ಇಂದು ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್
ಮೈಸೂರು

ಇಂದು ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್

June 17, 2019

ಬೆಂಗಳೂರು:  ಕಾರ್ಯನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ(ಜೂ.17) ದೇಶಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಸೇವೆ ಸ್ಥಗಿತಗೊಳ್ಳಲಿದೆ.

ಪಶ್ಚಿಮಬಂಗಾಳದ ಕೊಲ್ಕತ್ತಾ ಎನ್ ಆರ್‍ಎಸ್ ವೈದ್ಯಕೀಯ ಮಹಾವಿದ್ಯಾ ಲಯದ ಕರ್ತವ್ಯನಿರತ ವೈದ್ಯರ ಮೇಲೆ ಗುಂಪೆÇಂದು ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ(ಜೂ.17) ಬೆಳಿಗ್ಗೆ 6ರಿಂದ ಜೂ.18ರ ಬೆಳಿಗ್ಗೆ 6ರವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ(ಓಪಿಡಿ), ಕ್ಲಿನಿಕ್‍ಗಳು ಹಾಗೂ ವೈದ್ಯಕೀಯ ಪ್ರಯೋಗಾಲಯಗಳು ಬಂದ್ ಆಗಲಿವೆ. ಆದರೆ ರೋಗಿಗಳ ಹಿತ ದೃಷ್ಟಿಯಿಂದ ತುರ್ತು ಅಪಘಾತ ವಿಭಾಗ (ಕ್ಯಾಷುಯಾಲಿಟಿ), ಎಮರ್ಜೆನ್ಸಿ ವಿಭಾಗ, ಒಳರೋಗಿ ಸೇವೆ ಹಾಗೂ ಶಸ್ತ್ರ ಚಿಕಿತ್ಸಾ ಸೇವೆಗಳನ್ನು ಎಂದಿನಂತೆ ಮುಂದುವರೆ ಸಲು ಐಎಂಎ ಸೂಚಿಸಿದೆ. ಖಾಸಗಿ ವೈದ್ಯರು ಹಮ್ಮಿಕೊಂಡಿರುವ ಮುಷ್ಕರದಿಂದಾಗಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿ ಸಿದೆ. ಆಸ್ಪತ್ರೆಗಳ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ರಜೆ ರದ್ದುಗೊಳಿಸಿ, ಪ್ರತಿಯೊಬ್ಬರೂ ಕರ್ತವ್ಯಕ್ಕೆ ಹಾಜರಾಗ ಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಜೂ.17ರಂದು ರಜೆ ಪಡೆಯದೆ, ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶ ಹೊರಡಿಸಿದ್ದಾರೆ. ಆದರೂ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆ ಬಂದ್ ಮಾಡಲು ನಿರ್ಧರಿಸಲಾ ಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಯಲ್ಲಿ ಓಪಿಡಿ ಬಂದ್ ಆಗುವುದಿಲ್ಲ, ಬದ ಲಾಗಿ ವೈದ್ಯರು ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲ ಗಳಿಂದ ತಿಳಿದುಬಂದಿದೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ 5 ದಿನಗಳ ಹಿಂದೆ ಆರಂಭ ವಾದ ವೈದ್ಯರ ಮುಷ್ಕರ ದೇಶಾದ್ಯಂತ ವ್ಯಾಪಿ ಸಿದೆ. ಪದೇ ಪದೆ ಈ ರೀತಿಯ ಘಟನೆ ನಡೆ ಯುತ್ತಿದ್ದು ವೈದ್ಯರು ಹಾಗೂ ವೈದ್ಯ ಸಿಬ್ಬಂ ದಿಗೆ ಸೂಕ್ತ ಭದ್ರತೆ
ಒದಗಿಸುವುದರ ಜೊತೆಗೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಗಟ್ಟಿಯಾಗಿದೆ. ಹಾಗೆಯೇ ಕಳೆದ ಶುಕ್ರವಾರ ರಾಜ್ಯಾದ್ಯಂತ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಜೂ.17ರಂದು ವೈದ್ಯರು ಸೇವೆ ಬಹಿಷ್ಕರಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿತ್ತು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ವೈದ್ಯರ ನಿರಂತರ ಹೋರಾಟದಿಂದಾಗಿ ರಾಜ್ಯ ಸರ್ಕಾರ 2009ರಲ್ಲಿ ವೈದ್ಯಕೀಯ ಸೇವಾ ಸಿಬ್ಬಂದಿ ವಿರುದ್ಧ ಹಿಂಸಾಚಾರ ನಡೆಸಿದರೆ ಹಾಗೂ ವೈದ್ಯಕೀಯ ಸೇವಾ ಸಂಸ್ಥೆಗಳ ಆಸ್ತಿಗೆ ಹಾನಿ ಉಂಟುಮಾಡಿದರೆ ಕ್ರಮ ಕೈಗೊಳ್ಳುವ ಕುರಿತು ಕಾಯ್ದೆ ರೂಪಿಸಿದೆ. ಆದರೆ ಆ ಕಾಯ್ದೆ ಕಾಗದಕ್ಕೆ ಮಾತ್ರ ಸೀಮಿತವಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ.

ಹಾಗಾಗಿ ವೈದ್ಯರ ಮೇಲಿನ ಹಲ್ಲೆ ಇನ್ನೂ ಮುಂದುವರೆದಿದೆ. ಹಲ್ಲೆ ನಡೆಸುವವರನ್ನು ಜಾಮೀನು ರಹಿತವಾಗಿ ಬಂಧಿಸಿ, 3 ವರ್ಷ ಸಜೆಗೆ ಒಳಪಡಿಸಬೇಕು ಎಂದು ಕಾಯ್ದೆಯಲ್ಲಿದೆ. ಆದರೆ 7 ವರ್ಷಕ್ಕಿಂತ ಕಡಿಮೆ ಸಜೆ ಇದ್ದರೆ ನ್ಯಾಯಾಲಯದಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಆದ್ದರಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ, ರೌಡಿ ಶೀಟರ್ ಪಟ್ಟಿಗೆ ಸೇರಿಸುವುದರ ಜೊತೆಗೆ ಕನಿಷ್ಠ 7 ವರ್ಷ ಶಿಕ್ಷೆ ವಿಧಿಸುವಂತಾಗಬೇಕೆಂಬುದು ವೈದ್ಯರ ಆಗ್ರಹವಾಗಿದೆ.

ಮೈಸೂರಲ್ಲೂ ಖಾಸಗಿ ಆಸ್ಪತ್ರೆ ಓಪಿಡಿ ಇಲ್ಲ

ಮೈಸೂರಲ್ಲೂ ಜೂ.17ರಂದು ಎಲ್ಲಾ ಖಾಸಗಿ ಆಸ್ಪತ್ರೆಗಳ ಓಪಿಡಿ, ಕ್ಲಿನಿಕ್, ವೈದ್ಯಕೀಯ ಪ್ರಯೋಗಾಲಯಗಳ ಸೇವೆ ಬಂದ್ ಆಗಲಿದೆ. ಆದರೆ ತುರ್ತು ಚಿಕಿತ್ಸಾ ವಿಭಾಗ ಹಾಗೂ ಒಳ ರೋಗಿಗಳ ಸೇವೆ ಎಂದಿನಂತೆ ಇರಲಿದೆ.

ಅಪಘಾತ, ಹೃದಯಾಘಾತ ಇನ್ನಿತರ ತುರ್ತು ಚಿಕಿತ್ಸೆ ಅಗತ್ಯವುಳ್ಳ ರೋಗಿಗಳಿಗೆ ಚಿಕಿತ್ಸೆ ದೊರಕಲಿದೆ. ಆದರೆ ಹೊರ ರೋಗಿಗಳಾಗಿ ಬರುವವರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಲಭ್ಯವಿರುವುದಿಲ್ಲ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳು ಬಂದ್ ಆಗಲಿರುವ ಹಿನ್ನೆಲೆಯಲ್ಲಿ ರೋಗಿಗಗಳಿಗೆ ತೊಂದರೆಯಾಗಬಹುದು. ಹಾಗಾಗಿ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯರು ಹಾಗೂ ನರ್ಸ್‍ಗಳನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆ, ಚೆಲುವಾಂಬ, ಜಯದೇವ ಹೃದ್ರೋಗ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಸರ್ಕಾರಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ರಜೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಆದಾಗ್ಯೂ ಏನಾದರೂ ವ್ಯತ್ಯಯವಾದರೆ ನನ್ನನ್ನೂ ಒಳಗೊಂಡಂತೆ ಆರೋಗ್ಯಾ ಧಿಕಾರಿಗಳು, ಪ್ರೋಗ್ರಾಮ್ ಆಫೀಸರ್ಸ್‍ಗಳೂ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದೇವೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Translate »