ಪಾಕಿಸ್ತಾನ ಮಣಿಸಿದ ಭಾರತ
ಮೈಸೂರು

ಪಾಕಿಸ್ತಾನ ಮಣಿಸಿದ ಭಾರತ

June 17, 2019

ಮ್ಯಾಂಚೆಸ್ಟರ್:  ಇಂಡೋ-ಪಾಕ್ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯಿಸ್ ನಿಯಮದಡಿ 89 ರನ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ ಭಾರತ ಅಂಕ ಪಟ್ಟಿಯಲ್ಲಿ 3 ಜಯ, ಒಂದು ಡ್ರಾ ನೊಂ ದಿಗೆ 7 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ.

ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಿಡಿಲಬ್ಬರದ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿ ಸ್ತಾನ ವಿರುದ್ಧ ಭಾರತ ಗೆಲುವು ಸಾಧಿ ಸುವ ಮೂಲಕ ವಿಶ್ವಕಪ್‍ನಲ್ಲಿ ಸತತ 7ನೇ ಜಯ ಸಾಧಿಸಿ ಪಾಕ್ ವಿರುದ್ಧ ತನ್ನ ಅಜೇಯ ಯಾತ್ರೆ ಮುಂದುವರಿ ಸಿದೆ. ಮ್ಯಾಂಚೆಸ್ಟರ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭಾನುವಾರ ನಡೆದ ವಿಶ್ವ ಕಪ್‍ನ 22ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಭರ್ಜರಿ ಆರಂಭ ಒದಗಿಸಿ ಕೊಟ್ಟರು. ಇನ್ನಿಂಗ್ಸ್ ಆರಂಭದಿಂದಲೂ ಎಚ್ಚರಿಕೆಯ ಆಟವಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 136 ರನ್‍ಗಳ ಜೊತೆಯಾಟವಾಡಿತು.

ಕೆ.ಎಲ್.ರಾಹುಲ್ ತಾಳ್ಮೆಯ ಆಟ ಆಡಿದರೆ, ರೋಹಿತ್ ಶರ್ಮಾ ಪಾಕ್ ಬೌಲರ್‍ಗಳನ್ನು ಮನಬಂದಂತೆ ದಂಡಿಸಿ ಕೇವಲ 34 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಮತ್ತೊಂದೆಡೆ 3 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 57ರನ್ ಗಳಿಸಿದ್ದ ಕೆ.ಎಲ್.ರಾಹುಲ್ ವಾಹಬ್ ರೀಯಾಜ್‍ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿ ಆಟಕ್ಕೆ ಮೊರೆ ಹೋದರು. ಮತ್ತೊಂದೆಡೆ ರೋಹಿತ್ ತಂಡದ ಮೊತ್ತ ಹೆಚ್ಚಿಸುವ ಜೊತೆಗೆ ತಮ್ಮ 24ನೇ ಹಾಗೂ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ವೇಳೆ 113 ಎಸೆತಗಳಲ್ಲಿ 3 ಸಿಕ್ಸರ್, 13 ಬೌಂಡರಿಯೊಳಗೊಂಡ 140ರನ್ ಗಳಿಸಿದ್ದ ರೋಹಿತ್ ಶರ್ಮಾ, ಹಸನ್ ಆಲಿಗೆ ವಿಕೆಟ್ ಒಪ್ಪಿಸಿದರು.

ರೋಹಿತ್ ಔಟಾದ ಬಳಿಕ, ಬಿರುಸಿನ ಬ್ಯಾಟಿಂಗ್‍ಗಿಳಿದ ನಡೆಸಿದ ಕೊಹ್ಲಿ ಅರ್ಧಶತಕ ಪೂರೈಸಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಬಿರುಸಿನ 26ರನ್ ಗಳಿಸಿ ಔಟಾದರು. ಮಹೇಂದ್ರ ಸಿಂಗ್ ಧೋನಿ 1ರನ್‍ಗೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಪಂದ್ಯ ಪುನಃ ಆರಂಭವಾದ ನಂತರ ಕೊಹ್ಲಿ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಈ ವೇಳೆ ಕೊಹ್ಲಿ 7 ಬೌಂಡರಿ ಒಳಗೊಂಡ 77ರನ್ ಗಳಿಸಿದ್ದರು. ಉಳಿದಂತೆ ವಿಜಯ್ ಶಂಕರ್ 15, ಕೇದರ್ ಜಾಧವ್ 9ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336ರನ್ ಗಳಿಸಿತು.
ಪಾಕಿಸ್ತಾನ ಪರ ಬೌಲಿಂಗ್‍ನಲ್ಲಿ ಮಹಮ್ಮದ್ ಅಮೀರ್ 3, ಹಸನ್ ಆಲಿ ಹಾಗೂ ವಾಹಬ್ ರಿಯಾಜ್ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತ ನೀಡಿದ 337ರನ್‍ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 13ರನ್ ಆಗಿದ್ದಾಗಲೇ ಇಮಾಮ್ ಉಲ್ ಹಕ್ 7ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಫಕರ್ ಜಮಾನ್ ಹಾಗೂ ಬಾಬರ್ ಅಜಮ್ 104 ರನ್‍ಗಳ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಈ ವೇಳೆ 48ರನ್‍ಗಳಿಸಿದ್ದ ಬಾಬರ್ ಅಜಮ್ ಹಾಗೂ 62ರನ್ ಗಳಿಸಿದ್ದ ಫಕರ್ ಜಮಾನ್ ಒಬ್ಬರ ಹಿಂದೆ ಒಬ್ಬರು ಔÀಟಾದರು. ಅಲ್ಲದೇ ನಂತರ ಬಂದ ಮಹಮ್ಮದ್ ಹಫೀಜ್ 9 ಹಾಗೂ ಶೋಯೆಬ್ ಮಲ್ಲಿಕ್ ಶೂನ್ಯಕ್ಕೆ ಔಟಾಗುವ ಮೂಲಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಒಂದು ಹಂತದಲ್ಲಿ 117ರನ್‍ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ದಿಢೀರ್ ಕುಸಿತದಿಂದ 129ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ನಾಯಕ ಸರ್ಫರಾಜ್ ಅಹಮ್ಮದ್, ವಾಸೀಂ ತಂಡಕ್ಕೆ ಆಸರೆಯಾಗುತ್ತಿದ್ದ ವೇಳೆ ಸರ್ಫರಾಜ್ 12ರನ್ ಗಳಿಸಿ ಔಟಾದರು. ಪಾಕಿಸ್ತಾನ 35 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 165ರನ್ ಗಳಿಸಿದ ವೇಳೆ ಮತ್ತೆ ಮಳೆ ಬಂದ ಹಿನ್ನಲೆಯಲ್ಲಿ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.

ನಂತರ ಪಂದ್ಯ ಆರಂಭವಾದಾಗ ಪಾಕಿಸ್ತಾನಕ್ಕೆ ಡಕ್ವರ್ತ್ ಲೂಯಿಸ್ ನಿಯಮದಡಿ 40 ಓವರ್‍ಗಳಿಗೆ 302ರನ್‍ಗಳ ಗುರಿ ನೀಡಲಾಯಿತು. ಅದರಂತೆ ಪಾಕಿಸ್ತಾನ 30 ಎಸೆತಗಳಲ್ಲಿ 136 ರನ್ ಗಳಿಸಬೇಕಿತ್ತು. ಅಂತಿಮವಾಗಿ ಪಾಕಿಸ್ತಾನ 40 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 212ರನ್ ಗಳಿಸುವ ಮೂಲಕ 89ರನ್‍ಗಳಿಂದ ಭಾರತಕ್ಕೆ ಶರಣಾಯಿತು. ಉಳಿದಂತೆ ಪಾಕಿಸ್ತಾನದ ಪರ ಹೈಮದ್ ವಾಸೀಂ 46, ಶಬ್ದಬ್ ಖಾನ್ 20ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಬೌಲಿಂಗ್‍ನಲ್ಲಿ ವಿಜಯ್‍ಶಂಕರ್, ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Translate »