ ಬುರಗಿ 170, ಕೊಡಗು 14, ಕೋಲಾರ 20, ಕೊಪ್ಪಳ 10, ಮಂಡ್ಯ 79, ಮೈಸೂರು 260, ರಾಯಚೂರು 23, ರಾಮನಗರ 18, ಶಿವಮೊಗ್ಗ 36, ತುಮಕೂರು 107, ಉಡುಪಿ 73, ಉತ್ತರಕನ್ನಡ 49, ವಿಜಯಪುರ 16 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 18 ಸೇರಿದಂತೆ ಭಾನುವಾರ ರಾಜ್ಯದಲ್ಲಿ 4,553 ಹೊಸ ಪ್ರಕರಣ ವರದಿಯಾಗಿವೆ.

ಇದರೊಂದಿಗೆ ರಾಜ್ಯದ ಒಟ್ಟು ಸೋಂಕು ಬಾಧಿತರ ಸಂಖ್ಯೆ 10,15,155ಕ್ಕೆ ಏರಿಕೆ ಯಾಗಿದೆ. ಇಂದು ಗುಣಮುಖರಾದ 2,060 ಮಂದಿ ಸೇರಿ ಈವರೆಗೆ ಒಟ್ಟು 9,63,419 ಮಂದಿ ಸೋಂಕು ಮುಕ್ತರಾಗಿದ್ದಾರೆ. ಮತ್ತೆ 15 ಸೋಂಕಿತರು ಮೃತಪಟ್ಟಿರುವುದಾಗಿ ಭಾನುವಾರ ಮಾಹಿತಿ ನೀಡಲಾಗಿದ್ದು, ಒಟ್ಟು 12,625 ಮಂದಿ ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ. ಇನ್ನು ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆಯೂ 39,092ಕ್ಕೆ ಏರಿಕೆಯಾಗಿದೆ.

Translate »