ಕಾಂಗ್ರೆಸ್‍ನಿಂದ ಹಿಂದುಳಿದವರಿಗೆ ಅನ್ಯಾಯ: ಕೆ.ಪಿ.ನಂಜುಂಡಿ ಆರೋಪ
ಮಂಡ್ಯ

ಕಾಂಗ್ರೆಸ್‍ನಿಂದ ಹಿಂದುಳಿದವರಿಗೆ ಅನ್ಯಾಯ: ಕೆ.ಪಿ.ನಂಜುಂಡಿ ಆರೋಪ

August 29, 2018

ಮಂಡ್ಯ: ಅಹಿಂದ ವರ್ಗವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ, ಹಿಂದುಳಿದವರಿಗೆ ಹಿಂದಿನಿಂದಲೂ ಭಾರೀ ಅನ್ಯಾಯ ಮಾಡಿಕೊಂಡೆ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದವರನ್ನು ಕಾಲು ಕಸದಂತೆ ನಡೆಸಿಕೊಂಡಿತು. ಸಿದ್ದ ರಾಮಯ್ಯ ಕಾಯಕ (ವಿಶ್ವಕರ್ಮ) ಸಮಾಜವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದರು ಎಂದು ದೂರಿದರು.

ಕಾಂಗ್ರೆಸ್ ಪಕ್ಷವನ್ನು ಮತದಾರರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು. ಬಿಜೆಪಿಗೆ ಮತ ಹಾಕಿ ಶಕ್ತಿ ತುಂಬ ಬೇಕು ಎಂದ ಅವರು ಈ ಬಾರಿ ಮಂಡ್ಯ ನಗರಸಭೆ ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ ನಾರಾಯಣ ಮಾತನಾಡಿ, ಮದ್ದೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ, ಪ್ರಸ್ತುತ ಸಚಿವರಾಗಿರುವ ಡಿ.ಸಿ.ತಮ್ಮಣ್ಣ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧ ಜನಸಾಮಾನ್ಯರು ಸಿಡಿದೆದ್ದಿದ್ದಾರೆ ಎಂದು ತಿಳಿದು ನೀತಿಸಂಹಿತೆ ಇದ್ದರೂ ಕೆಮ್ಮಣ್ಣು ಕಾಲುವೆ ದುರಸ್ತಿಗೆ ಮುಂದಾಗಿದ್ದರು. ಇದನ್ನು ತಿಳಿದ ಸ್ಥಳೀಯ ಬಿಜೆಪಿ ಅಭ್ಯರ್ಥಿ ಹಾಗೂ ಚುನಾವಣಾ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುದ್ದಲಿ ಪೂಜೆ ನಿಲ್ಲಿಸಿದ್ದಾರೆ. ಸಚಿವರಾಗಿರುವ ತಮ್ಮಣ್ಣ ಅವರಿಗೆ ನೀತಿ ಸಂಹಿತೆಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲೂ ಕಳೆದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸಚಿವ ಸಿ.ಎಸ್. ಪುಟ್ಟರಾಜು ಅವರ ವಿರುದ್ಧವೂ ವಿರೋಧ ವ್ಯಕ್ತವಾಗಿದೆ. ಇನ್ನು ನಾಗಮಂಗಲ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಹಾಗಾಗಿ ಬಿಜೆಪಿ ಪರ ಜನತೆ ಒಲವು ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಡಿಸಿಎಂ ಆರ್.ಅಶೋಕ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಪರ ಮತದಾರರು ಒಲವು ತೋರಿದ್ದಾರೆ. ಅಲ್ಲದೆ, ಜೆಡಿಎಸ್- ಕಾಂಗ್ರೆಸ್ ಕಿತ್ತಾಟದಿಂದಾಗಿ ಬಿಜೆಪಿಗೆ ಅಧಿಕಾರ ಸಿಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಮುಖಂಡರಾದ ಮಲ್ಲಿಕಾರ್ಜುನ್ ಇತರರಿದ್ದರು.

Translate »