ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಜಯ
ಮೈಸೂರು

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಜಯ

January 20, 2020

ಬೆಂಗಳೂರು, ಜ.19- ಉಪನಾಯಕ ರೋಹಿತ್ ಶರ್ಮಾ ಅಬ್ಬರದ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟೇಲಿಯಾ ವಿರುದ್ಧ ಭಾರತ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.

ಇಲ್ಲಿನ ಪಿ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 287 ರನ್‍ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಜೋಡಿ ಮೊದಲ ವಿಕೆಟ್‍ಗೆ 69 ರನ್‍ಗಳ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ 27 ಎಸೆತ ಗಳಲ್ಲಿ 2 ಬೌಂಡರಿಯೊಂದಿಗೆ 19 ರನ್‍ಗಳಿಸಿದ್ದ ರಾಹುಲ್ ಪೆವಿಲಿಯನ್ ಸೇರಿಕೊಂಡರು. ನಂತರ ರೋಹಿತ್‍ಗೆ ಜೊತೆ ಯಾದ ನಾಯಕ ವಿರಾಟ್ ಕೊಹ್ಲಿ ಆಸೀಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿ 137 ರನ್‍ಗಳ ಬೃಹತ್ ಜೊತೆಯಾಟದೊಂದಿಗೆ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರು.

ರೋಹಿತ್ ಶತಕ: ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಇವರು 128 ಎಸೆತದಲ್ಲಿ 8 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿಂದ 119 ರನ್ ಗಳಿಸಿ ಏಕದಿನ ಪಂದ್ಯದಲ್ಲಿ 29ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಭಾರತ ಪರವಾಗಿ ವರ್ಷ ಆರಂಭದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರೋಹಿತ್ ಔಟಾದ ಬಳಿಕ ಜೊತೆಯಾದ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 68 ರನ್‍ಗಳ ಜೊತೆಯಾಟವಾಡಿದರು. ನಾಯಕ ಕೊಹ್ಲಿ 91 ಎಸೆತದಲ್ಲಿ 8 ಬೌಂಡರಿಯೊಂದಿಗೆ 89 ರನ್ ಗಳಿಸಿದರು. ಅಂತಿಮವಾಗಿ ಭಾರತ 47.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ತಂಡದ ಪರವಾಗಿ ಶ್ರೇಯಸ್ ಅಯ್ಯರ್ 35 ಎಸೆತದಲ್ಲಿ 6 ಬೌಂಡರಿ, ಒಂದು ಸಿಕ್ಸರ್‍ನೊಂದಿಗೆ ಅಜೇಯ 44 ಹಾಗೂ ಮನೀಶ್‍ಪಾಂಡೆ ಅಜೇಯ 8 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‍ನಲ್ಲಿ ಅಷ್ಟನ್ ಅಗರ್, ಆಡಮ್ ಝಾಂಪ, ಜೋಶ್ ಹಜಲ್‍ವುಡ್ ತಲಾ ಒಂದೊಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾ 286/9: ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286ರನ್ ಪೇರಿಸಿತು. ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಕೇವಲ 3 ರನ್ ಗಳಿಸಿ ಬೇಗನೇ ಔಟಾದರು. ತಂಡದ ಮೊತ್ತ 46 ರನ್ ಆಗಿದ್ದ ವೇಳೆ ನಾಯಕ ಆ್ಯರೋನ್ ಫಿಂಚ್ 19 ರನ್ ಗಳಿಸಿ ರನೌಟ್‍ಗೆ ಬಲಿಯಾದರು. ಆದರೆ, ಈ ವೇಳೆ ಜೊತೆಯಾದ ಸ್ಟೀವ್‍ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ 3ನೇ ವಿಕೆಟ್‍ಗೆ 127 ರನ್‍ಗಳ ಜೊತೆಯಾಟವಾಡುವ ಮೂಲಕ ಬೃಹತ್ ಮೊತ್ತದ ಮುನ್ಸೂಚನೆ ನೀಡಿದರು. ಈ ವೇಳೆ ಚೊಚ್ಚಲ ಅರ್ಧಶತಕ ಸಿಡಿಸಿ 54 ರನ್ ಗಳಿಸಿದ್ದ ಲಾಬುಶೇನ್ ನಾಯಕ ವಿರಾಟ್‍ಕೊಹ್ಲಿ ಅವರ ಅದ್ಭುತ ಕ್ಯಾಚ್‍ಗೆ ಬಲಿಯಾದರು. ನಂತರ ಬಂದ ಮಿಚಲ್‍ಸ್ಟಾಕ್ ಶೂನ್ಯಕ್ಕೆ ನಿರ್ಗಮಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಭಾರತೀಯ ಬೌಲರ್‍ಗಳನ್ನು ದಂಡಿಸಿದ ಸ್ಟೀವ್‍ಸ್ಮಿತ್ 132 ಎಸೆತದಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 131 ರನ್ ಗಳಿಸಿದರು. ಉಳಿದಂತೆ ಆಲ್ಯಕ್ಸ್ ಕ್ಯಾರಿ 35 ರನ್ ಗಳಿಸಿದರು. ಭಾರತದ ಪರ ಬೌಲಿಂಗ್‍ನಲ್ಲಿ ಮಹಮದ್ ಶಮಿ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ಜಡೇಜಾ 2, ಸೈನಿ ಹಾಗೂ ಕುಲ್ದೀಪ್‍ಯಾದವ್ ತಲಾ ಒಂದು ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಾಯಕ ವಿರಾಟ್‍ಕೊಹ್ಲಿ ಸರಣಿ ಶ್ರೇಷ್ಠ ಹಾಗೂ ಪಂದ್ಯದಲ್ಲಿ ಶತಕ ಸಿಡಿಸಿದ ಉಪನಾಯಕ ರೋಹಿತ್‍ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Translate »