ಇಂದಿರಾ ಕ್ಯಾಂಟೀನ್ ವಂಚನೆ: ಶಾಸಕ ರಾಮದಾಸ್ ಆರೋಪ
ಮೈಸೂರು

ಇಂದಿರಾ ಕ್ಯಾಂಟೀನ್ ವಂಚನೆ: ಶಾಸಕ ರಾಮದಾಸ್ ಆರೋಪ

June 10, 2021

ಮೈಸೂರು,ಜೂ.9(ಎಂಟಿವೈ)- ಇಂದಿರಾ ಕ್ಯಾಂಟೀನ್ ಮೂಲಕ ಕೊರೊನಾ ಸಂತ್ರಸ್ತರಿಗೆ ಆಹಾರ ಸರಬ ರಾಜು ಮಾಡುವುದರಲ್ಲಿ ಸುಳ್ಳು ಲೆಕ್ಕ ನೀಡಿ ವಂಚಿಸ ಲಾಗುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ವಿವಿಧೆಡೆ ಇರುವ ಇಂದಿರಾ ಕ್ಯಾಂಟೀನ್‍ಗಳು, ಅಡುಗೆ ಮನೆ ಹಾಗೂ ಗೋದಾ ಮಿಗೆ ತೆರಳಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಮೈಸೂರಲ್ಲಿರುವ ಇಂದಿರಾ ಕ್ಯಾಂಟೀನ್‍ಗಳ ಕುರಿತು ದೂರು ಕೇಳಿ ಬಂದ ಹಿನ್ನೆಲೆ ಯಲ್ಲಿ ಇಂದು ಎಲ್ಲಾ ಇಂದಿರಾ ಕ್ಯಾಂಟೀನ್, ಅಡುಗೆ ತಯಾರಿಕಾ ಘಟಕ ಹಾಗೂ ಅಡುಗೆಗೆ ಬಳಸುವ ಪದಾರ್ಥಗಳ ಗುಣಮಟ್ಟ ಪರಿಶೀಲಿಸಲು ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿದ್ದೆ. ಒಂದೇ ಸ್ಥಳದಲ್ಲಿ ಅಡುಗೆ ಮಾಡಿ, ನಗರದ 11 ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪದಾರ್ಥ ಪೂರೈಸಲಾಗುತ್ತದೆ. ಅರಮನೆ ಎದುರಿನ ಕಾಡಾ ಕಚೇರಿಯ ಆವರಣ, ಕೆ.ಆರ್. ಆಸ್ಪತ್ರೆ, ಬನ್ನಿಮಂಟಪ ಬಳಿಯ ಜೋಡಿ ತೆಂಗಿನಮರ ರಸ್ತೆ, ಕುಂಬಾರಕೊಪ್ಪಲು, ಶಾರದಾದೇವಿನಗರ, ಸಿಲ್ಕ್ ಫ್ಯಾಕ್ಟರಿ, ಸಿವೇಜ್ ಫಾರಂ, ಆಲನಹಳ್ಳಿ, ಗ್ರಾಮಾಂತರ ಬಸ್ ನಿಲ್ದಾಣದ ಎದುರು, ತ್ರಿವೇಣಿ ಸರ್ಕಲ್, ಅಜೀಜ್ ಸೇಠ್ ರಸ್ತೆಯಲ್ಲಿ ಇರುವ ಕ್ಯಾಂಟೀನ್‍ಗಳಿಗೆ ಸಿದ್ಧ ಆಹಾರ ಸರಬರಾಜಾಗುತ್ತಿದೆ ಎಂದು ವಿವರಿಸಿದರು.

ಆದರೆ ಪ್ರತಿ ಕ್ಯಾಂಟೀನ್‍ನಲ್ಲಿ ವಿತರಣೆಯಾದ ಊಟದ ಪ್ರಮಾಣಕ್ಕೂ ಹಾಗೂ ಲೆಕ್ಕದ ಪುಸ್ತಕದಲ್ಲಿ ರುವುದಕ್ಕೂ ಭಾರೀ ವ್ಯತ್ಯಾಸವಿದೆ. ಈ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದಾಗ ನಿತ್ಯ ಬೆಳಿಗ್ಗೆ 11.30ಕ್ಕೆ ಒಂದು ಪಾಳಿ ಹಾಗೂ ಮಧ್ಯಾಹ್ನ 2ಕ್ಕೆ ಮತ್ತೊಂದು ಪಾಳಿಯಲ್ಲಿ ಸರಬರಾಜು ಮಾಡಲಾಗುತ್ತಿದೆ. ಲೆಕ್ಕದ ಪುಸ್ತಕಕ್ಕೂ, ಊಟ ನೀಡಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕ್ಯಾಂಟೀನ್ ಉಸ್ತುವಾರಿ ಹೇಳಿದ್ದಾರೆ. ಆದರೆ ಮೇಲ್ವಿಚಾರಕರು ಮಾತ್ರ ಮಧ್ಯಾಹ್ನ ಒಂದು ಬಾರಿ ಯಷ್ಟೇ ಆಹಾರ ಸರಬರಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಇಂದಿರಾ ಕ್ಯಾಂಟೀನ್‍ನಿಂದ ಕೋವಿಡ್ ಸಂತ್ರಸ್ತರಿಗೆ ಊಟ ವಿತರಿಸುವುದರಲ್ಲಿ ಅವ್ಯವಹಾರ ನಡೆದಿರುವುದು ದೃಢಪಟ್ಟಿದೆ ಎಂದರು.

ನಗರದ 11 ಇಂದಿರಾ ಕ್ಯಾಂಟೀನ್‍ಗಳಿಗೆ ನಿತ್ಯ 2 ಬಾರಿ 160 ಕೆಜಿ ಅನ್ನ ಕಳಿಸಿರುವುದಾಗಿ ಲೆಕ್ಕ ತೋರಿಸ ಲಾಗಿದೆ. ಆದರೆ, ಕೇವಲ 46 ಕೆಜಿ ಅನ್ನವನ್ನಷ್ಟೇ ಕ್ಯಾಂಟೀನ್‍ಗಳಿಗೆ ಸರಬರಾಜು ಮಾಡಲಾಗಿದೆ. ಒಂದು ಪಾಳಿಗೇ 114 ಕೆಜಿ ಅನ್ನದ (400 ಜನ ಊಟ ಮಾಡ ಬಲ್ಲಷ್ಟು) ತಪ್ಪು ಲೆಕ್ಕ ಕೊಡುತ್ತಿರುವುದು ಅಕ್ರಮದ ಶಂಕೆ ಹೆಚ್ಚಿಸಿದೆ. ಎಲ್ಲಾ 11 ಇಂದಿರಾ ಕ್ಯಾಂಟೀನ್ ಗಳಲ್ಲೂ ಇದೇ ರೀತಿ ಸುಳ್ಳು ಲೆಕ್ಕ ನೀಡುತ್ತಿರುವ ಸಂಶಯವಿದೆ ಎಂದು ದೂರಿದರು.

ಆಲನಹಳ್ಳಿಯ ಅಡುಗೆ ಮನೆಯಿಂದ ಕಾಡಾ ಕಚೇರಿ ಆವರಣದ ಕ್ಯಾಂಟೀನ್‍ಗೆ ನಿತ್ಯ ಊಟ ಸರಬ ರಾಜಾಗುತ್ತಿದೆ. ಬೆಳಿಗ್ಗೆ-ಮಧ್ಯಾಹ್ನ ಸೇರಿ ಒಟ್ಟು 520 ಜನ ಊಟ ಮಾಡುತ್ತಿದ್ದಾರೆ. ರಾತ್ರಿಯೂ 200 ಜನರಿಗೆ ಊಟ ನೀಡಲಾಗುತ್ತಿದೆ ಎಂದು ಲೆಕ್ಕ ಬರೆದಿದ್ದಾರೆ. ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ವಿತರಣೆಗೆ ಟೋಕನ್ ಪದ್ಧತಿ ಅನುಸರಿಸಬೇಕಿದೆ. ಆದರೆ ಮೈಸೂರಲ್ಲಿ ಯಾವುದೇ ಕ್ಯಾಂಟೀನ್‍ನಲ್ಲೂ ಟೋಕನ್ ವ್ಯವಸ್ಥೆ ಜಾರಿಯಲ್ಲಿಲ್ಲ. ಸಿಸಿ ಕ್ಯಾಮರಾ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಲೋಪ ಗಳನ್ನು ತೆರೆದಿಟ್ಟರು. ಕಾಡಾ ಕಚೇರಿ ಆವರಣದ ಇಂದಿರಾ ಕ್ಯಾಂಟೀನ್‍ನಲ್ಲಿ ಸರದಿ ಸಾಲಿನಲ್ಲಿ ನಿಂತು ಊಟ ಮಾಡಿ ಗುಣಮಟ್ಟ ಪರಿಶೀಲಿಸಿದೆ. ಇಂದು 137 ಜನರಿಗೆ ಬಡಿಸುತ್ತಿದ್ದಂತೆಯೇ ಅನ್ನ ಖಾಲಿ ಯಾಯಿತು. ಮತ್ತೆ ಊಟ ಸರಬರಾಜು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಡುಗೆ ಮನೆಯಿಂದ ಪ್ರತಿ ಇಂದಿರಾ ಕ್ಯಾಂಟೀನ್‍ಗೆ ಒಂದು ಪಾಳಿಗೆ 520 ಜನಕ್ಕೆ ಊಟ ಕಳುಹಿಸಿರು ವುದಾಗಿ ಲೆಕ್ಕ ಬರೆದಿದ್ದರೂ ಕೇವಲ 120-130 ಜನರಿಗಷ್ಟೇ ಊಟ ಸಿಕ್ಕಿದೆ ಎಂದು ಅಂಕಿ ಅಂಶ ನೀಡಿದರು. ಆಹಾರ ತಯಾರಿಕೆಗೆ ಬಳಸುತ್ತಿರುವ ದಿನಸಿ-ತರಕಾರಿ ಗುಣಮಟ್ಟದ್ದಾಗಿಲ್ಲ. ಗೋದಾಮಿ ನಲ್ಲಿರುವ ಫ್ರಿಡ್ಜ್ ಸರಿಯಿಲ್ಲ. ಅದರಲ್ಲಿಟ್ಟ ತರಕಾರಿಗಳು ಕೊಳೆತಿವೆ. ಮಧ್ಯಾಹ್ನದ ಊಟಕ್ಕೆ ತರಕಾರಿ ಸಾಂಬಾರ್ ಎಂದು ದಾಖಲಿಸಿದ್ದರೂ ಕುಂಬಳಕಾಯಿ ಮತ್ತು ಟೊಮಟೋ ಮಾತ್ರ ಬಳಸಿದ್ದಾರೆ. ಅಕ್ಕಿಯೂ ಕಳಪೆ ಗುಣಮಟ್ಟದ್ದಾಗಿದೆ. ಕಳಪೆ ಪಾಮ್ ಆಯಿಲ್ ಬಳಸ ಲಾಗುತ್ತಿದೆ. ಇಂದಿರಾ ಕ್ಯಾಂಟೀನ್‍ಗಳಲ್ಲಿ ಆಹಾರ ಸ್ವೀಕರಿಸುವವರಲ್ಲಿ ಬಹುತೇಕರು ಬಡವರು, ವಸತಿ ಹೀನರಾಗಿದ್ದಾರೆ. ಅವರ ಆರೋಗ್ಯದ ಕಾಳಜಿ ಎಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯುವೆ ಎಂದರು.

Translate »