ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ
ಮಂಡ್ಯ

ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ

August 29, 2018

ಮಂಡ್ಯ:  ಒಂದಾನೊಂದು ಕಾಲದಲ್ಲಿ ಮಂಡ್ಯ ಜನರ ಎಲ್ಲಾ ರೀತಿಯ ವ್ಯವಹಾರಿಕ ಕೇಂದ್ರವಾಗಿದ್ದ ನಗರದ ಹಳೇ ತಾಲೂಕು ಕಚೇರಿ ಆವರಣ ಈಗ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮಂಡ್ಯ ನಗರದ ಹೃದಯ ಭಾಗದಲ್ಲಿ ರುವ ಈ ಜಾಗ ಈಗ ಪಾಳು ಬಿದ್ದ ಜಾಗವನ್ನೂ ನಾಚಿಸುವಂತಿದೆ. 1983ರ ಬಳಿಕ ತಾಲೂಕು ಆಡಳಿತದ ಎಲ್ಲ ವ್ಯವಹಾರಗಳು ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಟ್ಟಡಗಳಿಗೆ ವರ್ಗಾವಣೆಯಾದ ನಂತರ ಈ ಜಾಗವೀಗ ಅನಾಥವಾಗಿ ಬಿದ್ದಿದ್ದು, ಅಕ್ರಮ ಚಟುವಟಿಕೆಯ ಆಶ್ರಯ ತಾಣವಾಗಿದೆ. ಅನೈರ್ಮಲ್ಯ ಮಲಮೂತ್ರ ವಿಸರ್ಜನೆಯ ತಿಪ್ಪೆಗುಂಡಿಯಾಗಿದೆ.

ಪೇಟೆ ಬೀದಿಗೆ ಹೊಂದಿಕೊಂಡಂತಿರುವ ಈ ಹಳೇ ತಾಲೂಕು ಕಚೇರಿ ಆವರಣದಲ್ಲಿ ಈಗಲೂ ನೂರಾರು ಭಕ್ತರು ಬಂದು ಹೋಗುವ ಚಾಮುಂಡೇ ಶ್ವರಿ ದೇವಸ್ಥಾನ, ಹಳೇ ಟೌನ್‍ನ ನೂರಾರು ಮಕ್ಕಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಹಾಲುಗಲ್ಲದ ಮಕ್ಕಳಿಗಾಗಿ ತೆರೆಯಲಾಗಿ ರುವ 3 ಅಂಗನವಾಡಿ ಕೇಂದ್ರಗಳು, ಮಂಡ್ಯ ಕಸಬಾ ಗ್ರಾಪಂ ಕಾರ್ಯಾಲಯ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ವಾಟರ್ ಟ್ಯಾಂಕ್ ಸೇರಿದಂತೆ ಹಲವು ಜನೋಪಯೋಗಿ ವ್ಯವಹಾರಿಕ ಕೇಂದ್ರಗಳಿವೆ. ಆದರೆ ಈ ಎಲ್ಲಾ ಕಚೇರಿ, ಕಟ್ಟಡಗಳ ಸುತ್ತಮುತ್ತಲು ಮಲಮೂತ್ರ ವಿಸರ್ಜನೆಯ ಗುಂಡಿಗಳು, ಕಸದ ರಾಶಿಗಳು ರಾರಾಜಿಸುತ್ತಿವೆ. ಕಾಡು ಮೇಡನ್ನೂ ನಾಚಿಸುವಂತೆ ಎದೆಯುದ್ದ ಗಿಡಗಂಟಿಗಳು ಬೆಳೆದು ನಿಂತಿವೆ. ಹಾವು ಚೇಳು, ವಿಷಜಂತು, ನಾಯಿ, ನರಿ, ಹಂದಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ.

ಮಂಡ್ಯ ಹಳೇ ಟೌನ್ ಮತ್ತು ರೈಲ್ವೆ ಹಳಿಯ ಮಧ್ಯಭಾಗದಲ್ಲಿರುವ ಈ ಜಾಗ ಬಹುವನ್ನು ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮರತೆ ಬಿಟ್ಟಿರು ವಂತೆ ಕಾಣುತ್ತಿದೆ. ಇಂತಹ ಮೌಲ್ಯಯುತ ಜಾಗವನ್ನು ಜನೋಪಯೋಗಿ ತಾಣವ ನ್ನಾಗಿಸುವಂತೆ ಹಲವು ಜನಪರ ನಾಯಕರು ಹೋರಾಟ ಮಾಡಿದ್ದರು. ಇದರ ಫಲವಾಗಿ ಅಂದಿನ ಜಿಲ್ಲಾಧಿಕಾರಿ ಎಸ್.ಎಂ. ಜಾಮ್‍ದಾರ್ ಅವರು ಈ ಜಾಗವನ್ನು ಮಾರ್ಕೇಟ್ ಸೇರಿದಂತೆ ಜನೋಪ ಯೋಗಿ ಕಟ್ಟಡಗಳ ತಾಣವನ್ನಾಗಿಸುವ ಯೋಜನೆ ರೂಪಿಸಿದ್ದರು.

ಅದರಂತೆಯೇ ಇತ್ತೀಚೆಗೆ ನೂರಾರು ಮಾರ್ಕೇಟ್ ಮಳಿಗೆಗಳನ್ನೂ ಸಹ ನಿರ್ಮಾಣ ಮಾಡಲಾಗಿತ್ತು. ಆದರೆ ವ್ಯಾಪಾರಸ್ಥರ ಇಚ್ಚಾಸಕ್ತಿ ಕೊರತೆ, ಆಡಳಿತ ವ್ಯವಸ್ಥೆಯ ವೈಫಲ್ಯದಿಂದಾಗಿ ಈ ಮಾರ್ಕೇಟ್ ಮಳಿಗೆಗಳೆಲ್ಲಾ ಈಗಲೂ ಪಾಳು ಬಿದ್ದು, ಪುಂಡ ಪೋಕರಿಗಳ ಅಡ್ಡಗಳಾಗಿ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಅನಾಥರು ಮಾನಸಿಕ ಅಸ್ವಸ್ಥರ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

ಶಿಥಿಲಾವಸ್ಥೆ ಕಟ್ಟಡದೊಳಗೇ ಪಾಠ: ಈಗಲೋ ಆಗಲೋ ಮುರಿದು ಬೀಳುವಂತಿ ರುವ ಕಟ್ಟಡಗಳಲ್ಲಿಯೇ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಪಾಠ-ಪ್ರವಚನ ಮಾಡಲಾಗುತ್ತಿದೆ. ಕಟ್ಟಡದ ಮಂಗಳೂರು ಹೆಂಚುಗಳೆಲ್ಲಾ ಒಡೆದಿದ್ದು ಮಳೆ ಬಂದು ನೀರು ಸೋರುವ ನಡುವೆಯೇ ಪಾಠ ಕೇಳುವ ದಯನೀಯ ಸ್ಥಿತಿ ಹಾಲುಗಲ್ಲದ ಮಕ್ಕಳದ್ದಾಗಿದೆ. ಜಿಲ್ಲಾ ಕೇಂದ್ರದೊಳಗಿನ ಈ ಶಾಲಾ ಮಕ್ಕಳ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.

ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ: ಜನೋಪಯೋಗಿ, ಮೌಲ್ಯಯುತ ತಾಣವಾದ ಹಳೇ ತಾಲೂಕು ಕಚೇರಿ ತಾಣವನ್ನು ಅಭಿವೃದ್ಧಿ ಪಡಿಸುವುದನ್ನೇ ಜಿಲ್ಲಾಡಳಿತ ಮರೆತೇ ಬಿಟ್ಟಿದೆ ಎಂದು ಪತ್ರಕರ್ತ ಕೌಡ್ಲೆಚನ್ನಪ್ಪ ಆರೋಪಿಸಿದ್ದಾರೆ.

ಈ ಅವ್ಯವಸ್ಥೆಯ ಬಗ್ಗೆ ಹಲವು ಭಾರೀ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಈಗಿನ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೂ ದೂರು ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೂ ಮನವಿ ಸಲ್ಲಿಸಲಾಗಿದೆ ಯಾದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆಪಾದಿಸಿದ್ದಾರೆ.

ಇನ್ನು ಮುಂದಾದರೂ ಜಿಲ್ಲಾಡಳಿತ ಹಳೇ ತಾಲೂಕು ಕಚೇರಿ ಆವರಣವನ್ನು ಶುಚಿತ್ವಗೊಳಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿ ಸಬೇಕು. ಜನೋಪಯೋಗಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Translate »